Advertisement

ಕಾವೇರಿ ಭೋರ್ಗರೆತಕ್ಕೆ ಮುಳುಗಿದ ಹಳ್ಳಿಗಳು

06:20 AM Aug 17, 2018 | Team Udayavani |

ಮೈಸೂರು: ಕೇರಳದ ವೈನಾಡು ಭಾಗದಲ್ಲಿ ಬುಧವಾರ ಕೊಂಚ ಕಡಿಮೆಯಾಗಿದ್ದ ವರುಣನ ಅಬ್ಬರ, ರಾತ್ರಿ ವೇಳೆಗೆ ಹೆಚ್ಚಾಗಿದ್ದರಿಂದ ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿದ್ದು,ಕಪಿಲಾ ನದಿಪಾತ್ರದ ತಾಲೂಕುಗಳಲ್ಲಿ ವಾರದಲ್ಲಿ ಎರಡನೇ ಬಾರಿಗೆ ಪ್ರವಾಹ ಭೀತಿ ಎದುರಾಗಿದೆ.

Advertisement

ಕಳೆದ ಒಂದು ವಾರದಿಂದ ಕೇರಳದ ವೈನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೇರಳದ ಗಡಿಯಲ್ಲಿ ಬರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಬರುವ ಎಚ್‌.ಡಿ.ಕೋಟೆ ತಾಲೂಕಿನ ಬಾವಲಿ, ಡಿ.ಬಿ.ಕುಪ್ಪೆ, ಮಚ್ಚಾರು,
ಬೀಚನಹಳ್ಳಿ ಭಾಗದಲ್ಲಿ ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿ, ಹಲವು ರಸ್ತೆಗಳು ಜಲಾವೃತವಾಗಿ, ವಿದ್ಯುತ್‌ ಕಡಿತಗೊಂಡು, ವಾಹನ ಸಂಚಾರವೂ ಇಲ್ಲದೇ ಜನಜೀವನ ಅಸ್ತವ್ಯಸ್ತವಾಗಿತ್ತು. ಅದರಲ್ಲೂ ಹಾಡಿಗಳಲ್ಲಿ ವಾಸಿಸುವ ಗಿರಿಜನರು ಸಂಕಷ್ಟಕ್ಕೆ ಸಿಲುಕಿದ್ದರು.

ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಹದಿನಾರು ಕಾಲು ಮಂಟಪ, ಸ್ನಾನಘಟ್ಟಗಳು ಮುಳುಗಡೆಯಾಗಿದ್ದಲ್ಲದೆ, ದೇವಾಲಯದ ಬಳಿಯ ವಾಹನ ನಿಲುಗಡೆ ತಾಣವೂ ಜಲಾವೃತವಾಗಿ ಯಾತ್ರಿಕರು ಸಂಕಷ್ಟ ಎದುರಿಸುವಂತಾಗಿತ್ತು. ನದಿ ಉಕ್ಕಿಹರಿದ ಪರಿಣಾಮ ನದಿ ಪಾತ್ರದ ಇಕ್ಕೆಲಗಳ ನೂರಾರು ಎಕರೆ ಜಮೀನು ಜಲಾವೃತವಾಗಿದ್ದು, ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿದೆ.

ಕಾವೇರಿಯ ಭೋರ್ಗರೆತ: ಕೊಡಗು, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿದೆ. ಹಾರಂಗಿ ಜಲಾಶಯಕ್ಕೆ 36,179 ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, 36,866 ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೇಮಾವತಿ ಜಲಾಶಯಕ್ಕೆ 42,607 ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, 49,750 ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರ ಪರಿಣಾಮ ಕೆಆರ್‌ಎಸ್‌ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, 1.5 ಲಕ್ಷ ಕ್ಯೂಸೆಕ್‌
ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ತಿ.ನರಸೀಪುರ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವ ಸಾಧ್ಯತೆ ಹೆಚ್ಚಾಗಿದೆ.

