ಹೊಸದಿಲ್ಲಿ: ಜಾನುವಾರುಗಳನ್ನು ವಧೆಗಾಗಿ ಖರೀದಿ ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಿದ್ದ ಕೇಂದ್ರ ಸರಕಾರ, ಮದ್ರಾಸ್ ಹೈಕೋರ್ಟ್ ಬಳಿಕ ಇದೀಗ ಸುಪ್ರೀಂಕೋರ್ಟ್‌ನಲ್ಲೂ ಮುಖಭಂಗ ಅನುಭವಿಸಿದೆ. ಗೋವುಗಳನ್ನು ವಧೆಗಾಗಿ ಮಾರಾಟ ಮಾಡುವುದನ್ನು ನಿರ್ಬಂಧಿಸಿ ಮೇ 23 ರಂದು ಕೇಂದ್ರ ಸರಕಾರ ಹೊರಡಿಸಿದ್ದ ಅಧಿಸೂಚನೆಗೆ ಮದ್ರಾಸ್ ಹೈಕೋರ್ಟ್ ಮೇ 30 ರಂದು ತಡೆಯಾಜ್ಞೆ ನೀಡಿತ್ತು. ಅಲ್ಲದೆ ಈ ತಡೆಯಾಜ್ಞೆ ಮುಂದಿನ 4 ವಾರಗಳವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಿತ್ತು. ಈಗ ಈ ಸಂಬಂಧ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಆದೇಶ ಸಮಂಜಸವಾಗಿದೆ ಎಂದು ಹೇಳಿದ್ದಲ್ಲದೆ ಇದನ್ನು ಇಡೀ ದೇಶಕ್ಕೆ ಅನ್ವಯವಾಗುವಂತೆ ಆದೇಶ ನೀಡಿದೆ.
ಕೇಂದ್ರ ಸರಕಾರದ ಈ ನಿರ್ಧಾರವನ್ನು ವಿರೋಧಿಸಿದ್ದ ಕರ್ನಾಟಕ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ ಪ್ರತಿಭಟನೆಯೂ ವ್ಯಕ್ತವಾಗಿತ್ತು. ಅಲ್ಲದೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಈಶಾನ್ಯ ಭಾಗದ ರಾಜ್ಯಗಳಿಂದಲೂ ಭಾರೀ ಆಕ್ಷೇಪ ಬಂದಿತ್ತು. ಹೀಗಾಗಿ, ಸು.ಕೋ.ನ ಮಂಗಳವಾರದ ಆದೇಶ ಮತ್ತು ಮಧುರೈ ಹೈಕೋರ್ಟ್ ಪೀಠದ ತಡೆಯಾಜ್ಞೆ ಆದೇಶವನ್ನು ತೆರವು ಮಾಡಿ ಎಂದು ಮನವಿ ಸಲ್ಲಿಸುವುದಿಲ್ಲ ಎಂದು ಕೇಂದ್ರ ಸರಕಾರ ಕೋರ್ಟ್‌ಗೆ ಹೇಳಿದೆ.
ವಿವಾದಿತ ಅಧಿಸೂಚನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾ| ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠ, ‘ಆಹಾರ ಕ್ರಮಕ್ಕೆ ನಿರ್ಬಂಧ ಹೇರುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಮಧುರೈ ನ್ಯಾಯಪೀಠ ನೀಡಿರುವ ತಡೆಯಾಜ್ಞೆ ಮುಂದುವರಿಯಲಿದೆ. ಇದು ಇಡೀ ದೇಶಕ್ಕೆ ಅನ್ವಯಿಸುತ್ತದೆ’ ಎಂದು ಹೇಳಿದೆ.
ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ, ಸದ್ಯಕ್ಕೆ ಮದ್ರಾಸ್ ಹೈಕೋರ್ಟ್‌ನ ತಡೆಯಾಜ್ಞೆ ಆದೇಶ ತೆರವುಗೊಳಿಸಲು ಮನವಿ ಸಲ್ಲಿಸುವುದಿಲ್ಲ ಎಂದರು. ಅಲ್ಲದೆ ಈ ಅಧಿಸೂಚನೆ ಬಗ್ಗೆ ದೇಶದ ಎಲ್ಲೆಡೆಯಿಂದ ಪರ – ವಿರೋಧದ ಅಭಿಪ್ರಾಯಗಳು ಬರುತ್ತಿವೆ. ಇವುಗಳನ್ನು ಕ್ರೋಡೀಕರಿಸಿ ಅಧ್ಯಯನ ನಡೆಸಿ ಅಧಿಸೂಚನೆಯಲ್ಲಿ ಬದಲಾವಣೆ ತರುವ ಬಗ್ಗೆ ಆಲೋಚನೆಯಲ್ಲಿ ಇದ್ದೇವೆ. ಇದಕ್ಕೆ ಒಂದಷ್ಟು ಸಮಯ ಬೇಕು ಎಂದು ಹೇಳಿದರು. ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಮೇ 23ರಂದು ಕೇಂದ್ರ ಸರಕಾರ ಗೋವುಗಳನ್ನು ವಧೆಗಾಗಿ ಖರೀದಿ ಹಾಗೂ ಮಾರಾಟ ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ವಿರೋಧಿಸಿ ಅಖೀಲ ಭಾರತ ಜಮೀಯತುಲ್ ಖುರೇಶ್ ಆ್ಯಕ್ಷನ್ ಕಮಿಟಿ ಕೋರ್ಟ್ ಮೆಟ್ಟಿಲೇರಿತ್ತು.
ಮಧುರೈ ಪೀಠದ ಆದೇಶ
ಅಧಿಸೂಚನೆಗೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‌ನ ಮಧುರೈ ನ್ಯಾಯಪೀಠ ತಮಿಳುನಾಡಿನಲ್ಲಿ ಜಾರಿಗೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿ, ಈ ಬಗ್ಗೆ ವಿವರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ನೀಡಿತ್ತು. ‘ಆಹಾರ ಕ್ರಮ ಅವರವರ ಹಕ್ಕು. ಇದರಲ್ಲಿ ಮಧ್ಯಪ್ರವೇಶ ಬೇಡ’ ಎಂದೂ ಹೇಳಿತ್ತು.
ಅಧಿಸೂಚನೆ ಪಾಲನೆಗೆ ಕರ್ನಾಟಕ ನಕಾರ
ಕೇಂದ್ರ ಸರಕಾರದ ಈ ಅಧಿಸೂಚನೆಯನ್ನು ಪಾಲನೆ ಮಾಡುವ ಪ್ರಮೇಯವೇ ಇಲ್ಲ ಎಂದು ಈಗಾಗಲೇ ಕರ್ನಾಟಕ, ಕೇರಳ, ತ್ರಿಪುರಾ, ಪಶ್ಚಿಮ ಬಂಗಾಲ ಹೇಳಿದ್ದಾಗಿಯೂ ಅರ್ಜಿದಾರರ ಪರ ವಕೀಲರು ಕೋರ್ಟ್ ನಲ್ಲಿ ಪ್ರಸ್ತಾವಿಸಿದರು.