Advertisement

3 ವರ್ಷಗಳ ನಂತರ ಮತ್ತೆ ಕಾವೇರಿ ವಿವಾದ

05:20 PM Sep 02, 2021 | Team Udayavani |

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಮೂರು ವರ್ಷಗಳ ನಂತರ ಮತ್ತೆ ತಮಿಳುನಾಡು, ಕರ್ನಾಟಕ ನಡುವೆ ಕಾವೇರಿ ವಿವಾದ ಭುಗಿಲೆದ್ದಿದೆ. ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ ನೀರುಹರಿಸುವಂತೆ ಸೂಚಿಸಿರುವುದರಿಂದ ಜಿಲ್ಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಮಂಗಳವಾರ ದೆಹಲಿಯಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯಲ್ಲಿ ತಮಿಳುನಾಡು ಸೆಪ್ಟಂಬರ್‌ನಲ್ಲಿ 30 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿತ್ತು. ಅದರಂತೆ ಸಮಿತಿಯು ಕರ್ನಾಟಕಕ್ಕೆ ಸದ್ಯ 6ರಿಂದ 7 ಟಿಎಂಸಿ ನೀರು ಹರಿಸುವಂತೆ ಸೂಚಿಸಿದೆ. ಇದು ಕಾವೇರಿ ಜಲಾನಯನದ ಪ್ರದೇಶದ ಜಿಲ್ಲೆಯ ರೈತರಿಗೆ ಸಂಕಷ್ಟ ತಂದೊಡ್ಡಿದೆ.

3 ವರ್ಷ ಭರ್ತಿಯಾಗಿದ್ದ ಕೆಆರ್‌ಎಸ್‌: 2018ರಲ್ಲಿ ಕಾವೇರಿ ಕೊಳ್ಳದಲ್ಲಿ ಸುರಿದ ಭಾರೀ ಮಳೆಯಿಂದ ಕೆಆರ್‌ಎಸ್‌ ಜಲಾಶಯ ಜುಲೈ 20ರಂದು ಭರ್ತಿಯಾಗಿತ್ತು. ಇದರಿಂದ ಸಾಕಷ್ಟು ನೆರೆ ಹಾವಳಿಯೂ ಸಂಭವಿಸಿತ್ತು. ಆಗ ತಮಿಳುನಾಡಿಗೆ ನಿಗದಿತ ಟಿಎಂಸಿಗಿಂತ ಹೆಚ್ಚುವರಿ ನೀರು ಹರಿದಿತ್ತು. ನಂತರ 2019 ಹಾಗೂ 2020ರ ಎರಡು ವರ್ಷಗಳಲ್ಲಿ ಆಗಸ್ಟ್‌ 15ರಂದು ಜಲಾಶಯ ತುಂಬಿತ್ತು. ಆಗಲೂ ತಮಿಳುನಾಡಿಗೆ ನೀರು
ಹರಿದಿತ್ತು. ಆಗ ಯಾವುದೇ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ವಿವಾದ ಉಂಟಾಗಿರಲಿಲ್ಲ.

ತುಂಬದ ಕೆಆರ್‌ಎಸ್‌: ಈ ಬಾರಿಯೂ ಜಲಾಶಯ ತುಂಬುವ ನಿರೀಕ್ಷೆ ಇತ್ತು. ಜುಲೈ, ಆಗಸ್ಟ್‌ನಲ್ಲಿ ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ ಯಾಯಿತು. 25 ಸಾವಿರಕ್ಕೂ ಹೆಚ್ಚು ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಆದರೆ ಜಲಾಶಯ ಮಾತ್ರ ತುಂಬಲೇ ಇಲ್ಲ. ತಮಿಳುನಾಡಿಗೆ ನಿರಂತರ ನೀರು ಹರಿಸಲಾಯಿತು. ಆಗಸ್ಟ್‌ ಕೊನೆ ವಾರದಲ್ಲಿ ಮಳೆ ಪ್ರಮಾಣ ಕುಸಿತ ಕಂಡಿದೆ. ಸೆಪ್ಟಂಬರ್‌ನಲ್ಲಿ ಮಳೆ ಸುರಿದರೆ ಮಾತ್ರ ಜಲಾಶಯ ತುಂಬುವ ಸಾಧ್ಯತೆ ಇದೆ.

