Advertisement

ಕ್ಯಾಟರಿಂಗ್‌ನಲ್ಲಿ ಕಾಲೇಜು ಹುಡುಗರು

05:45 AM Jul 21, 2017 | Team Udayavani |

ಸದಾ ಓದು, ತರಹೇವಾರಿ ಲೆಕ್ಚರ್ಸ್‌ ಕೇಳಿ ಸಾಕಾದಾಗ ಕಾಲೇಜು ತರುಣರ ದಣಿದ ಮನ ಬಯಸುವುದು- “ಛೇ! ಒಂದು ರಜೆ ಇರುತ್ತಿದ್ದರೆ’ ಎಂದು.

Advertisement

ರಜಾ ಕೆಲವರಿಗೆ ಸಜಾ ತಂದರೆ, ಅದರ ಮಜಾನೇ ಬೇರೆ ಎನ್ನುವ ಗುಂಪು ಇನ್ನೊಂದೆಡೆ. ಇಲ್ಲಿ ಮಜಾ ಎಂದು ಬಣ್ಣಿಸುವ ಗುಂಪೇ ಈ ಲೇಖನಕ್ಕೆ ಮೂಲ ಪ್ರೇರಣೆ.

ರಜೆ ಇದೆ ಎಂದು ಗೊತ್ತಾದ ತಕ್ಷಣ ಈ ಗುಂಪಿನ ಹೈದರು ಸ್ವಾವಲಂಬನೆಯ ಮಂತ್ರ ಪಠಿಸುತ್ತಾರೆ. ಹೆತ್ತವರ ಬಳಿ ಎಲ್ಲದಕ್ಕೂ ಕೈಚಾಚುವ ಬದಲು, ಸ್ವಲ್ಪವಾದರೂ ದುಡಿದು, ಸಣ್ಣಪುಟ್ಟ ಖರ್ಚು ಸಮದೂಗಿಸಿಕೊಳ್ಳುವ ಇರಾದೆ ಇವರದ್ದು. ಅಂತಹ ಕೆಲವು ಪಾರ್ಟ್‌ ಟೈಂ ಕೆಲಸಗಳಲ್ಲಿ ಮುಖ್ಯವಾಗುವುದೇ ಈ “ಕ್ಯಾಟರಿಂಗ್‌’! “ಸ್ವಕಾರ್ಯ ಸ್ವಾಮಿ ಕಾರ್ಯ’ ಎಂಬಂತೆ ಆದಾಯಕ್ಕೂ ಮೂಲ, ಭರ್ಜರಿ ಊಟಕ್ಕೂ ಅನುಕೂಲ ಎಂಬುವುದು ಇಲ್ಲಡಗಿರುವ ವಾಸ್ತವ. ಈಗಂತೂ ವಾಟ್ಸಾಪ್‌- ಫೇಸುºಕ್‌ನ ಮೂಲಕ ಒಸಗೆ ಒಯ್ಯುವುದು ಕಷ್ಟವೇನಲ್ಲ! ಎಲ್ಲಿ? ಯಾವಾಗ? ಎನ್ನುವ ಸವಾಲುಗಳಿಗೆ ಇಲ್ಲೇ ಜವಾಬು ದೊರಕುತ್ತದೆ.

ಹಿಂದೆಲ್ಲ ಮದುವೆ-ಮುಂಜಿ ಏನೇ ಇದ್ರೂ ಮನೇಲೆ ಅಡುಗೆ ತಯಾರಾಗುತ್ತಿತ್ತು. ನೆರೆಹೊರೆಯ ಮಂದಿಯೆಲ್ಲ ಒಗ್ಗೂಡಿ ಖಾನಾವಳಿಗೆ ಕೈಜೋಡಿಸುತ್ತಿದ್ದರು. ಈಗಂತು ಜನ ಸದಾ ಬ್ಯುಸಿ ಹಾಗೂ ಚೂಝಿ. ಕಿರಿಕಿರಿ ಬೇಡವೆಂದು ಕ್ಯಾಟರಿಂಗ್‌ಗೆ ಆಜ್ಞಾಪಿಸುತ್ತಾರೆ. ವಿಚಿತ್ರ ಅಂದ್ರೆ ಮದುವೆ, ನಿಶ್ಚಿತಾರ್ಥದಂತಹ ಕಾರ್ಯಕ್ಕೆ ಸೀಮಿತಗೊಂಡಿದ್ದ ಕ್ಯಾಟರಿಂಗ್‌ ಉತ್ತರಕ್ರಿಯೆಯಂತಹ ಸಮಾರಂಭಕ್ಕೂ ವ್ಯಾಪಿಸಿರುವುದನ್ನು ಕಾಲದ ಮಹಿಮೆ ಎಂದಷ್ಟೇ ಹೇಳಬೇಕು ! 

