ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಮುಂಗಾರು ಹಂಗಾಮು ಹೊಸ್ತಿಲಲ್ಲಿರುವ ರೈತರು ಈಗ ರಾಸುಗಳ ಸಂತೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹಲವು ತಿಂಗಳಿಂದ ಚರ್ಮಗಂಟು ರೋಗದ ಕಾರಣಕ್ಕೆ ಜಿಲ್ಲಾಡಳಿತ ಹೇರಿದ್ದ ನಿಷೇಧ ತೆರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ನಡೆಯುವ ರಾಸುಗಳ ಸಂತೆ ಕಳೆಗಟ್ಟಿದೆ.
ಹೌದು, ಹೇಳಿ ಕೇಳಿ ಜಿಲ್ಲೆಯು ಕೃಷಿ ಪ್ರಧಾನವಾಗಿದ್ದು, ನೀರಾವರಿಗಿಂತ ಮಳೆ ಆಶ್ರಿತ ಕೃಷಿ ಭೂಮಿ ವ್ಯಾಪಕವಾಗಿದ್ದು, ಈ ಬಾರಿ ಬರೋಬ್ಬರಿ 1.48 ಲಕ್ಷ ಹೆಕ್ಟೇರ್ ಪ್ರಮಾಣದಲ್ಲಿ ಬಿತ್ತನೆಗೆ ಸಜ್ಜಾಗುತ್ತಿದ್ದಂತೆ ರೈತರು ಉಳುವ ಎತ್ತುಗಳಿಗೆ ಹುಡುಕಾಟ ನಡೆಸಿದ್ದಾರೆ.
ಕೃಷಿ ಕಾರ್ಯಗಳಿಗೆ ಬೆನ್ನೆಲುಬು: ಎಷ್ಟೇ ಆಧುನಿಕ ತಂತ್ರ ಜ್ಞಾನ ಬೆಳೆದರೂ ರೈತರು ಉಳುಮೆಯಿಂದ ಹಿಡಿದು ಬಿತ್ತನೆ ಕಾರ್ಯವನ್ನು ಜೋಡೆತ್ತುಗಳ ಮೂಲಕ ಮಾಡು ವ ಸಂಪ್ರದಾಯವನ್ನು ಇಂದಿಗೂ ಹೊಂದಿದ್ದಾರೆ. ಸಣ್ಣ ಪುಟ್ಟ ರೈತರಿಗಿಂತ ಹೆಚ್ಚು ಹಿಡುವಳಿ ಭೂಮಿ ಹೊಂದಿರುವ ರೈತರು ಈಗ ವರ್ಷವಿಡೀ ತಮ್ಮ ಕೃಷಿ ಕಾರ್ಯಗಳಿಗೆ ಬೆನ್ನ ಲುಬಾಗಿರುವ ಜಾನುವಾರುಗಳ ಖರೀದಿಗೆ ಮುಂದಾಗಿದ್ದಾರೆ.
ಜೋಡೆತ್ತು ಖರೀದಿ ವಾಡಿಕೆ: ಜಿಲ್ಲೆಯಲ್ಲಿ ನಡೆಯು ತ್ತಿರುವ ಜಾನುವಾರುಗಳ ಸಂತೆ ರೈತರಿಂದ ಹೌಸ್‌ಫುಲ್ ಆಗಿ ಜಾನುವಾರುಗಳ ಕೊಡು ಕೊಂಡುಕೊಳ್ಳುವಿಕೆಯ ಭರಾಟೆ ಜೋರಾಗಿದೆ. ಬೇಸಿಗೆ ಶುರುವಾಗುವ ಹೊತ್ತಿಗೆ ಬಹಳಷ್ಟು ರೈತರು ಮೇವು, ಕುಡಿಯುವ ನೀರಿನ ಕೊರತೆ ಕಾರಣಕ್ಕೆ ತಮ್ಮಲ್ಲಿರುವ ಉಳುವ ಎತ್ತುಗಳನ್ನು ಮಾರಾಟ ಮಾಡಿ ಮುಂಗಾರು ಶುರುವಾಗುವ ಹೊತ್ತಿಗೆ ಜೋಡೆತ್ತುಗಳನ್ನು ಖರೀದಿಸುವ ವಾಡಿಕೆ ಇದೆ.