ಹೆಮ್ಮಿಗೆ ಸೇತುವೆ ಮೇಲೆ ಸಂಪರ್ಕ ಕಡಿತ: ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ತಿ.ನರಸೀಪುರ ಪಟ್ಟಣದ ಇತಿಹಾಸ ಪ್ರಸಿದ್ಧ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಬಳಿ ನದಿಗೆ ಕಟ್ಟಲಾಗಿರುವ ಮೆಟ್ಟಿಲು ಮುಳುಗಡೆಯಾಗಿದ್ದು, ಇನ್ನು ಮೂರು ಮೆಟ್ಟಿಲುಗಳಷ್ಟೇ ಬಾಕಿ ಉಳಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಮೆಟ್ಟಿಲುಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ನದಿ ಪಾತ್ರದ ಗದ್ದೆಗಳಿಗೆ ನೀರು ನುಗ್ಗಿದೆ. ತಲಕಾಡಿಗೆ ಸಂಕರ್ಪ ಕಲ್ಪಿಸುವ ಹೆಮ್ಮಿಗೆ ಸೇತುವೆಯ ಮೇಲೂ ಕಪಿಲೆಯ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಳಿಸಲಾಗಿದೆ. ಸುತ್ತೂರು ಸೇತುವೆಯ ಮೇಲೂ ನೀರು ಹರಿಯುವುದರಿಂದ ಸಂಚಾರ ಮತ್ತೆ ಸ್ಥಗಿತಗೊಳ್ಳಲಿದೆ.

Advertisement

ಅಪಾಯದ ಮಟ್ಟ: ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ , ಹಾಸನ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಇನ್ನೂ ಅಧಿಕ ಪ್ರಮಾಣದಲ್ಲಿ ಒಳ ಹರಿವು ಬರಲಿದ್ದು, ಕಾವೇರಿ ಅಪಾಯದ ಮಟ್ಟವನ್ನೂ ಮೀರಿ ಹರಿಯುವ ಸಾಧ್ಯತೆ ಹೆಚ್ಚಿದೆ.

ಜಂಟಿ ಸಮೀಕ್ಷೆ: ಕಪಿಲಾ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ನಂಜನಗೂಡು ತಾಲೂಕಿನಲ್ಲಿ ನೂರಾರು ಎಕರೆ ಗದ್ದೆ ಜಲಾವೃತವಾಗಿದೆ. ಎಚ್‌.ಡಿ.ಕೋಟೆ ಮತ್ತು ತಿ.ನರಸೀಪುರ, ಮೈಸೂರು ತಾಲೂಕಿನ ವರುಣಾ ಹೋಬಳಿಯಲ್ಲಿ ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸುತ್ತಿದ್ದು, ಸಮೀಕ್ಷೆ ವರದಿ ಬಂದ ನಂತರವಷ್ಟೇ ಎಷ್ಟು ಎಕರೆ ಹಾನಿಗೀಡಾಗಿದೆ ಎಂಬುದು ಗೊತ್ತಾಗಲಿದೆ.

ಗದ್ದೆಗಳಲ್ಲಿ ಭತ್ತದ ಒಟ್ಲು ಹಾನಿಗೀಡಾಗಿದ್ದರೆ, ಮತ್ತೆ ಒಟ್ಲು ಹಾಕಿಕೊಳ್ಳಲು ಅನುಕೂಲವಾಗುವಂತೆ ಇನ್ನೂ 10ರಿಂದ 15 ದಿನಗಳ ಕಾಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಭತ್ತ ವಿತರಣೆ ಮುಂದುವರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದ್ರು ತಿಳಿಸಿದ್ದಾರೆ.