ಇದನ್ನೂ ಓದಿ:ಹುಬ್ಬಳ್ಳಿಗೆ ಆಗಮಿಸಿದ ಅಮಿತ್ ಶಾ, ಓಂ ಬಿರ್ಲಾ: ಪುಸ್ತಕ ಕೊಟ್ಟು ಸ್ವಾಗತಿಸಿದ ಸಿಎಂ ಬೊಮ್ಮಾಯಿ

Advertisement

ಬಿತ್ತನೆ ಮಾಡಿರುವ ರೈತರು: ಈಗಾಗಲೇ ಜಿಲ್ಲೆಯಾದ್ಯಂತ ಕಬ್ಬು, ಭತ್ತ ಸೇರಿದಂತೆ ರಾಗಿಯ ಬಿತ್ತನೆ ಶೇಕಡವಾರು ನಡೆದಿದೆ. ಇನ್ನೂ ನಡೆಯುತ್ತಿದೆ. ಅದಕ್ಕಾಗಿ ನೀರಿನ ಅಗತ್ಯ ಹೆಚ್ಚಿದೆ. ಪ್ರಸ್ತುತ ಕೆಆರ್‌ಎಸ್‌ ಜಲಾಶಯದಲ್ಲಿ 117 ಅಡಿ ಇದ್ದು, 39 ಟಿಎಂಸಿ ನೀರು ಸಂಗ್ರಹವಾಗಿದೆ. ತಮಿಳುನಾಡು ಕೇಳಿದಂತೆ ನೀರು ಹರಿಸಿದರೆ ಜಲಾಶಯ ತಳಮಟ್ಟ ಸೇರಲಿದೆ. ಇದರಿಂದ ಮುಂಗಾರು ಬೆಳೆಗೆ ನೀರಿಲ್ಲದಂತಾಗಿಜಿಲ್ಲೆಯ ರೈತರಬೆಳೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ನಿರಂತರ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ:
ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ಆಯಾ ತಿಂಗಳ ನೀರು ಹರಿಸಬೇಕಾಗಿದೆ. ಆದರೆ ಕೊಡಗಿನಲ್ಲಿ ಮಳೆ ಪ್ರಮಾಣ ಕುಸಿತ ವಾಗಿರುವುದರಿಂದ ಜೂನ್‌, ಜುಲೈ ಹಾಗೂ ಆಗಸ್ಟ್‌ ತಿಂಗಳ ನೀರು ಹರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ನಿರಂತರ ವಾಗಿ ಜಲಾಶಯ ದಿಂದ ಪ್ರತಿನಿತ್ಯ ನದಿಗೆ 5 ಸಾವಿರಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಇದರಿಂದ ಜಲಾಶಯದ ನೀರಿನಕುಸಿತಕಂಡಿದೆ.

ಜಲಾಶಯದಲ್ಲಿ4 ಅಡಿ ನೀರು ಕುಸಿತ
ಕಳೆದ 20ದಿನಗಳಿಂದ ಮಳೆ ಕೊರತೆಯಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ.ಅಲ್ಲದೆ, ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ದಿನದಿನಕ್ಕೆ ನೀರಿನ ಸಂಗ್ರಹವೂ ಕಡಿಮೆಯಾಗಿದೆ.ಆಗಸ್ಟ್‌ ಮೊದಲವಾರದಲ್ಲಿ ಉತ್ತಮ ಮಳೆಯಾಗಿದ್ದರಿಂದಆ.11ರಂದು ಜಲಾಶಯ 121ಅಡಿ ತಲುಪಿತ್ತು. ಇದರಿಂದ ತುಂಬುವ ನಿರೀಕ್ಷೆ ಹೆಚ್ಚಿತ್ತು.ಆದರೆ 20ದಿನಗಳಿಂದ ಮಳೆ ಇಲ್ಲದೆ, ಜಲಾಶಯದಲ್ಲಿ 4ಅಡಿ ನೀರು ಕುಸಿತ ಕಂಡಿದೆ.