ಈ ಕಡೆ, ಕ್ಯಾಟರ್‌ಪಿಲ್ಲರ್‌ನಂತೆ ಸಾಲಾಗಿ ಸಮವಸ್ತ್ರ ಧರಿಸಿ, ತಟ್ಟೆಯಲ್ಲಿ ಕೇಕ್‌, ವೈನ್‌, ಬೇವರೇಜ್‌ ಇತ್ಯಾದಿ ಸಾಮಗ್ರಿಗಳನ್ನು ಪೇರಿಸಿ, ಸಭಾಸದರಿಗೆ ನೀಡುವ ಅಂದ; ಒಂದು ರೀತಿಯ ನಾಟಕೀಯ ಪರಿಕಲ್ಪನೆ ಮೂಡಿಸಿದರೆ, ತಲೆಗೊಂದು ದಿರಿಸು, ಕೈಗೆ ಗ್ಲೌಸು, ಆಹಾರದ ಹಬೆಗೆ ಬೆವರಿದ ಫೇಸು ನೈಜತೆಯ ತಿಳಿವು ಮೂಡಿಸುತ್ತದೆ.
ಕ್ಯಾಟರಿಂಗ್‌ ನಡೆಸುವ ಏಜೆನ್ಸಿಗೆ/ವ್ಯಕ್ತಿಗೆ, ವಿದ್ಯಾರ್ಥಿಗಳಷ್ಟು ದಕ್ಷ ರೀತಿಯಲ್ಲಿ ಶ್ರಮಪಡುವವರು ಸಿಗಲಾರರು. ಅದಕ್ಕೆ ಅವರ ಮೊದಲ ಆದ್ಯತೆ ಯುವಕರು.

Advertisement

ಈ ಕ್ಯಾಟರಿಂಗ್‌ ವ್ಯವಸ್ಥೆ  ಒಂದೊಂದು ಕಡೆ ಒಂದೊಂದು ರೀತಿ. ಕೆಲವು ಕ್ಯಾಟರಿಂಗ್‌ ಮಧ್ಯಾಹ್ನವೇ ಮುಗಿದುಹೋದರೆ, ಕೆಲವು ರಾತ್ರಿ ಮೂರು ಗಂಟೆಯವರೆಗೂ ಹೋಗುವುದುಂಟು.ಸಾಮಾನ್ಯವಾಗಿ ಪಡೆಯುವ ಸಂಭಾವನೆಯ ಹತ್ತು ಪಾಲು ಮೇಲ್ವಿಚಾರಕನ (ಸೂಪರ್‌ವೈಸರ್‌) ಕಟುಮಾತುಗಳೇ ಇರುತ್ತವೆ.  ನೆಟ್ಟಗೆ ಕೆಲಸ ಮಾಡುತ್ತಿದ್ದರೂ ತಪ್ಪುಹುಡುಕಿ ಬೈಯುವ ಚಾಳಿ.

ಇನ್ನು ಕೆಲವಾರು ವಿಚಾರಗಳನ್ನು ಕೆದಕಿದಾಗ, ಕುತೂಹಲ ಮೂಡುತ್ತದೆ.ಅವುಗಳಲ್ಲಿ ತಂಡಗಳ ರಚನೆ. ಕೆಲವರು ಬರೀ ಆಹಾರ ಬಡಿಸಲು (ಸರ್ವಿಂಗ್‌) ಮಾತ್ರ. ಉಳಿದ ಯಾವ ಕೆಲಸವೂ ಇವರದಲ್ಲ! ಇವರಿಗೆ ಸಂದಾಯವಾಗುವ ಸಂಭಾವನೆಯೂ ಕಮ್ಮಿ.

ಇನ್ನೊಂದು ತಂಡ ಎಲ್ಲಾ ಕಾರ್ಯಕ್ಕೂ ಅಣಿಯಾಗಿರುವುದು ಮುಖ್ಯ. ಈ ತಂಡ ಮುಂಜಾನೆ ಹೊತ್ತಿಗೇನೆ ಆಹಾರ ತಯಾರಿಕಾ ಸ್ಥಳದಿಂದ ಬಗೆಬಗೆಯ ಸಾಮಾನುಗಳನ್ನು ಟೆಂಪೋಗೆ ಹೇರಬೇಕು. ಅದರಲ್ಲಿ ಐಸ್‌, ಡಿಶ್‌ಗಳು, ಊಟದ ತಟ್ಟೆಗಳು, ವ್ಯಾಕÕ… ಮತ್ತದರ ಚಿಮಣಿ, ವೈನ್‌ (ಕ್ರಿಶ್ಚಿಯನ್‌ ಕ್ಯಾಟರರ್ಸ್‌ ಆಗಿದ್ದಲ್ಲಿ ), ವೇÓr… ಟಿನ್‌- ಡಬ್ಬಗಳಂತಹ ಸರಂಜಾಮುಗಳು ಹೇರಲ್ಪಟ್ಟು , ಗಾಡಿ ಮುಂದೆ ಸಾಗುತ್ತದೆ.ಇನ್ನು ಮಧ್ಯಾಹ್ನದ ಸಮಯಕ್ಕೇನೆ ಕ್ಯಾಟರಿಂಗ್‌ ಇದೆ ಎಂದಾದರೆ, ಕೆಲಸ ಮತ್ತಷ್ಟು ಚುರುಕಾಗಬೇಕು.

ಭಕ್ಷಗಳ ಬಡಿಸುವಿಕೆ
ಸಾಲಾಗಿ ತರುಣರನ್ನು, ಖಾದ್ಯ ಪ್ರಭೇದಗಳ ಬಳಿ ನಿಲ್ಲಿಸಿ ಮೇಲ್ವಿಚಾರಕ ನಿರ್ದೇಶನ ನೀಡುತ್ತಾನೆ. ನಿಗದಿತ ಜನರಿಗಿಂತ ಜಾಸ್ತಿ ಜನ ಬಂದಾಗ, ಸ್ವಲ್ಪ ಸ್ವಲ್ಪವೇ ಹಾಕಿ ಎಂದರೆ, ಬೇಯಿಸಿದ್ದು ಸಾಕಷ್ಟಾಗಿ, ಉಳಿಕೆಯಾದೀತೆಂಬ ಭಯ ಮೂಡಿದರೆ ಚೆನ್ನಾಗಿ ಬಡಿಸಿ, ತಟ್ಟೆ ತುಂಬ ಹಾಕಿ ಎಂಬ ಆದೇಶ! ಅದಲ್ಲದೇ ಹತ್ತಿಪ್ಪತ್ತರೊಳಗೆ ಪದಾರ್ಥಗಳು ಇದ್ದಾಗ ಬಡಿಸುವ ಪ್ರಕ್ರಿಯೆ ಸುಲಭ. ಒಂದು ವೇಳೆ ವಿ.ಐ.ಪಿ ಕಾಲಂನಂತೆ 70-80 ಪ್ರಕಾರಗಳಿದ್ದರೆ ಬಡಿಸುವವರ ಗತಿ ಅಯೋಮಯ ಆಗೋದ್ರಲ್ಲಿ ಅನುಮಾನ ಬೇಡ.

ಸಂಭಾವನೆ ಮತ್ತು ಸಮಯ ಪಾಲನೆ
ಬೆಳಗ್ಗಿನಿಂದ ರಾತ್ರಿಯ ತನಕ ವಿವಿಧ ಭಂಗಿಯಲ್ಲಿ ಕೆಲಸ ಮಾಡಿ, ಬಸವಳಿದ ದೇಹಕ್ಕೆ ನೂತನೋಲ್ಲಾಸ ನೀಡುವುದು ಕೈಗಿಕ್ಕುವ ನೋಟುಗಳು ಮಾತ್ರ.

