Advertisement

ಈಗೇನಿದ್ರೂ ಜಾತಿಗಳ ಗುಣಾಕಾರ, ಭಾಗಾಕಾರ

11:13 PM Mar 24, 2019 | Vishnu Das |

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಎಂಟು ಕ್ಷೇತ್ರಗಳನ್ನು ಕಳೆದು ಕೊಂಡಿರುವ ಕಾಂಗ್ರೆಸ್‌ ತನ್ನ ಪಾಲಿನ 20 ಕ್ಷೇತ್ರಗಳಲ್ಲಿಯೇ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನ ನಡೆಸಿದೆ. ಮಹಿಳೆ, ಹಿಂದುಳಿದ ವರ್ಗದವರನ್ನು ಪರಿ ಗಣಿಸುವ ಪ್ರಯತ್ನ ಮಾಡಿದ್ದು, ಈ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಕ್ಕಿಂತ ಒತ್ತಡಕ್ಕೆ ಆದ್ಯತೆ ಸಿಕ್ಕಂತಾ ಗಿದೆ. ಈ ನಡುವೆ ಧಾರವಾಡ ಕ್ಷೇತ್ರದ ಟಿಕೆಟ್‌ ಹಂಚಿಕೆ ಗೊಂದಲ ಇನ್ನೂ ಬಗೆಹರಿದಿಲ್ಲ. ಗೊಂದಲಗಳ ನಡು ವೆಯೇ ಟಿಕೆಟ್‌ ಗಿಟ್ಟಿಸಿಕೊಂಡವರ ಮೇಲೊಂದು ಪಕ್ಷಿನೋಟ..

Advertisement

ಜಾತಿ ಲೆಕ್ಕಾಚಾರ
ಬೀದರ್‌- ಈಶ್ವರ್‌ ಖಂಡ್ರೆ
ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಹಿಂದುಳಿದವರ್ಗದ ರಜಪೂತ ಸಮಾಜಕ್ಕೆ ಸೇರಿರುವ ಮಾಜಿ ಸಿಎಂ ಧರ್ಮಸಿಂಗ್‌ ಪುತ್ರ ವಿಜಯ್‌ ಧರ್ಮ ಸಿಂಗ್‌ ನಡುವೆ ಟಿಕೆಟ್‌ಗೆ ಪೈಪೋಟಿ ನಡೆದಿತ್ತು. ಕಳೆದ ಚುನಾವಣೆಯಲ್ಲಿ ಧರ್ಮ ಸಿಂಗ್‌ ಸೋಲು ಹಾಗೂ ಈ ಬಾರಿ ಜಾತಿ ಲೆಕ್ಕಾಚಾರದಲ್ಲಿ ಹೈದರಾಬಾದ್‌ ಕರ್ನಾಟಕದಲ್ಲಿ ಸಾಮಾನ್ಯ ವರ್ಗಕ್ಕೆ ಇರುವ ಎರಡು ಕ್ಷೇತ್ರಗಳಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು
ಕುರುಬ ಸಮು ದಾಯಕ್ಕೆ ಬಿಟ್ಟು ಕೊಡುವ ಲೆಕ್ಕಾಚಾರದಲ್ಲಿ ಬೀದರ್‌ ಕ್ಷೇತ್ರವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆಗೆ ನೀಡಲಾಗಿದೆ.

ಅಳೆದು ತೂಗಿ ಅಭ್ಯರ್ಥಿ ಆಯ್ಕೆ
 ದಕ್ಷಿಣ ಕನ್ನಡ-ಮಿಥುನ್‌ ರೈ
ಬಿಜೆಪಿ ಭದ್ರ ಕೋಟೆಯಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸಲು ಕಾಂಗ್ರೆಸ್‌
ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡಿದ್ದು, ಜಾತಿ ಲೆಕ್ಕಾಚಾರದಲ್ಲಿಯೇ ಹೊಸ ಮುಖ ಪರಿಚಯಿಸುವ ಪ್ರಯತ್ನ ಮಾಡಿರುವ ಫ‌ಲವಾಗಿ ಯುವ ಘಟಕದ ಜಿಲ್ಲಾಧ್ಯಕ್ಷ ಮಿಥುನ್‌ ರೈ ಚುನಾವಣೆಯಲ್ಲಿಅಭ್ಯರ್ಥಿಯಾಗುವ ಅವಕಾಶ ಪಡೆಯುವಂತಾಗಿದೆ.

