ಇಂದಿನ ದಿನಗಳಲ್ಲಿ ಕೇಟರಿಂಗ್ ಅಥವಾ ಅಡುಗೆ ಕೆಲಸ ಅನ್ನೋದು ಬಹಳ ಪರಿಣಾಮವನ್ನು ಬೀರಿದೆ. ಅದರಲ್ಲಿಯೂ ವಿದ್ಯಾರ್ಥಿ ಜೀವನದಲ್ಲಿ ಕೇಟರಿಂಗ್ ಎನ್ನುವುದು ಒಂದು ಆದಾಯ ಮೂಲ ಕೂಡ ಹೌದು. ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರೆಸುತ್ತ, ಹಣಕಾಸಿಗೆ ಮನೆಯವರನ್ನು ಅವಲಂಬಿಸದೇ ತಮ್ಮ ಖರ್ಚನ್ನು ತಾವೇ ನಿಭಾಯಿಸಲು ಈ ಕೇಟರಿಂಗ್ ಒಂದು ಉತ್ತಮ ವೃತ್ತಿ. ಆದರೆ, ಇದು ಕೆಲವೊಮ್ಮೆ ಶಿಕ್ಷಣಕ್ಕೆ ಕುತ್ತಾಗುವುದೂ ಉಂಟು. ಹಣಕೊಡುವ ಈ ವೃತ್ತಿಯ ಕಡೆಗೇ ಹೆಚ್ಚು ಆಕರ್ಷಿತರಾದರೆ, ಶಿಕ್ಷಣಕ್ಕೆ ಕೊಡುವ ಮಹತ್ವ ಕಡಿಮೆಯಾದೀತು.
ಕೆಲವೊಮ್ಮೆ ಕಾಲೇಜು ವಿದ್ಯಾರ್ಥಿಗಳಂತೂ ಕ್ಲಾಸ್‌ಬಂಕ್ ಹಾಕಿಯಾದರೂ ಕೇಟರಿಂಗ್‌ಗೆ ಹೋಗಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಕಾರ್ಯಕ್ರಮ ಯಾವ ಹಾಲ್‌ನಲ್ಲಿ ನಡೆಯುತ್ತದೆ ಎಂದು ಸರಿಯಾಗಿ ತಿಳಿಯದಿದ್ದರೂ ಹಾಲ್ ಹುಡುಕಾಡುವ ಅವಾಂತರದಲ್ಲಿ ತಪ್ಪಿ ಬೇರೆ ಬೇರೆ ಹಾಲ್‌ಗೆ ಹೋಗಿ ಕೊನೆಗೆ ಸರಿಯಾದ ಅವಧಿಯಲ್ಲಿ ಕಾರ್ಯಕ್ರಮ ನಡೆಯುವ ಹಾಲ್‌ನಲ್ಲಿ ಪ್ರತ್ಯಕ್ಷರಾದ ಕತೆಗಳನ್ನು ಕಾಲೇಜು ಕಟ್ಟೆಯ ಪಟ್ಟಾಂಗದ ಸಂದರ್ಭದಲ್ಲಿ ಕೇಳಿದ್ದುಂಟು.
ಸಮಾರಂಭಗಳಲ್ಲಿನ ಕೇಟರಿಂಗ್‌ನಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಸಿಕೊಳ್ಳುವುದು ಗಮನಾರ್ಹ. ದಿನನಿತ್ಯದ ಖರ್ಚಿಗಾಗಿ ಹೆತ್ತವರ ಬಳಿ ಕೇಳದೆ ತಮ್ಮ ದುಡಿಮೆಯಲ್ಲಿಯೇ ದಿನ ಕಳೆಯುತ್ತಾರೆ.
ಕೆಲವೊಂದು ಬಾರಿ ಮನೆಯಿಂದ ಯೂನಿಫಾರ್ಮ್ ಹಾಕಿ ಕಾಲೇಜಿಗೆಂದು ಹೊರಟರೂ ಕೂಡ ಸ್ನೇತರು, “ಇವತ್ತು ಕೇಟರಿಂಗ್ ಇದೆ’ ಎಂದು ತಿಳಿಸಿದರೆ ಸಾಕು ಮೆತ್ತಗೆ ಕ್ಲಾಸ್ ಬಂಕ್ ಹಾಕಿ ಕೇಟರಿಂಗ್‌ನ ಹಾದಿ ಹಿಡಿಯುತ್ತಾರೆ. ಹೆತ್ತವರು ದುಡಿದ ಹಣವನ್ನು ಅನವಶ್ಯಕವಾಗಿ ದುಂದುವೆಚ್ಚ ಮಾಡಿ, ಮಜ ಮಾಡುವವರ ನಡುವೆಯೂ ಇಂತಹ ವಿದ್ಯಾರ್ಥಿಗಳ ಮನೋಭಾವ ಗಮನಾರ್ಹ. ಆದರೆ, ಅದು ಜೀವನದಲ್ಲಿ ಶಿಕ್ಷಣ ಪಡೆಯುವ ಗುರಿಗೆ ಮಾರಕ ಆಗದೇ ಇದ್ದರೆ ಸಾಕು.
ನೀತಾ ರವೀಂದ್ರ
ಪ್ರಥಮ ಬಿಎ (ಪತ್ರಿಕೋದ್ಯಮ) , ವಿವೇಕಾನಂದ ಕಾಲೇಜ್, ಪುತ್ತೂರು