ನವದೆಹಲಿ: ಈ ತಿಂಗಳ ಮೊದಲ ಒಂಭತ್ತು ದಿನಗಳಲ್ಲಿ ಹಳಿಯಲ್ಲಿ ಜಾನುವಾರುಗಳು ಇದ್ದ ಕಾರಣದಿಂದಲೇ 200 ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಪ್ರಸಕ್ತ ವರ್ಷ ಇದೇ ಕಾರಣಕ್ಕಾಗಿ 4,433 ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದ್ದವು ಎಂದು ಭಾನುವಾರ ನವದೆಹಲಿಯಲ್ಲಿ ಬಿಡುಗಡೆಯಾಗಿರುವ ಮಾಹಿತಿಯಲ್ಲಿ ದೃಢಪಟ್ಟಿದೆ.
ರೈಲ್ವೇ ಹಳಿಯ ಇರುವ ಎರಡೂ ಬದಿಗಳಲ್ಲಿ ಜಾನುವಾರುಗಳು ಪ್ರವೇಶ ಮಾಡದಂತೆ ತಡೆಯುವುದೂ ಸವಾಲಿನ ವಿಚಾರವೇ ಹೌದು.
ಏಕೆಂದರೆ, ಜನವಸತಿ ಪ್ರದೇಶಗಳ ನಡುವೆ ಕೆಲವು ಸ್ಥಳಗಳಲ್ಲಿ ಹಳಿಗಳು ಹಾದು ಹೋಗಿರುವುದರಿಂದ ಈ ಸಮಸ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗುತ್ತಿಲ್ಲ. ಉತ್ತರ ಕೇಂದ್ರ ರೈಲ್ವೇ ವಲಯದಲ್ಲಿ 2020-21ನೇ ಸಾಲಿನಲ್ಲಿ 6.500ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.
ಸರ್ಕಾರದ ಮಾಹಿತಿ ಪ್ರಕಾರ ಜನವರಿಯಲ್ಲಿ ಹಳಿಯಲ್ಲಿ ಜಾನುವಾರುಗಳಿಗೆ ರೈಲುಗಳು ಡಿಕ್ಕಿ ಹೊಡೆಯುವ 360 ಘಟನೆಗಳು ನಡೆದಿದ್ದವು. ಸೆಪ್ಟೆಂಬರ್ ವೇಳೆಗೆ ಅದರ ಸಂಖ್ಯೆ 635ಕ್ಕೆ ಏರಿಕೆಯಾಗಿದೆ. 4,433 ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ.