Advertisement

ಬತ್ತಿ ಹೋಗಲಿದ್ದಾಳೆಯೇ ಜೀವನದಿ ಕಾವೇರಿ?

12:40 AM Apr 30, 2019 | Lakshmi GovindaRaju |

ನವದೆಹಲಿ: ಕನ್ನಡನಾಡಿನ ಜೀವನದಿಯಾಗಿರುವ ಕಾವೇರಿ ಇನ್ನು ಕೆಲವೇ ವರ್ಷಗಳಲ್ಲಿ ಬತ್ತಿ ಹೋಗಲಿದೆಯೇ ಎಂಬ ಹೊಸ ಪ್ರಶ್ನೆಯೊಂದನ್ನು ಕೇಂದ್ರ ಜಲ ಆಯೋಗ (ಸಿಡಬ್ಲೂಸಿ) ತಯಾರಿಸಿರುವ ವರದಿಯೊಂದು ಹುಟ್ಟುಹಾಕಿದೆ. ಮುಂದೊಂದು ದಿನ ಬತ್ತಿ ಹೋಗುವ ಭಾರತದ ಕೆಲವು ನದಿಗಳನ್ನು ಈ ವರದಿಯಲ್ಲಿ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಕಾವೇರಿ ನದಿಯ ಹೆಸರನ್ನೂ ಉಲ್ಲೇಖೀಸಲಾಗಿರುವುದು ಹೊಸ ಆತಂಕಕ್ಕೆ ನಾಂದಿ ಹಾಡಿದೆ.

Advertisement

ಸಿಡಬ್ಲೂಸಿ ವರದಿಯಲ್ಲಿನ ದತ್ತಾಂಶದ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಬೀಸುತ್ತಿರುವ ಉಷ್ಣ ಹವೆ ಹೆಚ್ಚಾಗಿದ್ದು ಅದರ ಪರಿಣಾಮ, ಭಾರತದ ನದಿ, ಅಣೆಕಟ್ಟು ಹಾಗೂ ಇನ್ನಿತರ ಜಲಮೂಲಗಳ ನೀರಿನ ಪ್ರಮಾಣ ಶೇ. 21ರಷ್ಟು ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ಉತ್ತರ ಭಾರತದಲ್ಲಿ ಸಿಂಧೂ ನದಿ ಮತ್ತು ನರ್ಮದಾ ನದಿ, ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳನ್ನು ಆಶ್ರಯಿಸಿರುವ ಕೆಲವು ನದಿಗಳನ್ನು ಬಿಟ್ಟರೆ ಮಿಕ್ಕೆಲ್ಲಾ ನದಿಗಳಲ್ಲಿ ಈ ನೀರಿನ ಕೊರತೆ ಈಗಾಗಲೇ ಸೃಷ್ಟಿಯಾಗಿದೆ. ಗುಜರಾತ್‌ನ ಕಛ್, ತಾಪಿ, ಸಬರ್ಮತಿ ನದಿ, ಕರ್ನಾಟಕದಲ್ಲಿ ಹರಿಯುವ ಕಾವೇರಿ, ಗೋದಾವರಿ, ಕೃಷ್ಣಾ, ಛತ್ತೀಸ್‌ಗಡದ ಮಹಾನದಿ ಸೇರಿದಂತೆ ದೇಶದ ಒಟ್ಟು 12 ನದಿಗಳು ಮುಂದೊಂದು ದಿನ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಅಪಾಯದಲ್ಲಿವೆ.

ಉಷ್ಣ ಹವೆಯ ಪರಿಣಾಮ, ಆಂಧ್ರ, ಮಹಾರಾಷ್ಟ್ರ, ಗುಜರಾತ್‌ಗಳಲ್ಲಿನ ಹಲವಾರು ಚಿಕ್ಕ ಅಣೆಕಟ್ಟುಗಳು ಈಗಾಗಲೇ ಬರಿದಾಗಿವೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ನದಿಗಳಲ್ಲಿ ಕಡಿಮೆಯಾಗಿರುವ ನೀರಿನ ಪ್ರಮಾಣ ಸಾಧಾರಣ ಮಟ್ಟದ್ದಾಗಿದ್ದಾಗಿದ್ದರೂ, ಪರಿಸ್ಥಿತಿ ಹೀಗೇ ಮುಂದುವರಿದರೆ, ಈ ನದಿಗಳು ಮಾಯವಾಗುವ ಅಪಾಯ ಇಲ್ಲದಿಲ್ಲ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಹವಾಮಾನ ಇಲಾಖೆಯಿಂದಲೂ ಎಚ್ಚರ: ಈ ವರ್ಷ, ಮಾರ್ಚ್‌ನಿಂದ ಏಪ್ರಿಲ್‌ವರೆಗೆ ಬರಬೇಕಿದ್ದ ಮುಂಗಾರು ಪೂರ್ವ ಮಳೆಯ ಪ್ರಮಾಣದಲ್ಲಿ ಶೇ. 27ರಷ್ಟು ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದ್ದು, ದೇಶದ ಅರ್ಧಕ್ಕೂ ಹೆಚ್ಚು ಭಾಗ ಬರಗಾಲಕ್ಕೆ ತುತ್ತಾಗಿದೆ ಎಂದು ಹೇಳಿದೆ. ಜತೆಗೆ, 2019ರ ವರ್ಷವು ಎಲ್‌ ನಿನೋ ಇಯರ್‌ (ಹೆಚ್ಚು ಉಷ್ಣಾಂಶ-ಕಡಿಮೆ ಜಲ ವರ್ಷ) ಎಂದು ಪರಿಗಣಿಸಲ್ಪಟ್ಟಿದೆ ಎಂದು ಇಲಾಖೆ ತಿಳಿಸಿದೆ.

Advertisement

ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿರುವ ಗಾಂಧಿನಗರದ ಐಐಟಿಯ ಸಹ ಪ್ರಾಧ್ಯಾಪಕರಾಗಿರುವ ವಿಮಲ್‌ ಶರ್ಮಾ, ಈಗಾಗಲೇ ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗುಜರಾತ್‌, ಜಾರ್ಖಂಡ್‌, ಮಹಾರಾಷ್ಟ್ರ, ಈಶಾನ್ಯ ರಾಜಸ್ಥಾನ, ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಅತಿ ಉಷ್ಣ ಹವೆ ಬೀಸುತ್ತಿದೆ. ಇದರ ಪರಿಣಾಮ ಈ ಭಾಗದ ಜನರು ಈ ವರ್ಷದ ಬರಗಾಲದ ಬೇಗೆ ಅನುಭವಿಸಬೇಕಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next