Advertisement

ಜಗಳೂರು ಪಟ್ಟಣದ ತುಂಬ ಬಿಡಾಡಿ ದನಗಳ ಹಾವಳಿ

01:55 PM May 28, 2019 | Suhan S |

ಜಗಳೂರು : ಬಿಡಾಡಿದನಗಳ ಹಾವಳಿ ನಿಯಂತ್ರಿಸಲು ಪಟ್ಟಣ ಪಂಚಾಯಿತಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.

Advertisement

ಸಾಮಾನ್ಯವಾಗಿ ರಾಸುಗಳ‌ನ್ನು ತಮ್ಮ ತಮ್ಮ ಮನೆ, ಜಮೀನು, ಕಣದಲ್ಲಿ ಕಟ್ಟಿ ಸಾಕಣೆ ಮಾಡುತ್ತಾರೆ. ಆದರೆ ಪಟ್ಟಣದಲ್ಲಿ ಪರಿಸ್ಥಿತಿಯೇ ಬೇರೆಯಾಗಿದೆ. ಮಾಲೀಕರು ತಮ್ಮ ದನ ಕರುಗಳನ್ನು ರಸ್ತೆಗೆ ಬಿಟ್ಟು ಸಾಕಣಿಕೆ ಮಾಡುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ.

ಪಟ್ಟಣದ ರಸ್ತೆಯ ತುಂಬೆಲ್ಲ ನೂರಾರು ಬಿಡಾಡಿ ದನಗಳು ಕಾಣಸಿಗುತ್ತಿದ್ದು, ಯಾವ ರಸ್ತೆಯಲ್ಲಿ ನೋಡಿದರೂ ಸಹ ಇವುಗಳದ್ದೇ ಕಾರು ಬಾರು. ಹೀಗಾಗಿ ದ್ವಿಚಕ್ರ ವಾಹನ ಹಾಗೂ ಬಸ್‌, ಲಾರಿಗಳ ಸಂಚಾರ ಕಷ್ಟಕರವಾಗಿದ್ದು, ಅಲ್ಲದೇ ಇವುಗಳು ಅಡ್ಡ ಬರುವುದರಿಂದ ಆಪಘಾತಗಳು ಸಹ ಸಂಭವಿಸಿವೆ.

ದ್ವಿಚಕ್ರ ವಾಹನಗಳಲ್ಲಿರುವ ವಸ್ತುಗಳೇ ಮಾಯ: ಪಟ್ಟಣದ ಅಂಬೇಡ್ಕರ್‌ ವೃತ್ತ , ಹೊಸ ಬಸ್‌ ನಿಲ್ದಾಣ, ಎಸ್‌ಬಿಐ ಬ್ಯಾಂಕ್‌ ರಸ್ತೆ , ಮರೆನಹಳ್ಳಿ ರಸ್ತೆ ಸಮಿಪದ ಪಾರ್ಕಿಂಗ್‌ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿದರೆ ಅವುಗಳಲ್ಲಿರುವ ಆಹಾರ ಪದಾರ್ಥಗಳು, ದಿನಸಿ ಸಾಮಗ್ರಿ, ಹಣ್ಣು-ತರಕಾರಿಗಳನ್ನು ಬಿಡಾಡಿ ದನಗಳು ಕ್ಷಣ ಮಾತ್ರದಲ್ಲಿ ತಿನ್ನುತ್ತವೆ ಎಂದು ಹೇಳುತ್ತಾರೆ ದ್ವಿಚಕ್ರ ವಾಹನ ಸವಾರ ರಾಜಪ್ಪ.

ಮುಖ್ಯ ವೃತ್ತದಲ್ಲಿ ನಿದ್ರೆ: ಹಗಲು, ಇರುಳು ದನಗಳು ಗಾಂಧಿ ವೃತ್ತ ಹಾಗೂ ಮುಖ್ಯ ರಸ್ತೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತವೆ. ನಿದ್ರಗೂ ಜಾರುತ್ತವೆ. ಇದರಿಂದ ಬಸ್‌ ಚಾಲನೆ ಕಷ್ಟವಾಗಿದೆ. ಎಷ್ಟೇ ಹಾರನ್‌ ಹೊಡೆದರೂ ಸಹ ಜಾಗ ಬಿಡುವುದಿಲ್ಲ ಎನ್ನುತ್ತಾರೆ ಬಸ್‌ ಚಾಲಕ ನಂಜಪ್ಪ.

Advertisement

ರಸ್ತೆ ಬದಿ ಬಿದ್ದ ತರಕಾರಿ, ಹೋಟೆಲ್ ತ್ಯಾಜ್ಯವೇ ಇವುಗಳ ಆಹಾರ: ರಸ್ತೆ ಬದಿಯಲ್ಲಿ ಹಣ್ಣು ಹಾಗೂ ತರಕಾರಿ ವ್ಯಾಪಾರಿಗಳು ಎಸೆಯುವ ಕೊಳೆತ ಹಣ್ಣು, ತರಕಾರಿಗಳೇ ಇವುಗಳಿಗೆ ಆಹಾರ. ದಾಹ ಹಿಂಗಿಸಲು ಚರಂಡಿ ನೀರನ್ನೇ ಅವಲಂಬಿಸುತ್ತವೆ.

ರಸ್ತೆಯಲ್ಲಿ ಬಿಟ್ಟು ಹಣಗಳಿಸುವ ಮಾಲೀಕರು: ಬಿಡಾಡಿ ದನಗಳನ್ನು ರಸ್ತೆಯಲ್ಲಿಯೇ ವರ್ಷಾನುಗಟ್ಟಲೇ ಬಿಟ್ಟು ಅವು ಚನ್ನಾಗಿ ಬೆಳೆದ ಮೇಲೆ ಮಾರಾಟ ಮಾಡಿಕೊಂಡು ಹಣ ಗಳಿಸುವ ಸುಲಭ ಮಾರ್ಗವನ್ನು ಕೆಲವರು ಕಂಡು ಕೊಂಡಿದ್ದರೆ, ಇವರಿಗೆ ಅಧಿಕಾರಿಗಳೂ ಪರೋಕ್ಷವಾಗಿ ಸಹಕಾರ ನೀಡುತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಬಿಡಾಡಿ ದನಗಳ ನಿಯಂತ್ರಣಕ್ಕೆ ಪಟ್ಟಣ ಪಂಚಾಯ್ತಿ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next