Advertisement

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

12:40 AM Sep 30, 2023 | Team Udayavani |

ಮಂಗಳೂರು/ಉಡುಪಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ ಶುಕ್ರವಾರದ ಬಂದ್‌ಗೆ ರಾಜ್ಯದ ವಿವಿಧ ಕಡೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದರೂ, ಕರಾವಳಿಯಲ್ಲಿ ಬಂದ್‌ ಇರಲಿಲ್ಲ. ಜನ ಜೀವನ, ವಾಹನ ಸಂಚಾರ ಯಥಾಸ್ಥಿತಿಯಲ್ಲಿತ್ತು.

Advertisement

ದ.ಕ. ಜಿಲ್ಲೆಯಲ್ಲಿ ಸಂಘಟನೆಗಳು ಕೇವಲ ನೈತಿಕ ಬೆಂಬಲವನ್ನಷ್ಟೇ ನೀಡಿದ್ದರಿಂದ ಜನ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಯಾವುದೇ ಸಂಘಟನೆಗಳಿಂದ ಪ್ರತಿಭಟನೆ, ರಸ್ತೆ ತಡೆಗಳು ನಡೆದಿಲ್ಲ. ಶಾಲಾ-ಕಾಲೇಜು, ಬ್ಯಾಂಕ್‌, ಸರಕಾರಿ, ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯಾಚರಿಸಿತ್ತು. ಜಿಲ್ಲಾ ವ್ಯಾಪ್ತಿಯಲ್ಲಿ ಬಸ್‌ ಸೇರಿದಂತೆ ವಾಹನಗಳ ಸಂಚಾರವೂ ಅಭಾದಿತವಾಗಿತ್ತು. ಅಂಗಡಿ, ಹೊಟೇಲ್‌, ಮಳಿಗೆಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.

ಬೆಂಗಳೂರು, ಮೈಸೂರು ಭಾಗಕ್ಕೆ ಹಗಲು ವೇಳೆಯಲ್ಲಿ ಸಾಮಾನ್ಯ ಕೆಎಸ್ಸಾರ್ಟಿಸಿ ಬಸ್‌ಗಳು ಸಂಚರಿಸಿವೆ. ರಾಜ್ಯದ ಇತರ ಜಿಲ್ಲೆಗಳಿಗೆ ತೆರಳುವ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಐಷಾರಾಮಿ ಬಸ್‌ಗಳು ಮಾತ್ರ ಸಂಚಾರ ನಡೆಸಿಲ್ಲ. ಮಧ್ಯಾಹ್ನದ ಬಳಿಕ ಸಂಚಾರ ಎಂದಿನಂತೆ ಇತ್ತು.

ಮೂರು ವಿಮಾನ ರದ್ದು
ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಮಂಗಳೂರಿನಿಂದ ತೆರಳಬೇಕಿದ್ದ ಐದು ವಿಮಾನ ಸೇವೆಯಲ್ಲಿ ಏರ್‌ ಇಂಡಿಗೋದ ಮೂರು ವಿಮಾನ ರದ್ದಾಗಿವೆ.

ಇಂದು ಪ್ರತಿಭಟನೆ
ದ.ಕ. ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಸೆ.30ರಂದು ಮಧ್ಯಾಹ್ನ 1 ಗಂಟೆಗೆ ಹಂಪನಕಟ್ಟೆಯ ಮಿನಿವಿಧಾನ ಸೌಧದ ಬಳಿ ಕಾವೇರಿ ನೀರಿಗಾಗಿ ಪ್ರತಿಭಟನೆ ಆಯೋಜಿಸಲಾಗಿದೆ. ರಾಜ್ಯದ ರೈತರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಸಂಘ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ಸಂಘದ ಪ್ರಕಟನೆ ತಿಳಿಸಿದೆ.

