Advertisement

ನಮ್ಮಲ್ಲಿನ ವಾತಾವರಣದಲ್ಲಿಯೂ ಬೆಳೆಯಬಹುದು ಹೂಕೋಸು

12:06 AM Feb 09, 2020 | Sriram |

ಎಲ್ಲೋ ಹೂಕೋಸು ಬೆಳೆದು ನಮ್ಮಲ್ಲಿ ಅದರ ಸವಿ ಸವಿಯುವ ಕಾಲ ನಿಧಾನವಾಗಿ ದೂರವಾಗುತ್ತಿದೆ. ಕರಾವಳಿ ಜಿಲ್ಲೆಗಳ ಭಾಗದಲ್ಲೂ ಹೂಕೋಸು ಬೆಳೆಯಲು ಸಾಧ್ಯವಿದೆ ಎಂಬುದು ಸಾಬೀತಾಗುತ್ತಿದೆ. ದ.ಕ. ಜಿಲ್ಲೆಯ ವಿವಿಧೆಡೆ ಹಾಗೂ ಕಾಸರಗೋಡು ಆಸುಪಾಸಿನಲ್ಲೂ ಹೂಕೋಸು ಯಶಸ್ವಿ ಬೆಳೆಯಾಗಿ ಬೆಳೆಯುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

Advertisement

ಕಾಲಿ ಫ್ಲವರ್‌ ಮೂಲತಃ ವಿದೇಶಿ ತರಕಾರಿ. ಶತಮಾನಗಳ ಇತಿಹಾಸ ಈ ಕೃಷಿ ಬೆಳೆಗೆ ಇದೆ. ಹಾಗಿದ್ದರೂ ಅದು ಭಾರತದಲ್ಲಿ ಬೆಳೆಯುತ್ತಿದ್ದುದು ಅಪರೂಪ. 1800ನೇ ಇಸವಿಯ ಸಮಯದಲ್ಲಿ ಭಾರತದಲ್ಲೂ ಈ ತರಕಾರಿ ಬೆಳೆಯುವುದಕ್ಕೆ ಆರಂಭವಾಯಿತು. ಇಂದು ದೇಶದ ಬಿಹಾರ, ಉತ್ತರಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಲ್ಲಿ ಪ್ರಮುಖ ಬೆಳೆಯಾಗಿಯೂ ಸ್ಥಾನ ಪಡೆಯುತ್ತಿದೆ. ಅದೇ ಸಮಯದಲ್ಲಿ ರಾಜ್ಯದ ಕೆಲವು ಕಡೆಗಳಲ್ಲಿ ಕಾಲಿಫÉವರ್‌ ತರಕಾರಿ ಬೆಳೆಯಾಗಿ ವಿಸ್ತಾರಗೊಂಡಿದೆ.

ಸಾಧಾರಣ ಶೀತ ಪ್ರದೇಶದಲ್ಲಿ
ಹೆಚ್ಚಾಗಿ ಶೀತ ಪ್ರದೇಶದಲ್ಲಿ ಅಂದರೆ 18 ಡಿಗ್ರಿಯಿಂದ 20 ಡಿಗ್ರಿಯ ಒಳಗಿನ ವಾತಾವರಣದಲ್ಲಿ ಕಾಲಿ ಫ್ಲವರ್‌ ಹುಲುಸಾಗಿ ಬೆಳೆಯಬಲ್ಲುದು. ಹಾಗೆಂದು ಅತ್ಯಧಿಕ ಶೀತ ವಾತಾವರಣ ಅಂದರೆ 5 ಡಿಗ್ರಿಗಿಂತಲೂ ಕಡಿಮೆ ಉಷ್ಣತೆ ಬಂದರೆ ಗಿಡ ಬೆಳೆಯುವುದು ನಿಧಾನವಾಗುತ್ತದೆ ಎಂದು ಆಹಾರ ವಿಜ್ಞಾನಿಗಳು ವಿವರಣೆ ನೀಡುತ್ತಾರೆ.

