ಮುದಗಲ್ಲ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿಕೊಂಡ ಜಾನುವಾರು ಶೆಡ್ ಬಿಲ್ ಪಡೆಯಲು ಸಮೀಪದ ತಲೇಖಾನ ಗ್ರಾಪಂ ವ್ಯಾಪ್ತಿಯಲ್ಲಿನ ಫಲಾನುಭವಿಗಳು ತಾಪಂ-ಗ್ರಾಪಂ ಕಾರ್ಯಾಲಯಗಳಿಗೆ ಅಲೆಯುವಂತಾಗಿದೆ.
2020-21ನೇ ಸಾಲಿನ ಖಾತ್ರಿ ಯೋಜನೆಯಡಿ ತಲೇಖಾನ ಗ್ರಾಪಂದಲ್ಲಿ 200ಕ್ಕೂ ಹೆಚ್ಚು ಜಾನುವಾರು ಶೆಡ್ ಮತ್ತು ಕುರಿ ಶೆಡ್‌ಗಳನ್ನು ನಿರ್ಮಿಸಿಕೊಂಡು ಕೂಲಿ ಹಣ ಹೊರತುಪಡಿಸಿ ಬಿಒಸಿ ಅನುದಾನ ಪಾವತಿಸದೆ ಫಲಾನುಭವಿಗಳಿಗೆ ಸತಾಯಿಸಲಾಗುತ್ತಿದೆ. ರೈತರು ಸಾಲ ಮಾಡಿ ತಗಡು, ಇಟ್ಟಿಗೆ, ಸಿಮೆಂಟ್, ಕಂಕರ, ಉಸುಕು ತಂದು ಜಾನುವಾರುಗಳ ರಕ್ಷಣೆಗೆ ಶೆಡ್ ನಿರ್ಮಿಸಿಕೊಂಡಿದ್ದಾರೆ. ಆದರೆ 4-5 ತಿಂಗಳಲ್ಲಿ ಸಾಮಗ್ರಿ ವೆಚ್ಚ ಪಾವತಿಯಾಗಬೇಕು. ಆದರೆ ಎರಡು ವರ್ಷ ಗತಿಸಿದರೂ ಸಾಮಗ್ರಿ ವೆಚ್ಚ ಪಾವತಿಯಾಗಿಲ್ಲ. ಇದರಿಂದ ಫಲಾನುಭವಿ ರೈತರು ಆತಂಕ ಪಡುವಂತಾಗಿದೆ. ಮೊದಲ ಹಂತದಲ್ಲಿ ಬಿಡುಗಡೆಯಾದ ಸಾಮಗ್ರಿ ವೆಚ್ಚದಲ್ಲಿ ಸುಮಾರು 150 ಶೆಡ್ ಗಳಿಗೆ ಬಿಒಸಿ ಹಣ ಪಾವತಿಯಾಗಿದೆ.
ಎರಡು ಮತ್ತು ಮೂರನೇ ಹಂತದಲ್ಲಿ 40ಕ್ಕೂ ಹೆಚ್ಚು ಕಾಮಗಾರಿಗಳಿಗೆ ಸಾಮಗ್ರಿ ವೆಚ್ಚ ಪಾವತಿಸಿದ್ದು, ಇನ್ನು ಸುಮಾರು 50 ಕಾಮಗಾರಿಗಳಿಗೆ ಸಾಮಗ್ರಿ ವೆಚ್ಚ ಪಾವತಿಯಾಗಬೇಕಿದೆ ಎಂದು ಪಿಡಿಒ ಮಹ್ಮದ ಉಮ್ಮರ್ ತಿಳಿಸಿದರು.
ಸುಮಾರು ಸಾವಿರ ಕಾಮಗಾರಿಗಳು ಹೈಡ್ ಆಗಿವೆ. ನರೇಗಾ ತಂತ್ರಾಂಶದಲ್ಲಿ ಕಾಣ ಸಿಗುತ್ತಿಲ್ಲ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. –
ಶಿವಾನಂದ ರಡ್ಡಿ, ನರೇಗಾ ಸಹಾಯಕ ನಿರ್ದೇಶಕರು ತಾಪಂ ಮಸ್ಕಿ.
ಜಾನುವಾರು ಶೆಡ್ ನಿರ್ಮಿಸಿಕೊಂಡ ಫಲಾನುಭವಿಗಳು ದಿನಂಪ್ರತಿ ಗ್ರಾಪಂಗೆ ಅಲೆಯುತ್ತಿದ್ದಾರೆ. ನಾನು ಸಹ ಸಾಮಗ್ರಿ ವೆಚ್ಚ ಪಾವತಿಸುವ ಬಗ್ಗೆ ತಾಪಂ, ಜಿಪಂ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.
-ಮೌನೇಶ ರಾಠೊಡ, ಅಧ್ಯಕ್ಷರು, ಗ್ರಾಪಂ ತಲೇಖಾನ
-ದೇವಪ್ಪ ರಾಠೊಡ