Advertisement

ಹೆಚ್ಚುತ್ತಿರುವ ಅಪಘಾತ ಸಂಖ್ಯೆ, ನಿಯಂತ್ರಣಕ್ಕೆ  ಬೇಕಿದೆ  ಸಮರ್ಪಕ ಕ್ರಮ

05:46 PM Feb 02, 2022 | Team Udayavani |

ಬೈಂದೂರು: ಅಭಿವೃದ್ಧಿಗಳು ಬೆಳವಣಿಗೆಯ ಮುನ್ನುಡಿಯಾದರೂ ಸಹ ಕೆಲವೊಮ್ಮೆ ಒಂದು ಹಂತದ ಪ್ರಗತಿ ಇನ್ನೊಂದು ಹಂತದಲ್ಲಿ ಪರೋಕ್ಷ ಸಮಸ್ಯೆಗೆ ರಹದಾರಿಯಾಗಿರುತ್ತದೆ ಅನ್ನುವುದಕ್ಕೆ ರಾ.ಹೆ. ಚತುಷ್ಪಥ ಕಾಮಗಾರಿ ಪ್ರಮುಖ ಉದಾಹರಣೆಯಾಗಿದೆ. ಪ್ರತೀ ವರ್ಷ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಾಗುತ್ತಿರುವ ರಾ.ಹೆ.ಯಲ್ಲಿ ಕೇವಲ 10 ತಿಂಗಳುಗಳಲ್ಲಿ 620 ಜಾನುವಾರುಗಳು ಸಾವನ್ನಪ್ಪಿವೆ.

Advertisement

ಅಪಘಾತಗಳಿಗೆ ಕಾರಣಗಳೇನು?
ಹೈನುಗಾರಿಕೆ ಮತ್ತು ಕೃಷಿ ಕರಾವಳಿ ಭಾಗದ ಜನರ ಪ್ರಮುಖ ಕಸುಬು ಆಗಿದೆ. ಕರಾವಳಿ ಭಾಗದ ಪ್ರತಿಯೊಂದು ಯೋಜನೆಗಳ ಅನುಷ್ಠಾನದ ಪೂರ್ವದಲ್ಲಿ ಸಮರ್ಪಕ ಮುಂದಾಲೋಚನೆ ಕೊರತೆ ಇರುವುದು ಮತ್ತು ನಿರಂತರ ಸಮಸ್ಯೆಗಳಿಗೆ ಆಸ್ಪದ ನೀಡುವ  ಕಾಮಗಾರಿಗಳು ಕರಾವಳಿಗರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ಹೆದ್ದಾರಿ ನಿರ್ಮಾಣದ ವೇಳೆ ಅದರಲ್ಲೂ ಪ್ರಮುಖವಾಗಿ ಬೈಂದೂರು ಭಾಗದಲ್ಲಿ ಚರಂಡಿ ಹಾಗೂ ಸಮರ್ಪಕ ಮಳೆನೀರು ನೀರು ವಿಲೇವಾರಿ ಕೊರತೆಯಿಂದ ಒತ್ತಿನೆಣೆ ಗುಡ್ಡದಿಂದ  ಮಳೆನೀರಿನೊಂದಿಗೆ ಜೇಡಿ ಮಣ್ಣು ಹರಿದು  ನೂರಾರು ಎಕರೆ ಕೃಷಿಭೂಮಿಯನ್ನು ಆವರಿಸಿದೆ. ಮಾತ್ರವಲ್ಲದೆ ಬಿಜೂರು ಮುಂತಾದ ಕಡೆ ಮಳೆಗಾಲದಲ್ಲಿ ಕೃಷಿ ಭೂಮಿಗೆ ನೀರು ನುಗ್ಗುತ್ತಿದೆ. ಕರಾವಳಿ ಭಾಗದಲ್ಲಿ ಕೃಷಿ ಹಾಗೂ ಹೈನುಗಾರಿಕೆಯ ಪ್ರಮುಖ ಕಸುಬುಬಾದರೂ  ಚತುಷ್ಪಥ ಕಾಮಗಾರಿ ವೇಳೆ ಬಹುತೇಕ ಕಡೆಗಳಲ್ಲಿ ಕೌ ಬ್ಯಾರಿಯರ್‌ ನಿರ್ಮಿಸಿಲ್ಲ. ಇದರಿಂದಾಗಿ ನಿತ್ಯ ಹತ್ತಾರು ದನ ಕರುಗಳು ದಾರುಣವಾಗಿ ಹೆದ್ದಾರಿಯಲ್ಲಿ ಸಾವನ್ನಪ್ಪುತ್ತಿದೆ.

ಕಾಮಗಾರಿ ನಡೆಸುವ ಕಂಪೆನಿಗಳು ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನದಲ್ಲಿ ಇನ್ನಷ್ಟು ಸಮಸ್ಯೆಗಳ ಸೃಷ್ಟಿಗೆ ಆಸ್ಪದ ನೀಡಿದಂತಾಗುತ್ತದೆ. ಅಲ್ಲದೆ ಗೋವುಗಳು ಸಂಸ್ಕೃತಿಯ ಭಾಗವಾದ ಕಾರಣ ಒಂದೆರಡು ಬಾರಿ ಸಂಘಟನೆಗಳು ಕೂಡ ತಡೆಬೇಲಿ ಮತ್ತು ಅವುಗಳಿಗೆ ಆಶ್ರಯ ಕಲ್ಪಿಸಲು  ಆಗ್ರಹಿಸಿದೆ. ಆದರೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

ಬೀದಿದೀಪ ಸರಿಪಡಿಸಿ
ಡಿವೈಡರ್‌ನಲ್ಲಿ ಹುಲ್ಲು ಬೆಳೆದಿರುವುದರಿಂದ ದನಗಳು  ಆಹಾರ ಹುಡುಕಿ ಬರುತ್ತವೆೆ. ಹುಲ್ಲನ್ನು ತೆರವುಗೊಳಿಸುವ ಬಗ್ಗೆಯೂ ಹೆದ್ದಾರಿ ಪ್ರಾಧಿಕಾರ ಗಮನ ಹರಿಸುವುದು ಅಗತ್ಯವಾಗಿದೆ. ಅಲ್ಲದೆ ರಸ್ತೆಯಲ್ಲಿ ಬೀದಿ ದೀಪದ ಕೊರತೆ ಇರುವುದರಿಂದ ಪಕ್ಕನೆ ಸವಾರರ ಕಣ್ಣಿಗೆ ಬೀಳದೆ  ಜಾನುವಾರುಗಳು ಅಪಘಾತಕ್ಕೆ ಬಲಿಯಾಗುತ್ತಿವೆ. ಬೀದಿ ದೀಪಗಳನ್ನು ಸರಿಪಡಿಸುವುದು, ಅವುಗಳ ನಿರಂತರ ನಿರ್ವಹಣೆಯ ಬಗ್ಗೆಯೂ ಮುತುವರ್ಜಿ ವಹಿಸುವುದು ಅಗತ್ಯವಾಗಿದೆ.

ಕ್ರಮಕೈಗೊಳ್ಳಬೇಕು
ರಸ್ತೆ ಡಿವೈಡರ್‌ನಲ್ಲಿ ಹುಲ್ಲುಗಳನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡದಿರುವುದು ಮತ್ತು ಕೌ ಬ್ಯಾರಿಯರ್‌ ಇಲ್ಲದಿರುವುದು ಜಾನುವಾರುಗಳ ಅಪಘಾತಗಳಿಗೆ ಕಾರಣವಾಗುತ್ತದೆ. ಹೆದ್ದಾರಿಯಲ್ಲಿ ಸಾಯುವ ಜಾನುವಾರುಗಳ ಮಾಲಕರಿಗೆ ಯಾವುದೇ ಪರಿಹಾರ ದೊರಕುವುದಿಲ್ಲ. ಇಲಾಖೆ, ಹೆದ್ದಾರಿ ಪ್ರಾಧಿಕಾರ ಇವುಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು.
– ಡಾ| ನಾಗರಾಜ್‌ ಮರವಂತೆ,
ಪಶು ವೈದ್ಯಾಧಿಕಾರಿ ಬೈಂದೂರು

Advertisement

ಆತಂಕಕಾರಿ
ಕಾರವಾರದಿಂದ -ಕುಂದಾಪುರದ ವರೆಗೆ ನಿರಂತರವಾಗಿ ಹೆದ್ದಾರಿಯಲ್ಲಿ ಜಾನುವಾರುಗಳು ದಾರುಣವಾಗಿ ಸಾಯುತ್ತಿದೆ. ಇದು ಕೃಷಿಕರಿಗೆ ಮತ್ತು ಪ್ರಯಾಣಿಕರಿಗೆ ಆತಂಕಕಾರಿ. ಬೀಡಾಡಿ ದನಗಳಿಗೆ ಗೋಶಾಲೆ ನಿರ್ಮಾಣವಾಗಬೇಕು ಮತ್ತು ತಡೆಬೇಲಿ ಮೂಲಕ ಪ್ರಮುಖ ಸ್ಥಳಗಳಲ್ಲಿ ಜಾನುವಾರು ಹೆದ್ದಾರಿಗೆ ಸಾಗುವುದನ್ನು ನಿಯಂತ್ರಿಸಬೇಕು.
-ಸುಧಾಕರ ಶೆಟ್ಟಿ ನೆಲ್ಯಾಡಿ,  ವಿ.ಹಿಂ.ಪ. ಬಜರಂಗದಳ ಸಂಚಾಲಕ

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next