ಚಿಕ್ಕಮಗಳೂರು: ಕಳಸ ತಾಲೂಕಿನ ಹೊಸೂರು ಗ್ರಾಮದಲ್ಲಿ ಕಳೆದರಡು ದಿನಗಳಿಂದ ಚಿರತೆಯೊಂದು ಕಂಡು ಬಂದಿದ್ದು ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ.
ಬುಧವಾರದ ರಾತ್ರಿ ಹೊಸೂರಿನ ರಸ್ತೆ ಬಳಿಯೇ ಜಾನುವಾರೊಂದನ್ನು ರಾತ್ರಿ ಹಿಡಿದು ಅರ್ಧ ಭಾಗವನ್ನು ತಿಂದು ಹಾಕಿತ್ತು. ಬೆಳಗ್ಗೆ ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು. ಗುರುವಾರದ ರಾತ್ರಿ ಚಿರತೆಯು ಮತ್ತದೇ ಸ್ಥಳಕ್ಕೆ ಬರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಗ್ರಾಮಸ್ಥರು ಬೊಬ್ಬೆ ಹಾಕಿದಾಗ ಚಿರತೆಯು ಓಡಿ ಹೋಗಿದೆ. ಆದರೆ ಶುಕ್ರವಾರ ಬೆಳಗಿನ ಜಾವ ಇನ್ನೊಂದು ಜಾನುವಾರೊಂದನ್ನು ಅಟ್ಟಾಡಿಸಿಕೊಂಡು ಬಂದು ಹಿಡಿದಿದೆ. ಜಾನುವಾರಿನ ಆಕ್ರಂದನಕ್ಕೆ ಗ್ರಾಮಸ್ಥರು ಓಡಿ ಬಂದಾಗ ಚಿರತೆ ದನವನ್ನು ಬಿಟ್ಟು ಹೋಗಿದೆ.
ಇದನ್ನೂ ಓದಿ:ಪಲ್ಸ್ ಪೋಲಿಯೋಗೆ ಪೂರ್ವ ಸಿದ್ಧತೆ: ವೈಶಾಲಿ
ನೂರಾರು ಮನೆಗಳು ಇರುವ ಪ್ರದೇಶಕ್ಕೆ ಚಿರತೆಯು ಬಂದು ದಾಳಿ ಮಾಡುತ್ತಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕತ್ತಲಾಗುತ್ತಿದ್ದಂತೆ ಮನೆ ಯಿಂದ ಹೊರ ಬರಲು ಹೆದರುವಂತಾಗಿದೆ. ಕಾಫಿ ಕೊಯ್ಲಿನ ಸಮಯ ವಾಗಿರುವುದರಿಂದ ಬಹುತೇಕ ಕೃಷಿಕರು ಕೆಲಸ ಕಾರ್ಯಗಳಲ್ಲಿ ತೊಡಗಿದ್ದು, ಗ್ರಾಮದಲ್ಲಿ ಚಿರತೆ ಇದೆ ಎಂದು ಗೊತ್ತಾಗಿರುವುದರಿಂದ ಯಾರೂ ಕೂಡಕಾ ಕಾಫಿ ಕೊಯ್ಯಲು ಜನ ಬರುತ್ತಿಲ್ಲ. ನಮಗೂ ತೋಟಕ್ಕೆ ಹೋಗಲು ಹೆದರಿಕೆ ಆಗುತ್ತಿದೆ. ಅರಣ್ಯ ಇಲಾಖೆ ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರಾದ ಭೋಜೇಗೌಡ, ನಟೇಶ ಆಗ್ರಹಿಸಿದ್ದಾರೆ.