ಚೆನ್ನೈ/ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗಾಗಿ ಪಟ್ಟು ಹಿಡಿದಿರುವ ತಮಿಳುನಾಡು ಪ್ರತಿಭಟನೆ ಮುಂದುವರಿಸಿದೆ. ಏ.5ರಂದು ರಾಜ್ಯ ಬಂದ್‌ಗೆ ಡಿಎಂಕೆ ನೇತೃತ್ವದ ಪ್ರತಿಪಕ್ಷಗಳು ಕರೆ ನೀಡಿವೆ. ಈ ಬೆನ್ನಿಗೇ ಕನ್ನಡಪರ ಸಂಘಟನೆಗಳು ತಮಿಳುನಾಡಿಗೆ ತಿರುಗೇಟು ನೀಡಿ, ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿವೆ.
ಈ ಸಂಬಂಧ ರಾಜ್ಯದಲ್ಲಿ ಹೋರಾಟ ಹೇಗಿರಬೇಕೆನ್ನುವ ಕುರಿತು ಚರ್ಚಿಸಲು ಕನ್ನಡಪರ ಸಂಘಟನೆಗಳು ಸೋಮವಾರ ಬೆಂಗಳೂರಿನಲ್ಲಿ ಸಭೆ ಸೇರಿ ತೀರ್ಮಾನಿಸಲು ನಿರ್ಧರಿಸಿವೆ. ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್, ಕನ್ನಡಪರ ಸಂಘಟನೆಗಳ ಜತೆ ಸಮಾಲೋಚನೆ ನಡೆಸಲಿದ್ದು, ನಂತರ ಸುದ್ದಿಗೋಷ್ಠಿ ನಡೆಸಿ ತೀರ್ಮಾನ ಪ್ರಕಟಿಸಲಿದ್ದಾರೆಂದು ಪ್ರಕಟಣೆ ತಿಳಿಸಲಾಗಿದೆ.
5ರಂದು ತಮಿಳುನಾಡು ಬಂದ್: ತಮಿಳುನಾಡಿನಲ್ಲಿ ಈ ಸಂಬಂಧ ಪ್ರತಿಭಟನೆ, ಧರಣಿಗಳು ಮುಂದುವರಿದಿದ್ದು, ಏ.5ರಂದು ರಾಜ್ಯ ಬಂದ್‌ಗೆ ಡಿಎಂಕೆ ನೇತೃತ್ವದ ಪ್ರತಿಪಕ್ಷಗಳು ಕರೆ ನೀಡಿವೆ.
ಭಾನುವಾರ ಪ್ರತಿಪಕ್ಷಗಳ ನಾಯಕರನ್ನು ಭೇಟಿಯಾಗಿ ಸಭೆ ನಡೆಸಿದ ಬಳಿಕ ಮಾತನಾಡಿದ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್, ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ಏ.5ರಂದು ತಮಿಳುನಾಡು ಬಂದ್‌ಗೆ ಕರೆ ನೀಡುತ್ತಿದ್ದೇವೆ. ಇದಕ್ಕೆ ಕೆಲವು ಪ್ರತಿಪಕ್ಷಗಳು ಮಾತ್ರವಲ್ಲದೆ, ರೈತರು, ವ್ಯಾಪಾರಿಗಳು ಸೇರಿ ಅನೇಕರು ಬೆಂಬಲ ಸೂಚಿಸಿದ್ದಾರೆ. ಬಂದ್ ಜತೆಯಲ್ಲೇ “ಕಾವೇರಿ ಹಕ್ಕುಗಳ ಮರುಸ್ಥಾಪನಾ ಯಾತ್ರೆ’ಯನ್ನೂ ನಡೆಸಲಿದ್ದೇವೆ ಎಂದು ಹೇಳಿದ್ದಾರೆ. ಜತೆಗೆ, 15ರಂದು ಪ್ರಧಾನಿ ಮೋದಿ ರಾಜ್ಯ ಪ್ರವಾಸದ ವೇಳೆ ಕಪ್ಪುಬಾವುಟ ಪ್ರದರ್ಶಿಸುವುದಾಗಿಯೂ ಅವರು ಪುನರುಚ್ಚರಿಸಿದ್ದಾರೆ.
ಇದೇ ವೇಳೆ, ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಟಾಲಿನ್, ಎಐಎಡಿಎಂಕೆ ಪಕ್ಷವು ಕೇಂದ್ರ ಸರ್ಕಾರದ ಮುಂದೆ ಮಂಡಿಯೂರಿದೆ ಎಂದೂ ಆರೋಪಿಸಿದ್ದಾರೆ. ಸಭೆಯಲ್ಲಿ ತಮಿಳುನಾಡು ಕಾಂಗ್ರೆಸ್, ವಿಸಿಕೆ, ಸಿಪಿಎಂ ಮತ್ತು ಸಿಪಿಐ ನಾಯಕರು ಭಾಗವಹಿಸಿದ್ದರು.
ಸ್ಟಾಲಿನ್ ವಶಕ್ಕೆ: ಈ ಘೋಷಣೆ ಬಳಿಕ ನೇರವಾಗಿ ವಲ್ಲುವರ್ ಕೊಟ್ಟಂಗೆ ತೆರಳಿದ ಸ್ಟಾಲಿನ್ ಅಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪೂರ್ವಾನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಇದನ್ನು ಖಂಡಿಸಿ ತಿರುನಲ್ವೇಲಿಯಲ್ಲಿ ರಾಜ್ಯಸಭೆ ಸಂಸದೆ ಕನಿಮೋಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಇನ್ನೊಂದೆಡೆ, ತಮಿಳು ಸಂಘಟನೆಯೊಂದರ ಕಾರ್ಯಕರ್ತರು ವಿಲ್ಲುಪುರಂ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೇ, ಟೋಲ್ ಪ್ಲಾಜಾ ಮೇಲೆ ದಾಳಿ ನಡೆಸಿದ್ದಾರೆ. ಗಾಜಿನ ಫಲಕಗಳನ್ನು ಪುಡಿಗೈದಿದ್ದಾರೆ.