Advertisement

ಜಾತೀಯತೆ ಅತ್ಯಂತ ಅಪಾಯಕಾರಿ

04:31 PM Nov 26, 2018 | |

ಚಿಕ್ಕಮಗಳೂರು: ಜಾತೀಯತೆ, ಅಸ್ಪೃಶ್ಯತೆ ಮುಕ್ತ ದೇಶ ನಿರ್ಮಾಣ ಮಾಡಲು ಮುಂದಾಗುವಂತೆ ಶಾಸಕ ಸಿ.ಟಿ.ರವಿ ಕರೆ ನೀಡಿದರು. ಜಿಲ್ಲಾ ಹಳ್ಳಿಕಾರ ಯುವಕ ಸಂಘದ ವತಿಯಿಂದ ನಗರದ ಟಿ.ಎಂ.ಎಸ್‌. ಶಾಲೆಯ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಹಳ್ಳಿಕಾರರ ಸಮಾವೇಶ, ವಾರ್ಷಿಕೋತ್ಸವ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ, ಮಾಜಿ ಯೋಧರಿಗೆ ಹಳ್ಳಿಕಾರ ರತ್ನ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ ಇದ್ದರೂ ಪರವಾಗಿಲ್ಲ.

Advertisement

ಜಾತೀಯತೆ ಬೇಡ. ಅದು ಅತ್ಯಂತ ಅಪಾಯಕಾರಿಯಾದುದು. ಜಾತಿಯತೆ ಇದ್ದಲ್ಲಿ ದೇಶ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ ಎಂದರು.

ದೇಹ ಹಾಗೂ ಹಿಂದು ಎಂಬುದು ಒಂದೇ ರೀತಿ. ದೇಹದಲ್ಲಿ ಹಲವು ಭಾಗಗಳಿವೆ. ಬಾಯಿ, ಕೈ, ಕಾಲು, ಕಿವಿ, ಮೂಗು ಈ ರೀತಿಯಾಗಿ ಹಲವು ಭಾಗಗಳಿವೆ. ದೇಹದ ಯಾವುದೇ ಒಂದು ಭಾಗಕ್ಕೆ ನೋವುಂಟಾದಲ್ಲಿ ಇಡೀ ದೇಹವೇ ನೋವನುಭವಿಸುತ್ತದೆ. ಕಾಲಿಗೆ ಮುಳ್ಳು ಚುಚ್ಚಿದರೆ ಕೂಡಲೆ ಕೈ ಮುಳ್ಳನ್ನು ತೆಗೆದು ಹಾಕುತ್ತದೆ. ಒಂದು ವೇಳೆ ಕೈ ತನಗೂ ಅದಕ್ಕೂ ಸಂಬಂಧವಿಲ್ಲವೆಂದು ಸುಮ್ಮನಿದ್ದರೆ ಕಾಲು ಕೊಳೆತು ಇಡೀ ದೇಹವೇ ತೊಂದರೆಗೆ ಸಿಲುಕಿಕೊಳ್ಳುತ್ತದೆ ಎಂದು ವಿವರಿಸಿದರು.

ಅದೇ ರೀತಿ ನಮ್ಮಲ್ಲಿ ಹಲವು ಜಾತಿಗಳು, ಉಪಜಾತಿಗಳು ಇವೆ. ಆದರೂ ಎಲ್ಲರೂ ಹಿಂದೂಗಳೇ ಆಗಿದ್ದಾರೆ. ಯಾವುದೇ
ಒಂದು ಜಾತಿಗೆ ತೊಂದರೆಯಾದರೂ ಎಲ್ಲರೂ ಒಗ್ಗಟ್ಟಾಗಿ ತೊಂದರೆ ನಿವಾರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಹಿಂದುತ್ವಕ್ಕೆ ತೊಂದರೆಯಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಹೇಳಿದರು.

ಹಿಂದುತ್ವ ಇಲ್ಲವೆಂದರೆ ದೇಶವೇ ಇಲ್ಲದಂತಾಗುತ್ತದೆ. ಏಕೆಂದರೆ ದೇಶ ಉಳಿದಿರುವುದು ಸಂಸ್ಕೃತಿಯಿಂದ, ಸಂಸ್ಕೃತಿ ಇರುವುದು ಹಿಂದುತ್ವದಿಂದ. ಹಿಂದುತ್ವ ಇಲ್ಲವಾದಲ್ಲಿ ಸಂಸ್ಕೃತಿ ಇಲ್ಲ, ಆ ನಂತರ ದೇಶವೂ ಇಲ್ಲ. ಕಾಶ್ಮೀರ ಕಣಿವೆ ಇಂದಿಗೂ ದೇಶದ ಗಡಿಯೊಳಗೇ ಇದೆ. ಆದರೆ ಅಲ್ಲಿ ದೇಶದ ವಿರುದ್ಧ ಘೋಷಣೆ ಕೂಗಲಾಗುತ್ತದೆ, ನಮ್ಮ ಯೋದರಿಗೆ ಕಲ್ಲು ಹೊಡೆಯಲಾಗುತ್ತದೆ. ಅಲ್ಲಿ ಸಂಸ್ಕೃತಿ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದರು. 

