Advertisement

ಹೆಚ್ಚುತ್ತಿರುವ ವಿದ್ಯುತ್‌ ಅವಘಡ; ಮುನ್ನೆಚ್ಚರಿಕೆ ಅತ್ಯಗತ್ಯ; ಮೆಸ್ಕಾಂನಿಂದ ಬೇಕಿದೆ ಸುರಕ್ಷತಾ ಕ್ರಮ

03:36 PM Nov 27, 2022 | Team Udayavani |

ಕುಂದಾಪುರ: ವರ್ಷದಿಂದ ವರ್ಷಕ್ಕೆ ವಿದ್ಯುತ್‌ ಅವಘಡಗಳ ಸಂಖ್ಯೆ ಹೆಚ್ಚುತ್ತಿರು ವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇಂತಹ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಮೆಸ್ಕಾಂ ಹಾಗೂ ಸಾರ್ವಜನಿರಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾದುದು ಅತ್ಯಗತ್ಯವಾಗಿದೆ. ಕಳೆದ ಜನವರಿಯಿಂದೀಚೆಗೆ ಕುಂದಾಪುರ, ಬೈಂದೂರು ಭಾಗದಲ್ಲಿ ವಿದ್ಯುತ್‌ ಅವಘಡದಿಂದ ನಾಲ್ಕು ಮಂದಿ ಸಾವನ್ನಪ್ಪಿರುವುದು ನಿಜಕ್ಕೂ ದುರಂತ.

Advertisement

ಜಾತ್ರೆಯ ಅಥವಾ ಶುಭಕೋರುವ ಬ್ಯಾನರ್‌ ಅಳವಡಿಸುವಾಗ, ಶಾಮಿಯಾನ, ಚಪ್ಪರದ ಕಂಬ ಹಾಕುವ ವೇಳೆ, ಅಡಿಕೆ ಅಥವಾ ತೆಂಗಿನ ಮರ ಹತ್ತುವ ಏಣಿ ತಾಗಿ, ರಸ್ತೆ ಬದಿ ಜೋತು ಬೀಳುವ ವಿದ್ಯುತ್‌ ತಂತಿ ಹೀಗೆ ಒಂದಿಲ್ಲೊಂದು ನಿರ್ಲಕ್ಷéವು ಹಲವರ ಪ್ರಾಣಕ್ಕೆ ಎರವಾಗುತ್ತಿದೆ.

ಸುರಕ್ಷತಾ ಕ್ರಮಕೈಗೊಳ್ಳಿ

ಗುಜ್ಜಾಡಿಯಲ್ಲಿ ಬೃಹತ್‌ ಮರಕ್ಕೆ ವಿದ್ಯುತ್‌ ತಂತಿಗಳು ತಾಗಿಕೊಂಡಿರುವುದರಿಂದ ದುರಂತ ಸಂಭವಿಸಿದೆ. ಇದನ್ನು ಗಮನಿಸದೇ ಮರ ಹತ್ತಿರುವುದು ಯುವಕನ ನಿರ್ಲಕ್ಷéವಾದರೂ, ಮರಗಳಿಗೆ ವಿದ್ಯುತ್‌ ತಂತಿಗಳು ತಾಗಿರುವುದನ್ನು ಸರಿಪಡಿಸಬೇಕಿರುವುದು ಮೆಸ್ಕಾಂನವರ ಕೆಲಸ. ಇದೊಂದೇ ಕಡೆಯಲ್ಲ. ಈ ರೀತಿಯಾಗಿ ಅನೇಕ ಕಡೆಗಳಲ್ಲಿ ಮರದ ಗೆಲ್ಲುಗಳಿಗೆ ತಾಗಿಕೊಂಡೇ ವಿದ್ಯುತ್‌ ತಂತಿಗಳಿದ್ದು, ಅವುಗಳನ್ನು ಆದಷ್ಟು ಶೀಘ್ರವಾಗಿ ಆದ್ಯತೆ ನೆಲೆಯಲ್ಲಿ ಸರಿಪಡಿಸುವ ಕೆಲಸ ಮೆಸ್ಕಾಂನಿಂದ ಆಗಬೇಕಿದೆ.