3 ತಿಂಗಳಲ್ಲಿ ಕಟಾವು
ಸರಾಸರಿ ಪ್ರತೀ ಕೆ.ಜಿ. ಗೆ 70 ರೂ.ನಷ್ಟು ಸ್ಥಳೀಯ ಮಾರುಕಟ್ಟೆಗಳಲ್ಲಿ ಕಾಲಿ ಫ್ಲವರ್‌ಗೆ ಬೆಲೆ ಇದೆ. ಅಕ್ಟೋಬರ್‌ ವೇಳೆಗೆ ನಾಟಿ ಮಾಡಿದರೆ 3 ತಿಂಗಳಲ್ಲಿ ಕಟಾವಿಗೆ ಆರಂಭವಾಗುತ್ತದೆ. ಕಟಾವಿಗೆ ಬಂದ ಅನಂತರ ಮಾರುಕಟ್ಟೆಯನ್ನೂ ಸ್ಥಳೀಯವಾಗಿಯೇ ಕಂಡುಕೊಳ್ಳಬಹುದು. ಬೆಂಡೆ, ಅಲಸಂಡೆ ಸಹಿತ ವಿವಿಧ ತರಕಾರಿ ಕೃಷಿಯ ಜತೆಗೆ ಕಾಲಿ ಫ್ಲವರ್‌ ಅನ್ನೂ ಸೇರಿಸಿಕೊಳ್ಳಬಹುದು. ಗಿಡ ಬೆಳವಣಿಗೆಗೆ ಗೊಬ್ಬರ ಹಾಕಿದರೆ ಸಾಕು. ದೊಡ್ಡ ಮಟ್ಟದ ರಾಸಾಯನಿಕ ಸಿಂಪಡಣೆ ಮಾಡುವ ಅಗತ್ಯವೂ ಬೀಳುವುದಿಲ್ಲ ಎನ್ನುತ್ತಾರೆ ಸ್ಥಳೀಯ ಬೆಳೆಗಾರರು.

ಅನುಕೂಲಕರ ವಾತಾವರಣ
ಇದೀಗ ಕರಾವಳಿ ಜಿಲ್ಲೆ ಅದರಲ್ಲೂ ಸುಳ್ಯ, ಪುತ್ತೂರು, ಬೆಳ್ತಂಗಡಿಯಂತಹ ಪ್ರದೇಶ ಹಾಗೂ ಕಾಸರಗೋಡು, ಕಾಂಞಂಗಾಡ್‌ ಪ್ರದೇಶವು ಕಾಲಿ ಫ್ಲವರ್‌ ಬೆಳೆ ಹಾಗೂ ಅದೇ ಮಾದರಿಯನ್ನು ಹೋಲುವ ಕ್ಯಾಬೇಜ್‌, ಕ್ಯಾರೇಟ್‌ ಬೆಳೆಯಲೂ ಅನುಕೂಲವಾದ ವಾತಾವರಣವಾಗಿ ಕಂಡುಬಂದಿದೆ. ಈಗಾಗಲೇ ಹಲವಾರು ಮಂದಿ ಪ್ರಾಯೋಗಿಕವಾಗಿ ಬೆಳೆದು ಯಶಸ್ಸು ಕಂಡಿದ್ದಾರೆ. ದ.ಕ. ಜಿಲ್ಲೆಯ ಮುಂಡಾಜೆಯ ರಾಮಣ್ಣ ಸೇರಿದಂತೆ ಹಲವು ಮಂದಿ ಈ ಬೆಳೆಯಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಮಂಗಳೂರಿನ ಸಾವಯವ ಸಂತೆಯಲ್ಲಿ ಸ್ಥಳೀಯವಾಗಿ ಬೆಳೆದ ಹೂಕೋಸು, ಕ್ಯಾಬೇಜ್‌, ಕ್ಯಾರೆಟ್‌ ಮಾರಾಟವಾಗುತ್ತಿದೆ. ಕಾಸರಗೋಡು ಜಿಲ್ಲೆಯ ಹೊಸದುರ್ಗಾ ತಾಲೂಕಿನ ಬೆಳ್ಳರಿಕುಂಡ ಪರಪ್ಪದ ಕುಂಞಂಬು ನಾಯರ್‌ ಕಾಲಿ ಫ್ಲವರ್‌ ಹಾಗೂ ಕ್ಯಾಬೇಜ್‌ ಬೆಳೆಯಲ್ಲಿ ಪರಿಣತರಾಗಿದ್ದಾರೆ. ಕಳೆದ 5 ವರ್ಷಗಳಿಂದ ಕಾಲಿ ಫ್ಲವರ್‌ ಕೃಷಿ ಮಾಡಿ ಸ್ವತಃ ಮಾರಾಟವನ್ನು ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next