ಕಬಿನಿ ಒಳ ಹರಿವು ಹೆಚ್ಚಳ
ಮಂಗಳವಾರದಿಂದ ಕೇರಳದ ವೈನಾಡು ಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿರುವುದರಿಂದ ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣವೂ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳುವ ಮುನ್ನವೇ ಮತ್ತೆ ಮಳೆ ಪ್ರಮಾಣ ಹೆಚ್ಚಾಗಿ ಕಬಿನಿ ಜಲಾಶಯಕ್ಕೆ 74,190 ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, 70,000 ಕ್ಯೂಸೆಕ್‌ ನೀರನ್ನು ನದಿಗೆ ಹಾಗೂ 1250 ಕ್ಯೂಸೆಕ್‌ ನಾಲೆಗಳಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಕಪಿಲಾ ನದಿಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ಅಗ್ನಿಶಾಮಕ ತಂಡ ರಚನೆ
ಮೈಸೂರು
: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಹಾಗೂ ಸ್ಥಳೀಯ ಅಗ್ನಿಶಾಮಕ ಠಾಣೆಗಳ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ. ಎಚ್‌.ಡಿ.ಕೋಟೆಯಲ್ಲಿ ಬೋಟ್‌,
ಲೈಫ್ ಜಾಕೆಟ್ಸ್‌, ರೋಪ್‌ ವೇ ಒಳಗೊಂಡ 17 ಜನರ ತಂಡ, ತಿ.ನರಸೀಪುರದಲ್ಲಿ 11 ಜನರ ತಂಡ, ನಂಜನಗೂಡಿನಲ್ಲಿ 14 ಜನರ ಎಸ್‌ಡಿಆರ್‌ಫ್ ತಂಡ ಹಾಗೂ ಮೈಸೂರಿನ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯಲ್ಲಿ ಸಣ್ಣ ದೋಣಿಯನ್ನು ಸಜ್ಜುಗೊಳಿಸಲಾಗಿದೆ. ಉಳಿದ ಸಿಬ್ಬಂದಿಯನ್ನು ಮೂರು ತಂಡಗಳಾಗಿ ರಚಿಸಿದ್ದು, ಎರಡು ತಂಡಗಳನ್ನು ಗೋಣಿಕೊಪ್ಪ ಮತ್ತು ಮಡಿಕೇರಿಗೆ, ಮತ್ತೂಂದು ತಂಡವನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

ಸಹಾಯವಾಣಿ ಆರಂಭ
ಮೈಸೂರು
: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.ದಿನದ 24ಗಂಟೆಗಳ ಕಾಲ ಮೂರು ಪಾಳಿಯಲ್ಲಿ ತಹಶೀಲ್ದಾರ್‌ ದರ್ಜೆಯ ಅಧಿಕಾರಿಗಳು ಸಹಾಯವಾಣಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮೊದಲ ಪಾಳಿಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆವರೆಗೆ ರಕ್ಷಿತಾ ಕೆ.ಆರ್‌. ಕರ್ತವ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಅವರನ್ನು ಮೊ:9906844669 ಮೂಲಕ ಸಂಪರ್ಕಿಸಬಹುದು. ಮಧ್ಯಾಹ್ನ 2 ರಿಂದ ರಾತ್ರಿ 10ಗಂಟೆವರೆಗೆ 2ನೇ ಪಾಳಿಯಲ್ಲಿ ಮಹೇಶ್‌ ಕುಮಾರ್‌ ಕೆ.ಎಂ. ಕರ್ತವ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಮೊ:97397 21530 ಮೂಲಕ ಸಂಪರ್ಕಿಸಬಹುದು. ರಾತ್ರಿ 10 ರಿಂದ ಬೆಳಗ್ಗೆ 6ಗಂಟೆವರೆಗೆ 3ನೇ ಪಾಳಿಯಲ್ಲಿ ನಾಗ ಪ್ರಶಾಂತ್‌ ಹಾಗೂ ಕುಂಜಿ ಅಹ್ಮದ್‌ ಕರ್ತವ್ಯ ನಿರ್ವಹಿಸಲಿದ್ದು,ಮೊ:99160 90800, 9740125662 ಇಲ್ಲಿಗೆ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next