ವರ್ಷದಲ್ಲಿ 4 ದುರ್ಘ‌ಟನೆ

Advertisement

1 ಸೌಕೂರಿನ ಜಾತ್ರೆಗೆ ಫೆ.25ರಂದು ಕಬ್ಬಿಣದ ಫ್ಲೆಕ್ಸ್‌ ಅಳವಡಿಸುವಾಗ ಆಕಸ್ಮಿಕವಾಗಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ನ ತಂತಿಗೆ ತಗುಲಿ ಪ್ರಶಾಂತ್‌ ದೇವಾಡಿಗ (24) ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶ್ರೀಧರ್‌ ಎಂಬುವರು ಗಂಭೀರ ಗಾಯಗೊಂಡು, ಚಿಕಿತ್ಸೆ ಪಡೆದು, ಚೇತರಿಸಿಕೊಂಡಿದ್ದರು.

2 ಕೆರ್ಗಾಲಿನ ನಾಯ್ಕನಕಟ್ಟೆಯಲ್ಲಿ ಎ. 24ರಂದು ಕಬ್ಬಿಣದ ಏಣಿಯ ಮೇಲೆ ನಿಂತು ಶಾಮಿಯಾನ ಅಳವಡಿಸುತ್ತಿರುವಾಗ ಶಾಮಿಯಾನದ ಸುತ್ತ ಹಾಕಿರುವ ಲೈಟಿಂಗ್‌ ವಯರ್‌ನಲ್ಲಿ ಇದ್ದ ಗುಂಡು ಪಿನ್‌ ಆಕಸ್ಮಿಕವಾಗಿ ಅವರ ಎದೆಯ ಬಳಿಗೆ ತಾಗಿ ಚೇತನ್‌ ಶೆಟ್ಟಿ (16) ಮೃತಪಟ್ಟ ಘಟನೆ ನಡೆದಿತ್ತು.

3 ಬೈಂದೂರಿನ ಶಿರೂರಿನಲ್ಲಿ ಅ. 18ರಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಣಿಗೆ ವಿದ್ಯುತ್‌ ತಂತಿ ಸ್ಪರ್ಶಿಸಿ ಸತೀಶ ಸುಬ್ರಾಯ ಪ್ರಭು (52) ಅವರು ಮೃತಪಟ್ಟಿದ್ದರು.

4 ನ.23ರಂದು ಗುಜ್ಜಾಡಿಯ ನಾಯಕವಾಡಿ ಚೆಕ್‌ಪೋಸ್ಟ್‌ ಬಳಿ ದೀಪೋತ್ಸವದ ಕಟ್ಟೆ ಪೂಜೆಗಾಗಿ ಮಾವಿನ ಮರದ ತೋರಣಕ್ಕಾಗಿ ಮರ ಹತ್ತಿದಾಗ ಮರದ ಸಮೀಪದಲ್ಲಿಯೇ ಹಾದು ಹೋದ ವಿದ್ಯುತ್‌ ತಂತಿ ಪ್ರವಹಿಸಿ, ಗುಜ್ಜಾಡಿಯ ಸುಜಯ (20) ಯುವಕ ಸಾವು.

