Advertisement

21-29ರವರೆಗೆ 9 ದಿನ ಬೇಬಿಬೆಟ್ಟದ ದನಗಳ ಜಾತ್ರೆ

05:01 PM Feb 15, 2020 | Suhan S |

ಪಾಂಡವಪುರ: ಪುರಾಣ ಪ್ರಸಿದ್ಧ ತಾಲೂಕಿನ ಬೇಬಿಬೆಟ್ಟದಲ್ಲಿ ಆರಂಭಗೊಳ್ಳುವ ಭಾರಿ ದನಗಳ ಜಾತ್ರಾ ಮಹೋತ್ಸವ ಅದ್ಧೂರಿ ಆಚರಣೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಪುಟ್ಟರಾಜು ಮನವಿ ಮಾಡಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಫೆ.21ರಿಂದ 29ರವರೆಗೆ 9 ದಿನ ಭಾರಿ ದನಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರಾಸುಗಳು ಆಗಮಿಸುವುದರಿಂದ ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಸುತ್ತಮುತ್ತಲಿನ ಗ್ರಾಪಂ ಅಧಿಕಾರಿಗಳು ಕೆಲಸ ಮಾಡಬೇಕು. ಜಾತ್ರೆಗೆ ನೀರು ಪೂರೈಕೆಯಾಗಿ 5 ಟ್ಯಾಂಕರ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಕ್ರೀಡಾ ಸ್ಪರ್ಧೆಗಳು: ಜಾತ್ರೆಯಲ್ಲಿ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಬೆಟ್ಟಕ್ಕೆ ಹಾಗೂ ಜಾತ್ರಾ ಮೈದಾನದಲ್ಲಿ ವಿಶೇಷವಾಗಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗುವುದು. ವಾಲಿಬಾಲ್‌, ಕಬಡ್ಡಿ, ಕುಸ್ತಿ ಪಂದ್ಯಾವಳಿ ನಡೆಯಲಿವೆ. ವಿಶೇವಾಗಿ ಮಹಿಳಾ ಉತ್ಸವ ಹಾಗೂ ಮಹಿಳಾ ಗ್ರಾಮೀಣ ಕ್ರೀಡೆ ಆಯೋಜಿಸಲಾಗುತ್ತಿದೆ. ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ವಸ್ತು ಪ್ರದರ್ಶನ: ಕೃಷಿ, ತೋಟಗಾರಿಗೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ, ಆರೋಗ್ಯ, ಶಿಕ್ಷಣ, ಅರಣ್ಯ ಇಲಾಖೆಗಳ ವಸ್ತು ಪ್ರದರ್ಶನದ ಮಳಿಗೆ ತೆರೆಯಬೇಕು. ಆರೋಗ್ಯ ಶಿಬಿರ, ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಬೇಕು ಎಂದರು.

ತಾತ್ಕಾಲಿಕ ಪಶು ಆಸ್ಪತ್ರೆ: ಜಾತ್ರೆ ಮುಗಿಯುವವರೆಗೂ ಪಶು ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದು ಯಾವುದೇ ಸಮಸ್ಯೆಗಳು ಎದುರಾಗದಂತೆ ಎಚ್ಚರ ವಹಿಸಬೇಕು. ತಾತ್ಕಾಲಿಕ ಪಶು ಆಸ್ಪತ್ರೆ ಕೇಂದ್ರ ತೆರೆಯಬೇಕು. ಇನ್ನೂ ಜಾತ್ರೆಯಲ್ಲಿ ವಿಜೇತರಾಗುವ ರಾಸುಗಳಿಗೆ ಬಹುಮಾನ ನೀಡಲು ಅನುದಾನಕ್ಕಾಗಿ ಪಶು ಇಲಾಖೆಗೆ ಪತ್ರ ಬರೆಯುವಂತೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ನಟರಾಜು ಅವರಿಗೆ ಸೂಚಿಸಿದರು.

Advertisement

ಸಾಮೂಹಿಕ ವಿವಾಹ: ಜಾತ್ರಾ ಮಹೋತ್ಸವದಲ್ಲಿ ಫೆ.26ರಂದು ಉಚಿತ ಸಾಮೂಹಿಕ ವಿವಾಹ ನಡೆ ಯಲಿದೆ. ಆಸಕ್ತರು ವಧು-ವರರು ತಾಪಂ ಕಚೇರಿ ಹಾಗೂ ಸುತ್ತಮುತ್ತಲಿನ ಗ್ರಾಪಂಗಳನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.

ಬಹುಮಾನ ವಿತರಣೆ: ಕಳೆದ ವರ್ಷ ನಡೆದ ದನಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಬಹುಮಾನ ಪಡೆದ ರಾಸುಗಳಿಗೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಹುಮಾನ ವಿತರಿಸಿರಲಿಲ್ಲ. ಆ ಬಹುಮಾನ ಜಾತ್ರೆ ಆರಂಭದ ಮೊದಲ ದಿನ ರಾಸುಗಳ ಮಾಲೀಕರನ್ನು ಆಹ್ವಾನಿಸಿ ವಿತರಿಸಲಾಗುವುದು ಎಂದು ಹೇಳಿದರು.

ಜಿಪಂ ಸದಸ್ಯರಾದ ಅಶೋಕ್‌, ತಿಮ್ಮೇಗೌಡ, ತಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷೆ ಲಕ್ಷ್ಮಮ್ಮ, ತಹಶೀಲ್ದಾರ್‌ ಪ್ರಮೋದ್‌ ಎಲ್‌.ಪಾಟೀಲ್‌, ತಾಪಂ ಇಒ ಆರ್‌.ಪಿ.ಮಹೇಶ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next