ಪಳಗಿರುವ ಜೋಡೆತ್ತುಗಳತ್ತ ಚಿತ್ತ: ಜಾನುವಾರುಗಳ ವಾರ ಸಂತೆಗೆ ದೂರದ ಊರುಗಳಿಂದ ಜೋಡೆತ್ತುಗಳನ್ನು ಕರೆ ತಂದು ರೈತರು, ವ್ಯಾಪಾರಸ್ಥರು ಮಾರಾಟದಲ್ಲಿ ತೊಡಗಿದ್ದು, ಸಂತೆಗಳಿಗೆ ಬರುವ ರೈತರು ಕೃಷಿ ಚಟುವಟಿಕೆಗಳಲ್ಲಿ ಪಳಗಿರುವ ಜೋಡೆತ್ತುಗಳನ್ನು ಅಳೆದು ತೂಗಿ ಖರೀದಿಗೆ ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಶನಿವಾರ ದನಗಳ ಸಂತೆ ನಡೆದರೆ, ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಪ್ರತಿ ಭಾನುವಾರ ನಡೆಯುತ್ತಿದೆ. ಈ ಸಂತೆಗಳಿಗೆ ಆಂಧ್ರದ ಮದನಪಲ್ಲಿ, ಚಿತ್ತೂರು, ಕೋಲಾರ, ಹೊಸಕೋಟೆ, ದೊಡ್ಡಬಳ್ಳಾಪುರ, ತುಮಕೂರು ಜಿಲ್ಲೆಗಳಿಂದಲೂ ರೈತರು ಆಗಮಿಸಿ ಬೇಕಾದ ಎತ್ತುಗಳನ್ನು ಮಧ್ಯವರ್ತಿಗಳ ಮುಖಾಂತರ ಖರೀದಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಗರಿಷ್ಠ 1.50 ಲಕ್ಷ ವರೆಗೂ ಜೋಡೆತ್ತು ಮಾರಾಟ!: ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ವೇಗ ಪಡೆದಿರುವ ಹಿನ್ನೆಲೆಯಲ್ಲಿ ಉಳುವ ಎತ್ತುಗಳಿಗೆ ಸಹಜವಾಗಿಯೇ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆ ಕೇಳಿದ ಕೂಡಲೇ ರೈತರು ಕಂಗಾಲಾಗುತ್ತಿದ್ದಾರೆ. ಕನಿಷ್ಠ 20 ಸಾವಿರದಿಂದ ಶುರುವಾಗುವ ಜೋಡೆತ್ತುಗಳ ಬೆಲೆ 1.50 ಲಕ್ಷ ವರೆಗೂ ಮಾರಾಟ ಆಗುತ್ತಿವೆ. ಕೆಲ ರೈತರು ಹಣ ಎಷ್ಟಾದರೂ ಪರವಾಗಿಲ್ಲ, ಜಾತಿಯಲ್ಲಿ ದುಡಿಬೇಕು, ಕೆಲಸ ಮಾಡಬೇಕೆಂಬ ನಿಟ್ಟಿನಲ್ಲಿ ಲಕ್ಷಾಂತರ ರೂ. ಹಣ ಸುರಿದು ಜೋಡೆತ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ನಮ್ಮಲ್ಲಿದ್ದ ಜೋಡೆತ್ತುಗಳನ್ನು 6 ತಿಂಗಳ ಹಿಂದೆ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರಾಟ ಮಾಡಿದ್ದೆವು. ಈಗ ಹೊಸ ಜೋಡೆತ್ತುಗಳನ್ನು ಖರೀದಿಸಲು ಸಂತೆಗೆ ಬಂದಿರುವೆ. ದರ ನೋಡಿದರೆ ವಿಪರೀತ ಇದೆ, 30 ರಿಂದ 50 ಸಾವಿರ ಒಳಗೆ ಜೋಡೆತ್ತುಗಳನ್ನು ಖರೀದಿಸಲು ನಿರ್ಧರಿಸಿದ್ದೇನೆ.
●ಸಿದ್ದಪ್ಪ, ಪೋಶೆಟ್ಟಿಹಳ್ಳಿ ರೈತ
75 ಸಾವಿರಕ್ಕೆ ಕೇಳಿದರೂ ಕೊಡಲಿಲ್ಲ ನಾವು ಸಾಕಿರುವ ಹಳ್ಳಿಕಾರ್ ಜೋಡೆತ್ತು ಗಳನ್ನು 75 ಸಾವಿರಕ್ಕೆ ಕೇಳುತ್ತಿದ್ದರೂ ನಾವು ಕೊಡುತ್ತಿಲ್ಲ. ಕನಿಷ್ಠ 80 ಸಾವಿರ ಕೊಟ್ಟರೆ ಮಾರಾಟ ಮಾಡುತ್ತೇನೆ. ಈ ವರ್ಷ ಹೊಸ ಜೋಡೆತ್ತುಗಳನ್ನು ಖರೀದಿಸಬೇಕೆಂದು ಹಳೆ ಜೋಡೆತ್ತುಗಳನ್ನು ಮಾರಾಟ ಮಾಡಲು ನಿರ್ಧರಿಸಿದೇನೆ.
●ಅರುಣ್ ಕುಮಾರ್, ಯುವ ರೈತ, ಗೊಂದಲಹಳ್ಳಿ, ಚಿಕ್ಕಬಳ್ಳಾಪುರ ತಾ.
-ಕಾಗತಿ ನಾಗರಾಜಪ್ಪ