ಆದ್ಯತೆ ನೆಲೆಯಲ್ಲಿ ಸರಿಪಡಿಸಿ

ಕುಂದಾಪುರ, ಬೈಂದೂರು ಭಾಗದಲ್ಲಿ ಸಾಕಷ್ಟು ಕಡೆಗಳಲ್ಲಿ ಅಪಾಯಕಾರಿ ಟಿಸಿಗಳು, ಕೆಳಮಟ್ಟದಲ್ಲಿ ನೇತಾಡುತ್ತಿರುವ ವಿದ್ಯುತ್‌ ತಂತಿಗಳು, ಹಳೆಯದಾದ ತಂತಿ, ಮರಗಳಿಗೆ ತಾಗಿಕೊಂಡ ವಿದ್ಯುತ್‌ ತಂತಿಗಳು ಹೀಗೆ ಸಾಕಷ್ಟಿವೆ. ಈ ಬಗ್ಗೆ ಈಗಲಾದರೂ ಮೆಸ್ಕಾಂ ಎಚ್ಚೆತ್ತುಕೊಳ್ಳಬೇಕಾಗಿದೆ. ಜನನಿಬಿಡ ಪ್ರದೇಶದಲ್ಲಿರುವ ಟಿಸಿಗೆ ತಡೆಬೇಲಿ ನಿರ್ಮಿಸಬೇಕಿದೆ. ಅಪಾಯಕಾರಿ ಟಿಸಿ, ವಿದ್ಯುತ್‌ ತಂತಿ ಬಗ್ಗೆ ಸಾರ್ವಜನಿಕರು ಇಲಾಖೆಯ ಗಮನಕ್ಕೆ ತಂದು ಸರಿಪಡಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಈಗ ಎಲ್ಲೆಡೆ ಜಾತ್ರೋತ್ಸವದ ಸಮಯವಾಗಿದ್ದು, ಅಲ್ಲಲ್ಲಿ ಬ್ಯಾನರ್‌, ಬಂಟಿಂಗ್ಸ್‌, ವಿದ್ಯುತ್‌ ದೀಪಗಳನ್ನು ಅಳವಡಿಸುವ ಕೆಲಸಗಳು ನಡೆಯುತ್ತಿರುತ್ತವೆ. ಈ ರೀತಿಯಾಗಿ ವಿದ್ಯುತ್‌ ತಂತಿಗಳು ಜೋತು ಬಿದ್ದಿರುವುದು, ಮರಕ್ಕೆ ತಾಗಿಕೊಂಡಿರುವ ಕಡೆಗಳಲ್ಲಿ ಜನರು ಸಹ ಎಚ್ಚರಿಕೆ ವಹಿಸಬೇಕಿದೆ.

ನಿರಂತರ ಅವಘಡ

ಈ ನಾಲ್ಕು ಪ್ರಕರಣಗಳಲ್ಲದೆ, ಕಳೆದ 5 ವರ್ಷಗಳಲ್ಲಿ ಆಕಸ್ಮಿಕ ವಿದ್ಯುತ್‌ ಅವಘಡದಿಂದ ಕುಂದಾಪುರ ಭಾಗದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ. 4 -5 ವರ್ಷ ಹಿಂದೆ ತಲ್ಲೂರಲ್ಲಿ ವಿದ್ಯುತ್‌ ಅವಘಡದಿಂದ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಕಳೆದ ವರ್ಷದ ಮೇನಲ್ಲಿ ಯರುಕೋಣೆಯಲ್ಲಿ ನೇತಾಡುತ್ತಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. 4 ವರ್ಷ ಹಿಂದೆ ಬೈಂದೂರಲ್ಲಿಯೂ ವಿದ್ಯುತ್‌ ಅವಘಡದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.

ಅಗತ್ಯ ಕ್ರಮ: ಈಗಾಗಲೇ ಮೆಸ್ಕಾಂನಿಂದ ಅಪಾಯಕಾರಿ ತಂತಿ ಗಳಿದ್ದಲ್ಲಿ ಮರದ ಗೆಲ್ಲುಗಳನ್ನು ತೆಗೆಯಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿದ್ದು, ಮರ ತೆಗೆಯಲು ಮಾತ್ರ ಅರಣ್ಯ ಇಲಾಖೆ ಅನುಮತಿ ಬೇಕಿರುತ್ತದೆ. ಅಂತಹ ಅಪಾಯಕಾರಿ ಮರಗಳಿದ್ದರೆ ಸಾರ್ವಜನಿಕರು ನಮ್ಮ ಗಮನಕ್ಕೆ ತಂದಲ್ಲಿ, ಅಗತ್ಯ ಕ್ರಮ ಜರಗಿಸಲಾಗುವುದು. ಟಿಸಿ ಸ್ಥಳಾಂತರ ಅಥವಾ ಬದಲಾವಣೆಗೆ ಯಾವುದೇ ಕ್ರಮಗಳಿಲ್ಲ. – ರಾಕೇಶ್‌, ಕಾರ್ಯಪಾಲಕ ಎಂಜಿನಿಯರ್‌, ಮೆಸ್ಕಾಂ ಕುಂದಾಪುರ ಉಪವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next