ನದಿ ನೀರು ರಾಷ್ಟ್ರೀಯ ಸಂಪತ್ತು. ಯಾವುದೇ ರಾಜ್ಯಗಳು ಇದರ ಮೇಲೆ ಹಕ್ಕು ಸಾಧಿಸುವಂತಿಲ್ಲ. ಹರಿವ ನೀರನ್ನು ಹಂಚಿಕೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನೊಂದಿಗೆ ಶತಮಾನದ ಇತಿಹಾಸವಿರುವ ಕಾವೇರಿ ವಿವಾದ ಅಂತ್ಯವಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳೆರಡಕ್ಕೂ ಕೊಟ್ಟು ಪಡೆದುಕೊಳ್ಳುವ ಸೂತ್ರ ಬೋಧಿಸಲಾಗಿದ್ದು, ಈ ತೀರ್ಪನ್ನು ಒಪ್ಪಿಕೊಳ್ಳಲೇಬೇಕಿದೆ. ಕಾವೇರಿ ನ್ಯಾಯಾಧಿಕರಣದ ತೀರ್ಪು ಸರಿಯಲ್ಲ, ಕಾವೇರಿ ನೀರಿನ ಹಕ್ಕು ತನ್ನದೆಂಬ ಕರ್ನಾಟಕದ ವಾದಕ್ಕೆ ಪುರಸ್ಕಾರ ದೊರೆಯಲಿಲ್ಲ. ಅಂತೆಯೇ ಹೆಚ್ಚಿನ ನೀರಿನ ಹಂಚಿಕೆಗಾಗಿ ಬೇಡಿಕೆ ಸಲ್ಲಿಸಿದ್ದ ತಮಿಳುನಾಡು ವಾದಕ್ಕೂ ಮನ್ನಣೆ ಸಿಗಲಿಲ್ಲ. ಜತೆಗೆ ಅಲ್ಲಿನ 10 ಟಿಎಂಸಿ ಅಂತರ್ಜಲವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಕುಡಿವ ನೀರಿಗೆ ಮೊದಲ ಆದ್ಯತೆ ಎಂದು ಹೇಳಿದ ಕೋರ್ಟ್ ಬೆಂಗಳೂರಿನ ಕುಡಿಯುವ ನೀರಿಗಾಗಿ 4.75 ಟಿಎಂಸಿ ನೀರನ್ನು ಮೀಸಲಿಟ್ಟಿದೆ. ಹೀಗೆ ಒಟ್ಟು ತಮಿಳುನಾಡಿಗೆ ಬಿಡಬೇಕಿದ್ದ ನೀರಲ್ಲಿ 14.75 ಟಿಎಂಸಿ ಕಡಿತಗೊಂಡಿದೆ. ಇದು ಕರ್ನಾಟಕಕ್ಕೂ ನೆಮ್ಮದಿ. ತೀರ್ಪಿನಿಂದಾಗಿ ಕರ್ನಾಟಕಕ್ಕೆ 284.75 ಟಿಎಂಸಿ, ತಮಿಳುನಾಡಿಗೆ 177.25 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆಗೊಂಡಿದೆ. 15 ವರ್ಷ ಈ ತೀರ್ಪು ಊರ್ಜಿತದಲ್ಲಿರಲಿದೆ. ಈ ಅವಧಿಯಲ್ಲಿ ನೀರು ಹಂಚಿಕೆ ಹೊಣೆಯನ್ನು ಕೋರ್ಟ್ ಕೇಂದ್ರಕ್ಕೆ ವಹಿಸಿದೆ. ಅದರ ನೇತೃತ್ವದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಗೊಳ್ಳಲಿದೆ. ಇಲ್ಲಿರುವ ಸೂಕ್ಷ್ಮ ಸಂಗತಿ ಎಂದರೆ, ಬರಗಾಲದ ವರ್ಷಗಳಲ್ಲಿ ನೀರು ಹಂಚಿಕೆ ಹೇಗೆ ನಡೆಯಲಿದೆ ಎಂಬುದೇ ಆಗಿದೆ. ಈ ನೂತನ ಮಂಡಳಿಯೇ ಅದನ್ನು ನಿರ್ವಹಿಸಬೇಕಾಗುತ್ತದೆ. ರಾಜಕೀಯ ರಹಿತ, ಎರಡೂ ರಾಜ್ಯಗಳ ಜನಹಿತದ ತೀರ್ಮಾನವನ್ನು ಈ ಮಂಡಳಿ ಮಾಡಬೇಕಿರುತ್ತದೆ.