ಚೆನ್ನೈ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ತೊಪ್ಪೂರ್ ಘಾಟ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು ಮತ್ತು ಎಂಟು ಜನರು ಗಾಯಗೊಂಡಿದ್ದಾರೆ.
ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೇಗವಾಗಿ ಬಂದ ಸರಕು ತುಂಬಿದ ಟ್ರಕ್ ಒಂದು ಎದುರಿಗೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಎದುರಿನ ಲಾರಿ ಇನ್ನೊಂದು ಟ್ರಕ್ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಎದುರಿಗಿದ್ದ ಟ್ರಕ್ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ ಅಲ್ಲದೆ ಎಂಟು ಮಂದಿ ಗಾಯಗೊಂಡಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಈ ಅವಘಡಲ್ಲಿ ಒಂದು ಲಾರಿಗೆ ಬೆಂಕಿ ಹೊತ್ತಿಕೊಂಡಿದೆ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಅಪಘಾತದ ಕುರಿತು ಪ್ರತಿಕ್ರಿಯಿಸಿದ ಧರ್ಮಪುರಿ ಡಿಎಂಕೆ ಸಂಸದ ಸೆಂಥಿಲ್ ಕುಮಾರ್, ಹೆದ್ದಾರಿ ಅಗಲೀಕರಣ ಪೂರ್ಣಗೊಳ್ಳದಿರುವುದೇ ಅಪಘಾತಕ್ಕೆ ಕಾರಣವಾಗಿದೆ ಆದಷ್ಟು ಬೇಗ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕೇಂದ್ರಕ್ಕೆ ಒತ್ತಾಯ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.