Advertisement

ಕೆಲವರು ಸ್ವಾರ್ಥದಿಂದಲೊ, ತಿಳಿವಳಿಕೆ ಇಲ್ಲದೆಯೋ ಇಂದು ಜಾತಿಗಳನ್ನು ಒಡೆದು ಸಣ್ಣ ಪುಟ್ಟ ವಿಭಾಗಗಳನ್ನು ಮಾಡಿದ್ದಾರೆ. ಆದರೂ ತೊಂದರೆ ಇಲ್ಲ. ನಾವೆಲ್ಲರೂ ಹಿಂದುಗಳು ಎಂಬುದನ್ನು ಅರಿತು ದೇಶ ಉಳಿಸುವ ಕೆಲಸ ಮಾಡೋಣ ಎಂದು ಹೇಳಿದರು. ಹಳ್ಳಿಕಾರರು ಸಹ ಒಕ್ಕಲಿಗರೇ ಆಗಿದ್ದಾರೆ. ಒಂದೊಂದು ಭಾಗದಲ್ಲಿ ಅವರನ್ನು ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಅಂತಿಮವಾಗಿ ಎಲ್ಲರೂ ಒಕ್ಕಲಿಗರು, ಎಲ್ಲರೂ ಹಿಂದುಗಳು. ರಾಜ, ಮಹಾರಾಜರ ಕಾಲದಲ್ಲಿ ಹಳ್ಳಿಕಾರರ ಕೊಡುಗೆ ಅಪಾರವಾಗಿದೆ. ಅವರಿಂದಾಗಿಯೇ ಹಲವು ಯುದ್ದಗಳನ್ನು ರಾಜರು ಗೆದ್ದಿದ್ದಾರೆ. 

ಈಗ ಸಂಘವನ್ನು ರಚಿಸಿಕೊಂಡು ಎಲ್ಲರೂ ಸಂಘಟಿತರಾಗುತ್ತಿರುವುದು ಸಂತಸದ ವಿಚಾರ ಎಂದರು. ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ಪಟೇಲ್‌ ಪಾಂಡು ಮಾತನಾಡಿ, ಈ ನಾಡು ಕಟ್ಟುವಲ್ಲಿ ಹಳ್ಳಿಕಾರರ ಕೊಡುಗೆ ಇದೆ. ಸಮುದಾಯದಲ್ಲಿ  ಉಪಪಂಗಡಗಳಿವೆ. ಆದರೂ ಎಲ್ಲರೂ ಒಗ್ಗಟ್ಟಾಗಿರಬೇಕು. ಆಧುನಿಕತೆಯ ಭರಾಟೆಯಲ್ಲಿ ಸಮುದಾಯಕ್ಕೆ ಉತ್ತಮ ಮಾರ್ಗದರ್ಶಕರ ಅವಶ್ಯಕತೆ ಇದೆ.
 
ಸಮುದಾಯದ ಹಿರಿಯರು ಸಲಹೆ ಸೂಚನೆಗಳನ್ನು ಕೊಡುವ ಮೂಲಕ ಸಂಘ ಬೆಳೆಸಬೇಕು ಎಂದರು. ಮಾಜಿ ಯೋಧರಾದ ನಾರಾಯಣಮೂರ್ತಿ, ಪರಮೇಶ್‌ ಬಾಬು, ಸಿ.ಎಚ್‌.ರಮೇಶ್‌ ಹಾಗೂ ಚಂದ್ರಶೇಖರ್‌ ಅವರಿಗೆ ಹಳ್ಳಿಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಎಸ್‌.ಎಸ್‌.ಎಲ್‌.ಸಿ. ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಧ್ಯಕ್ಷತೆಯನ್ನು ನಗರಸಭೆ ಮಾಜಿ ಉಪಾಧ್ಯಕ್ಷ ಕೋಟೆ ಶ್ರೀನಿವಾಸ್‌ ವಹಿಸಿದ್ದರು. ಹಳ್ಳಿಕಾರ ಮುಖಂಡ ಗಂಗಾಧರ ನಾಯಕ್‌, ರಾಜ್ಯ ಹಳ್ಳಿಕಾರ ಸಂಘದ ಅಧ್ಯಕ್ಷ ಮುನಿರಂಗಪ್ಪ, ನಗರಸಭಾ ಸದಸ್ಯ ಕೋಟೆ ಕೃಷ್ಣ, ವಕೀಲ ನಾಗಯ್ಯ, ಚಲನಚಿತ್ರ ನಟ ಹನುಮಂತೇ ಗೌಡ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next