ಪಟ್ಟ ಶ್ರಮಕ್ಕೆ ಸಿಗುವ ಪ್ರತಿಫ‌ಲ ಹೆಚ್ಚಿನ ಸಂದರ್ಭದಲ್ಲಿ ತೃಪ್ತಿ ತಂದದ್ದೆ ಇಲ್ಲ! ಮುಖ್ಯಸ್ಥನಿಂದ ಒದಗಿದ ಹಣ ವಿವಿಧ ರೀತಿಯಲ್ಲಿ ಮೇಲ್ಹಂತದಲ್ಲೇ ಕಡಿತಗೊಳ್ಳುತ್ತಾ, ಕೊನೆಗೆ ಶ್ರಮಿಕರ ಕೈಗೆ ಇಕ್ಕೋವಾಗ ಜುಜುಬಿ ಅನ್ನಿಸಿಕೊಳ್ಳುವುದರಲ್ಲಿ ಅಚ್ಚರಿ ಇಲ್ಲ. 

ಇನ್ನು ಸಮಯಪಾಲನೆಯ ವಿಷಯಕ್ಕೆ ಬಂದಾಗ, ಅಷ್ಟು ಹೊತ್ತು ಸುಖಾಸುಮ್ಮನೆ ಅಲ್ಪ$ಸಂಬಳಕ್ಕೆ ದುಡಿಯುವುದು ವ್ಯರ್ಥ ಎನ್ನುವುದು ಕೆಲವರ ಅಭಿಮತ. ಉಳಿದ ಕೆಲಸಗಳಂತೆ ಇದು ಪ್ರತಿದಿನವು ಸಿಗೋದಿಲ್ಲ ಎಂಬ ಟೀಕೆಗಳೂ ಇವೆ.

ಆಹಾರದ ಅಪವ್ಯಯ
ಉಳಿಕೆಯಾದ ಆಹಾರ ನಿಷ್ಪ್ರಯೋಜಕ ಎಂದೇ ಪರಿಗಣಿತ. ಕೆಲವೊಮ್ಮೆ ಹಂದಿ, ಕೋಳಿ ಸಾಕಣೆಯ ಕೇಂದ್ರಕ್ಕೆ ಸರಬರಾಜಾದರೆ ಕೆಲವು ತ್ಯಾಜ್ಯ ಗುಂಡಿಗೇನೆ! ವಿಪರ್ಯಾಸ ಅಂದರೆ, ದೇಶದಲ್ಲಿ ಆಹಾರ ಭದ್ರತೆಯ ಚರ್ಚೆ ನಡೆಯುತ್ತಿದೆ, ಸದ್ದಿಲ್ಲದೆ ಇಂತಹ ಗೌಪ್ಯ ಚಟುವಟಿಕೆಗಳು ಅದರಷ್ಟಕ್ಕೆ ಏನೂ ಆಗಿಲ್ಲ ಎಂಬಂತೆ ಜರುಗಿಬಿಡುತ್ತದೆ.

ಏನೇ ಇದ್ದರೂ, ಕ್ಯಾಟರಿಂಗ್‌ ಎನ್ನುವುದು ಓದಿನ ಜೊತೆಜೊತೆಗೆ ಪಾರ್ಟ್‌ಟೈಮ… ಜಾಬ್‌ ಆಗಿ ರೂಪುಗೊಂಡಿರುವುದು ಉತ್ತಮ ಬೆಳವಣಿಗೆಯೇ ಸರಿ. ಒಳ್ಳೆಯ ಅನುಭವವೂ ಸಿಕ್ಕಂತಾಗಿ, ಜೀವನ ಪಾಠವೂ ಲಭ್ಯವಾಗಿ, ವಿವಿಧ ಸಂದರ್ಭಗಳಲ್ಲಿ ವರ್ತಿಸಬೇಕಾದ ರೀತಿಯ ಹೊಳಹನ್ನು ಅರುಹಿ ಉತ್ತಮ ನಾಗರೀಕರಾಗುವತ್ತ ಇದರ ಕೊಡುಗೆಯೂ ಇರಬಹುದು.

– ಸುಭಾಸ್‌ ಮಂಚಿ

Advertisement

Udayavani is now on Telegram. Click here to join our channel and stay updated with the latest news.

Next