Advertisement

ಕಾರ್ಕಳದ ಮಹಿಳೆಯ ಕಣ್ಣೀರ ಕಥೆ: ಒಂದೇ ಹಟ್ಟಿಯ 16 ಹಸುಗಳು ಕಟುಕರ ಪಾಲು!

01:18 AM Jan 10, 2022 | Team Udayavani |

ಕಾರ್ಕಳ: ಇಲ್ಲೊಬ್ಬಳು ಮಹಿಳೆ ಮಕ್ಕಳಂತೆ ಸಾಕಿ ಸಲಹಿದ್ದ 16 ಗೋವುಗಳು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಕಟುಕರ ಪಾಲಾಗಿದ್ದು, ಆ ಮಾತೆಯ ಮನೆಯಲ್ಲೀಗ ಸೂತಕದ ಛಾಯೆ ಮನೆ ಮಾಡಿದೆ.

Advertisement

ಕಾರ್ಕಳ ತಾಲೂಕು ಕರಿಯಕಲ್ಲು ಕಜೆ ನಿವಾಸಿ 58ರ ಹರೆಯದ ಯಶೋದಾ 18 ವರ್ಷಗಳಿಂದ ಹೈನು ಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮುಖ್ಯ ರಸ್ತೆಯಿಂದ 1.5 ಕಿ.ಮೀ. ದೂರದಲ್ಲಿರುವ ಪುಟ್ಟ ಹೆಂಚಿನ ಮನೆಯಲ್ಲಿ ಪುತ್ರಿ ಯೊಂದಿಗೆ ವಾಸ. ಪತಿ ವಿಟಲ ಆಚಾರ್ಯ 24 ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಅಂದಿನಿಂದ ತಾಯಿ-ಮಗಳಿಗೆ ಹೈನುಗಾರಿಕೆಯೇ ಜೀವನಾಧಾರ.

ಇತ್ತೀಚಿನ ವರ್ಷಗಳಲ್ಲಿ ಕರಾವಳಿಯಲ್ಲಿ ದನಗಳ್ಳರ ಹಾವಳಿ ಮಿತಿ ಮೀರಿದ್ದು ಹಟ್ಟಿಗೇ ನುಗ್ಗುವ ಧೈರ್ಯ  ತೋರುತ್ತಿದ್ದಾರೆ. ತಲವಾರು ತೋರಿಸಿ ಮನೆಮಂದಿಯನ್ನು ಹೆದರಿಸಿ ಹಸುಗಳನ್ನು ಸೆಳೆದೊಯ್ದ ಪ್ರಕರಣ ಗಳೂ ಇವೆ. ಮೇಯಲು ಕಟ್ಟಿರುವುದನ್ನು ಕದ್ದೊಯ್ಯುವುದೂ ಇದೆ. ಅಂತೆಯೇ ಯಶೋದಾ ಕಳೆದ ಒಂದೂ ವರ್ಷದಿಂದ 15 ದನಗಳನ್ನು ಕಳೆದುಕೊಂಡಿದ್ದರು. ಕೊನೆಯದಾಗಿ ಜ. 3ರ ರಾತ್ರಿ ಹಟ್ಟಿಯಲ್ಲಿದ್ದ ತುಂಬು ಗಬ್ಬದ ಹಸು ಕಟುಕರ ಪಾಲಾಗಿದೆ. ಕಳ್ಳರು ನುಗ್ಗಿರುವ ವಿಷಯ ತಿಳಿದರೂ ತಲವಾರಿನ ಭಯದಿಂದ ತಾಯಿ-ಮಗಳು ಮನೆಯಿಂದ ಹೊರಗೆ ಬರಲಿಲ್ಲ. 16ನೇ ಹಸುವನ್ನೂ ಕಳೆದುಕೊಂಡು ದಿಕ್ಕೇ ತೋಚದೆ ಕಣ್ಣೀರು ಸುರಿಸುತ್ತಿದ್ದಾರೆ.

