ಹೊಸದಿಲ್ಲಿ: ‘ದೇಶಾದ್ಯಂತ ವಧೆಗಾಗಿ ನಡೆಯುವ ಜಾನುವಾರುಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯ ಮೇಲೆ ಕಾನೂನಿನ ನಿಯಂತ್ರಣ ಹೊಂದುವ ಉದ್ದೇಶದಿಂದ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ವಿವಾದಾತ್ಮಕ ಅಧಿಸೂಚನೆ ‘ವಧೆಗಾಗಿ ಜಾನುವಾರು ಮಾರಾಟ ಮತ್ತು ಖರೀದಿ’ ನಿಷೇಧದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಸರಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ, ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಎರಡು ಪ್ರತ್ಯೇಕ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಆರ್.ಕೆ. ಅಗರ್ವಾಲ್ ಹಾಗೂ ನ್ಯಾ| ಎಸ್.ಕೆ. ಕೌಲ್ ಅವರನ್ನೊಳಗೊಂಡ ರಜಾ ಅವಧಿಯ ನ್ಯಾಯಪೀಠ, ಅಧಿಸೂಚನೆ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಮರ್ಪಕ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿ, ಮುಂದಿನ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿದೆ.
ಸರಕಾರದ ಅಧಿಸೂಚನೆ ಧಾರ್ಮಿಕ ಆಚರಣೆಗಳಿಗೆ ವಿರುದ್ಧವಾಗಿದೆ. ಅಲ್ಲದೆ, ಆಹಾರ ಮತ್ತಿತರ ಮೂಲ ಹಕ್ಕುಗಳಿಗೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಿದೆ. ಈಗಾಗಲೇ ಕೇರಳ, ಪಶ್ಚಿಮ ಬಂಗಾಲ, ತ್ರಿಪುರಾ ಮತ್ತು ಕರ್ನಾಟಕ ರಾಜ್ಯಗಳು ಅಧಿಸೂಚನೆ ಜಾರಿಗೊಳಿಸದಿರಲು ನಿರ್ಧರಿಸಿವೆ. ಈ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು.
ಎಲ್ಲವೂ ಸರಿಹೋಗುತ್ತೆ: ಅಧಿಸೂಚನೆ ವಿರುದ್ಧದ ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೂಚಿಸಿರುವ ಬೆನ್ನಲ್ಲೇ ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಪರಿಸರ ಖಾತೆ ಸಚಿವ ಹರ್ಷವರ್ಧನ್, ‘ವಧೆಗಾಗಿ ಜಾನುವಾರು ಮಾರಾಟ ಮತ್ತು ಖರೀದಿ ನಿಷೇಧ ಅಧಿಸೂಚನೆ ಕುರಿತ ಸಮಸ್ಯೆಗಳನ್ನು ‘ಗಂಭೀರ’ವಾಗಿ ಪರಿಗಣಿಸಿ ಸೂಕ್ತ ಪರಿಹಾರಕ್ಕೆ ‘ಪ್ರಾಮಾಣಿಕ’ ಪ್ರಯತ್ನ ಮಾಡುತ್ತೇವೆ’ ಎಂದಿದ್ದಾರೆ. ‘ಸುಪ್ರೀಂ ಕೋರ್ಟ್ ನಮಗೆ ಜು.11ರವರೆಗೆ ಕಾಲಾವಕಾಶ ನೀಡಿದೆ. ಆದರೆ ಅದಕ್ಕೂ ಮೊದಲೇ ಕೇಂದ್ರ ತನ್ನ ಪ್ರತಿಕ್ರಿಯೆ ನೀಡಿದೆ. ಅಗತ್ಯವಿದ್ದಲ್ಲಿ ಇನ್ನಷ್ಟು ಮಾಹಿತಿ ನೀಡುತ್ತೇವೆ. ಅಧಿಸೂಚನೆಯಿಂದ ನೊಂದಿರುವ ದೇಶದ ಯಾವುದೇ ವ್ಯಕ್ತಿಯ ಸಮಸ್ಯೆಯನ್ನು ಕೇಂದ್ರ ಪ್ರಾಮಾಣಿಕವಾಗಿ ಪರಿಹರಿಸಲಿದೆ’ ಎಂದಿದ್ದಾರೆ.