ಕೊಪ್ಪಳ: ಸಾಮಾನ್ಯವಾಗಿ ಮನುಷ್ಯರ ಜನ್ಮ ದಿನ ಆಚರಿಸುವುದನ್ನು ನೀವು ನೋಡಿದ್ದೀರಾ.. ಆದರೆ ಇಲ್ಲೊಬ್ಬ ರೈತ ತಮ್ಮ ಮನೆಯಲ್ಲಿನ ಕರುವಿನ ಜನ್ಮದಿನವನ್ನು ಅತ್ಯಂತ ಸಂಭ್ರಮ, ಸಡಗರಿದಂದ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಹೌದು.. ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದಲ್ಲಿನ ರೈತ ಜಗದೀಶ ಚಟ್ಟಿ ಅವರು ತಮ್ಮ ಮನೆಯಲ್ಲಿ ಒಂದು ವರ್ಷದ ಹಸುವಿನ ಜನ್ಮ ದಿನವನ್ನು ಆಚರಿಸುವ ಮೂಲಕ ಪ್ರಾಣಿಗಳ ಬಗೆಗಿನ ಪ್ರೀತಿ ತೋರಿದ್ದಾನೆ.
ಜಗದೀಶ ಚಟ್ಟಿ ಅವರು ತಮ್ಮ ಮನೆಗೆ ಈ ಹಿಂದೆ ಒಂದು ಹೆಚ್‌ಎಫ್ ತಳಿಯ ಹಸುವೊಂದನ್ನು ಖರೀದಿಸಿ ತಂದಿದ್ದನು. ಆ ಹಸು ಕಳೆದ ವರ್ಷ ಡಿ. 26 ರಂದು ಕಂಕಣ ಸೂರ್ಯ ಗ್ರಹಣದ ದಿನದಂದೇ ಹೆಣ್ಣು ಕರುವಿಗೆ ಜನ್ಮ ನೀಡಿತ್ತು. ಇದರಿಂದ ಮನೆಯಲ್ಲಿ ಸಂಭ್ರಮವೋ ಸಂಭ್ರಮ ಎನ್ನುವಂತಿತ್ತು.
ಸಾಮಾನ್ಯಾಗಿ ರೈತಾಪಿ ಕುಟುಂಬದಲ್ಲಿ ಮನೆಗೆ ಹಸು ಬಂತೆಂದರೆ ಭಕ್ತಿ, ಪೂಜ್ಯನೀಯ ಭಾವ ಇಂದಿಗೂ ಇದೆ. ಅದರಂತೆ ಇವರ ಮನೆಯಲ್ಲೂ ಸಂಭ್ರಮ ಮನೆ ಮಾಡಿತ್ತು. ಆ ಕರುವು ಕಂಕಣ ಸೂರ್ಯ ಗ್ರಹಣದ ದಿನದಂದು ಜನಿಸಿದ ಹಿನ್ನೆಲೆಯಲ್ಲಿ ಕಂಕಿಣಿ ಎಂದು ನಾಮಕರಣವನ್ನೂ ಮಾಡಿದ್ದರು. ಪ್ರಸ್ತುತ ಶನಿವಾರ ಡಿ. 26ಕ್ಕೆ ಆ ಕರುವಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರುವಿಗೆ ಬಣ್ಣದ ಬಟ್ಟೆಗಳಿಂದ ಅಲಂಕಾರ ಮಾಡಿ, ಕೇಕ್ ತರಿಸಿ ಮನೆ ಮಂದಿಯಲ್ಲ ಸೇರಿ ಕೇಕ್ ಕತ್ತಿಸುವ ಜೊತೆಗೆ ಕರುವಿಗೆ ಪೂಜೆ ಸಲ್ಲಿಸಿ ಸಂಭ್ರಮ ಆಚರಣೆ ಮಾಡಿದ್ದಾರೆ. ನಿಜಕ್ಕೂ ಪ್ರಾಣಿಗಳೊಂದಿಗೆ ಈ ರೈತ ಕುಟುಂಬದ ಬಾಂಧವ್ಯ ಎಲ್ಲರ ಗಮನ ಸೆಳೆದಿದೆ. ಮಕ್ಕಳು, ಹಿರಿಯರು, ಸ್ನೇಹಿತರು ಕೂಡಿ ಕೇಕ್ ಕತ್ತರಿಸಿ ಹಸುವಿಗೆ ಜನ್ಮ ದಿನದ ಶುಭಾಶಯ ಕೋರಿ ಕೇಕ್ ತಿಂದು ಸಂಭ್ರಮಿಸಿದ್ದಾರೆ.