ಹೊಸ ಮನೆ ಕನಸು ಛಿದ್ರ
ದಿನವೊಂದಕ್ಕೆ 25ರಿಂದ 30 ಲೀ. ಹಾಲು ಡೈರಿಗೆ ಹಾಕುತ್ತಿದ್ದರು. ಮಾಸಿಕ 10ರಿಂದ 15 ಸಾವಿರ ರೂ. ಆದಾಯ ಬರುತ್ತಿತ್ತು. ಹಸುಗಳನ್ನೇ ನಂಬಿ 6 ಲಕ್ಷ ರೂ. ಬ್ಯಾಂಕ್‌ ಸಾಲ ಮಾಡಿ ಮನೆ ಕಟ್ಟಲು ಆರಂಭಿಸಿದ್ದರು. ಒಂದೊಂದೇ ಹಸುಗಳು ಕಳ್ಳರ ಪಾಲಾಗುತ್ತಿದ್ದಂತೆ ಆದಾಯಕ್ಕೂ ಕುತ್ತು ಬಂದಿದೆ. ಸರಕಾರದ ಕಡೆಯಿಂದಲೂ ಪರಿಹಾರ ಸಿಕ್ಕಿಲ್ಲ. ಮನೆ ಕೆಲಸ ಅರ್ಧದಲ್ಲೇ ಉಳಿದಿದೆ. ತಾಯಿ-ಮಗಳು ದಿಕ್ಕೆಟ್ಟು ಕುಳಿತಿದ್ದಾರೆ.

ಈ ಹಿಂದಿನ ಪ್ರಕರಣಗಳನ್ನು ಪೊಲೀಸರ ಗಮನಕ್ಕೆ ತಂದಿದ್ದರೂ ಯಾವುದೇ ಪರಿಣಾಮ ಆಗಿಲ್ಲ ಎನ್ನುತ್ತಾರೆ ಸಂತ್ರಸ್ತೆ ಯಶೋದಾ.

Advertisement

ಇದನ್ನೂ ಓದಿ:ಭಾರತದತ್ತ ಬಂದಿದ್ದ ಪಾಕ್‌ ದೋಣಿ ವಶ; 10 ಜನರ ಬಂಧನ

ಪಕ್ಕದ ಮನೆಯ 12 ಹಸು ಕಳವು!
ಯಶೋದಾ ಅವರ ಮನೆಯಿಂದ ಅನತಿ ದೂರದಲ್ಲಿರುವ ಗ್ರಾ.ಪಂ. ಮಾಜಿ ಸದಸ್ಯ ಸುಧಾಕರ ಶೆಟ್ಟಿ ಅವರ ಹಟ್ಟಿಯಿಂದಲೂ ಇದುವರೆಗೆ 12 ಗೋವುಗಳ ಕಳವಾಗಿದೆ. ಯಶೋದಾ ಅವರ ಹಸುವಿನ ಕಳವು ನಡೆದ ಎರಡು ದಿನಗಳಲ್ಲಿ ಇವರ ಹಟ್ಟಿಯಿಂದಲೂ ಹಾಲು ಕೊಡುವ ಹಸುವನ್ನು ಕಟುಕರು ಕದ್ದೊಯ್ದಿದ್ದಾರೆ.

ಪರಿಸರದ ಹಲವು ಮನೆಯವರ ಹಟ್ಟಿಯಿಂದಲೂ ನಿರಂತರ ದನಗಳ ಕಳವು ನಡೆಯುತ್ತಿದೆ. ಆದರೆ ಹೆಚ್ಚಿನವರೂ ಪೊಲೀಸರಿಗೆ ದೂರು ನೀಡುವುದರಿಂದ “ಪ್ರಯೋಜನ ಶೂನ್ಯ’ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದರೂ ಕಳ್ಳತನ ನಿರಂತರವಾಗಿದೆ.

ಯಶೋದಾ ಅವರ ಗಬ್ಬದ ಹಸು ಕಳವಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸಿಸಿ ಕೆಮರಾ ಇತ್ಯಾದಿ ಪರಿಶೀಲನೆ ನಡೆಸುತ್ತಿದ್ದೇವೆ. ಒಂದಿಬ್ಬರ ಮೇಲೆ ಅನುಮಾನ ವ್ಯಕವಾಗಿದ್ದು, ಅವರನ್ನು ವಿಚಾರಿಸುತ್ತಿದ್ದೇವೆ.
– ಮಧು ಬಿ.ಇ. ಉಪನಿರೀಕ್ಷಕರು, ಕಾರ್ಕಳ ನಗರ ಠಾಣೆ

ಮಕ್ಕಳಂತೆ ಸಾಕಿದ್ದ ನನ್ನ ಹಸುಗಳೆಲ್ಲ ಕಟುಕರ ಪಾಲಾಗಿವೆ. ಮನೆಯಲ್ಲಿ ತಾಯಿ-ಮಗಳು ನಾವಿಬ್ಬರೇ ಇರುವುದು. ದನಗಳ್ಳರ ಕಾರಣದಿಂದ ರಾತ್ರಿ ಮನೆಯಿಂದ ಹೊರಬರುವುದಕ್ಕೂ ಭಯವಾಗುತ್ತಿದೆ. ಹಸುಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದೆವು. ಈ ಅದೂ ಇಲ್ಲವಾಗಿದೆ.
– ಯಶೋದಾ ಆಚಾರ್ಯ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next