‌ತಮಿಳುನಾಡಿಗೆ ಬಿಡಬೇಕಾದ ನೀರು
ತಮಿಳುನಾಡಿಗೆಹಂಚಿಕೆ ಸೂತ್ರದಂತೆ ಜೂನ್‌ನಲ್ಲಿ 10ಟಿಎಂಸಿ, ಜುಲೈ 34ಟಿಎಂಸಿ,ಆಗಸ್ಟ್‌ 50 ಟಿಎಂಸಿ, ಸೆಪ್ಟಂಬರ್‌ನಲ್ಲಿ 30ಟಿಎಂಸಿ ನೀರು
ಹರಿಸಬೇಕು.ಆದರೆ ಸಾಮಾನ್ಯ ಮಳೆಯಾದ ಸಂದರ್ಭದಲ್ಲಿ ಹಂಚಿಕೆ ಸೂತ್ರದಂತೆ ಜೂನ್‌ನಲ್ಲಿ 9.1ಟಿಎಂಸಿ,ಜುಲೈನಲ್ಲಿ 31.27 ಟಿಎಂಸಿ, ಆಗಸ್ಟ್‌ನಲ್ಲಿ 45.95 ಟಿಎಂಸಿ ನೀರುಹರಿಸಬೇಕಾಗಿದೆ. ಆದರೆ ಪ್ರಸ್ತುತ ವರ್ಷ ಇದುವರೆಗೂ ತಮಿಳುನಾಡಿಗೆ 58 ಟಿಎಂಸಿ ನೀರುಹರಿದಿದೆ ಎಂದು ತಿಳಿದು ಬಂದಿದೆ.

117 ಅಡಿ ನೀರು ಸಂಗ್ರಹ
ಕೆಆರ್‌ಎಸ್‌ ಜಲಾಶಯದ ‌ ನೀರಿನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಪ್ರಸ್ತುತ ಬುಧವಾರ ಸಂಜೆ ವೇಳೆಗೆ 117 ಅಡಿ ಇತ್ತು. ಒಳಹರಿವು5,397
ಕ್ಯುಸೆಕ್‌ ಇದ್ದರೆ, ಹೊರಹರಿವು 9655 ಕ್ಯುಸೆಕ್‌ ಇದೆ. ಇದರಲ್ಲಿ ನದಿಗೆ 6,149ಕ್ಯುಸೆಕ್‌ ಹಾಗೂ ನಾಲೆಗೆ 2,998 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಒಟ್ಟು 39.369 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ123.22 ಅಡಿ ಇತ್ತು. 47.270 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವು 4706 ಕ್ಯುಸೆಕ್‌ ಇದ್ದರೆ, ಹೊರ ಹರಿವು 5,309ಕ ಕ್ಯುಸೆಕ್‌ ಇತ್ತು.

ತಮಿಳುನಾಡಿಗೆ ನೀರು ಹರಿಸಬಾರದು
ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿರುವುದಕ್ಕೆ ನಮ್ಮ ವಿರೋಧವಿದೆ. ಜಿಲ್ಲೆಯಲ್ಲಿ 55 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, 32 ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಇದೆ. ಈ ಬೆಳೆಯನ್ನು ಕಾಪಾಡಲು ಡಿಸೆಂಬರ್‌ವರೆಗೂ 30 ಟಿಎಂಸಿ ಅಗತ್ಯವಿದೆ. ಸದ್ಯ ಜಲಾಶಯದಲ್ಲಿ 39 ಟಿಎಂಸಿ ನೀರು ಇದೆ. ಇದರಲ್ಲಿ 5 ಟಿಎಂಸಿ ಡೆಡ್‌ ಸ್ಟೋರೆಜ್‌,6 ಟಿಎಂಸಿ ಕುಡಿಯುವ ನೀರು ಬಳಕೆಗೆ ಅಗತ್ಯವಿದೆ. ಅದರಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ, ಜಿಲ್ಲೆಯ ಬೆಳೆಗಳು ಒಣಗಲಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ರೈತ ‌ ಸಂಘ (ಮೂಲಸಂಘಟನೆ) ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next