Advertisement

ಕುಕ್ಕೆಯಲ್ಲಿ ಭಕ್ತರ ಸಂಖ್ಯೆ ಇಳಿಕೆ
ಸುಳ್ಯ/ಸುಬ್ರಹ್ಮಣ್ಯ: ಬಂದ್‌ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ತುಸು ಕಡಿಮೆ ಕಂಡುಬಂದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆಯಿಂದಲೇ ದೂರದೂರಿಗೆ ಎಂದಿನಂತೆ ಸರಕಾರಿ ಬಸ್‌ಗಳು ಓಡಾಟ ನಡೆಸಿವೆ. ದೂರದ ಊರುಗಳಿಂದ ಭಕ್ತರು ಆಗಮಿಸಿದ್ದರೂ ಸಂಖ್ಯೆ ಕಡಿಮೆಯಿತ್ತು.

ಉಡುಪಿ: ನೀರಸ ಪ್ರತಿಕ್ರಿಯೆ
ಉಡುಪಿ: ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ನೀಡಿದ್ದ ಕರೆಗೆ ಜಿಲ್ಲೆಯಾದ್ಯಂತ ಸಕಾರಾತ್ಮಕ ಸ್ಪಂದನೆ ಇರಲಿಲ್ಲ. ಹೀಗಾಗಿ ಬಸ್‌, ಕಾರು ಸಹಿತ ವಾಹನ ಸಂಚಾರ, ಶಾಲಾ ಕಾಲೇಜುಗಳಲ್ಲಿ ಚಟುವಟಿಕೆಗಳು ಎಂದಿನಂತೆ ಸಹಜವಾಗಿ ನಡೆದಿವೆ.

ಯಾವುದೇ ಪ್ರತಿಭಟನೆ, ರಸ್ತೆತಡೆ ಅಥವಾ ಕಾಲ್ನಡಿಗೆ ಜಾಥ, ಮನವಿ ಸಲ್ಲಿಸುವುದು ಇತ್ಯಾದಿ ನಡೆದಿಲ್ಲ. ಆದರೂ, ಭದ್ರತೆಯ ದೃಷ್ಟಿಯಿಂದ ಅಲ್ಲಲ್ಲಿ ಪೊಲೀಸ್‌ ಸಿಬಂದಿ ನಿಯೋಜನೆ ಮಾಡಲಾಗಿತ್ತು. ಸಿಟಿ, ಸರ್ವಿಸ್‌ ಹಾಗೂ ಸರಕಾರಿ ಬಸ್‌ ಸೇವೆ, ಆಟೋ, ಟ್ಯಾಕ್ಸಿ ಇತ್ಯಾದಿ ಸಂಚಾರವು ಎಂದಿನಂತಿತ್ತು. ಬೆಂಗಳೂರಿನಿಂದ ಬರುವ ಬಸ್‌ ಹಾಗೂ ಇಲ್ಲಿಂದ ತೆರಳುವ ಬಸ್‌ಗಳು ಸಂಚಾರ ಮಾಡಿವೆ. ಬೆಳಗ್ಗೆ ಹೊರಟ ಬಸ್‌ಗಳು ಸ್ವಲ್ಪ ವಿಳಂಬವಾಗಿ ಸಂಚರಿಸಿವೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯ ಸಿಟಿ, ಸರ್ವಿಸ್‌ ಬಸ್‌ ನಿಲ್ದಾಣಗಳಲ್ಲಿ ಜನದಟ್ಟಣೆ, ವಾಹನ ದಟ್ಟಣೆ, ಅಂಗಡಿ, ಬೀದಿ ಬದಿ ವ್ಯಾಪಾರ ಹೀಗೆ ಎಲ್ಲವೂ ಯಥಾಸ್ಥಿತಿಯಲ್ಲಿದ್ದವು. ಮಾಲ್‌, ಹೊಟೇಲ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಸಹಿತ ಬ್ಯಾಂಕ್‌, ಸರಕಾರಿ ಕಚೇರಿಗಳು ತೆರೆದಿದ್ದವು. ಒಟ್ಟಾರೆಯಾಗಿ ಯಾವುದೇ ಬಂದ್‌ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next