ಹಿರಿಯ ನಾಯಕರಾದ ರಮಾನಾಥ ರೈ ಹಾಗೂ ಬಿ.ಕೆ. ಹರಿಪ್ರಸಾದ್‌ ನಡುವಿನ ಪೈಪೋಟಿ ತಪ್ಪಿಸಲು, ಯುವ ಸಮುದಾಯಕ್ಕೆ ಅವಕಾಶ ಕೊಡುವ ಲೆಕ್ಕಾಚಾರದಲ್ಲಿ ಮಿಥುನ್‌ ರೈ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಕ್ಷೇತ್ರ ಒದಗಿಸುವ ನಡೆ
ಬೆಂ. ದಕ್ಷಿಣ-ಬಿ.ಕೆ.ಹರಿಪ್ರಸಾದ್‌
ಈ ಕ್ಷೇತ್ರದಲ್ಲಿ ಗೆಲವು ಮತ್ತು ಜಾತಿ ಲೆಕ್ಕಾಚಾರಕ್ಕಿಂತ ಹಿರಿಯ ಮುಖಂಡ ಬಿ.ಕೆ.
ಹರಿಪ್ರಸಾದ್‌ ಅವರಿಗೆ ಕ್ಷೇತ್ರ ಒದಗಿಸುವ ನಡೆ ಕಾಂಗ್ರೆಸ್‌ ಅನುಸರಿಸಿದಂತಿದೆ. ಬಿ.ಕೆ.
ಹರಿಪ್ರಾದ್‌ ಬೆಂಗಳೂರು ಕೇಂದ್ರದಿಂದ ಟಿಕೆಟ್‌ಗೆ ಪಟ್ಟು ಹಿಡಿದಿದ್ದರು. ಆದರೆ, ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ಕೊಟ್ಟಿದ್ದರಿಂದ ಅವರಿಗೆ ಪರ್ಯಾಯ ಕ್ಷೇತ್ರ
ಒದಗಿಸಬೇಕಿತ್ತು. ಮಂಗಳೂರು ಹಾಗೂ ಬೆಂಗಳೂರು ಕೇಂದ್ರದಿಂದ ಟಿಕೆಟ್‌ ಕೈ ತಪ್ಪಿದ
ಹರಿಪ್ರಸಾದ್‌ಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್‌ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಕಷ್ಟು ಪ್ರಯತ್ನ ನಡೆಸಿತ್ತು. ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಶಾಸಕ ಪ್ರಿಯಾ ಕೃಷ್ಣ ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸಿ ಜಯ ಗಳಿಸುವ ಲೆಕ್ಕಾಚಾರ ಹಾಕಿತ್ತು. ಆದರೆ, ಇಬ್ಬರೂ ನಿರಾಕರಿಸಿದ್ದರಿಂದ ಪರ್ಯಾಯ ಅಭ್ಯರ್ಥಿಗೆ ಮೂರ್ನಾಲ್ಕು ಹೆಸರುಗಳು ಕೇಳಿ ಬಂದಿದ್ದರೂ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಕೆ. ಗೋವಿಂದರಾಜ್‌ಅವರ ಹೆಸರು ಮುಂಚೂಣಿಯಲ್ಲಿತ್ತು.

Advertisement

ಲಿಂಗಾಯತ ಕಾರ್ಡ್‌ ಬಳಕೆ
ದಾವಣಗೆರೆ-ಶಾಮನೂರು ಶಿವಶಂಕರಪ್ಪ
ಕಾಂಗ್ರೆಸ್‌ ಇಲ್ಲಿ ಮತ್ತೂಮ್ಮೆ “ಲಿಂಗಾಯತ ಕಾರ್ಡ್‌’ ಬಳಸಿದೆ. ಸತತ ಸೋಲು ಕಂಡಿದ್ದರಿಂದ ಈ ಬಾರಿ ಲಿಂಗಾಯತರ ಬದಲಿಗೆ ಕುರುಬ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂಬ ಮಾತುಗಳು ಕೇಳಿ ಬಂದಿದ್ದವು. ಸಿದ್ದರಾಮಯ್ಯ ಅವರ ಬೇಡಿಕೆ ಸಹ ಇದೇ ಆಗಿತ್ತು.

ವಿಧಾನಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಹೆಸರು ತೇಲಿ ಬಂದಿತ್ತು. ಆದರೆ, ಲಿಂಗಾಯತರಿಗೇ ಟಿಕೆಟ್‌ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಹೆಸರು ಬಹುತೇಕ ಅಂತಿಮಗೊಂಡಿತ್ತು. ಆದರೆ, ಮಗನ ಬದಲು
ತಂದೆ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್‌ ಅಂತಿಮಗೊಳಿಸುವ ಮೂಲಕ ಕಾಂಗ್ರೆಸ್‌, ಇಲ್ಲಿ ಮತ್ತೆ ಲಿಂಗಾಯತ ಕಾರ್ಡ್‌ ಬಳಸಿದೆ.

ಅಲ್ಪಸಂಖ್ಯಾತರಿಗೆ ಆದ್ಯತೆ
ಬೆಂಗಳೂರು ಕೇಂದ್ರ-ರಿಜ್ವಾನ್‌ ಅರ್ಷದ್‌
ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್‌ ನೀಡಬೇಕೆಂದು ಪಕ್ಷದ ನಾಯಕರು ಮೊದಲೇ ನಿರ್ಧರಿಸಿದ್ದರು. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಬಲವಾಗಿ ಪಟ್ಟು ಹಿಡಿದಿದ್ದರಿಂದ ಮಾಜಿ ಸಚಿವ ರೋಷನ್‌ ಬೇಗ್‌ ಅವರಿಗೆ ಪಕ್ಷದ ಹೈಕಮಾಂಡ್‌ ನಾಯಕರು ಬೆನ್ನಿಗೆ ನಿಂತರೂ ಅವಕಾಶ ಪಡೆಯಲಾಗಲಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಸೋತ ನಂತರ
ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳೊಂದಿಗೆ ಸಕ್ರಿಯರಾಗಿದ್ದರು ಎನ್ನುವುದು ಕೂಡ ರಿಜ್ವಾನ್‌ ಆಯ್ಕೆಗೆ ಪೂರಕವಾಗಿದೆ.

ಧಾರವಾಡ ಅಭ್ಯರ್ಥಿ
ಆಯ್ಕೆ ವಿಳಂಬ
ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆ ಗೊಂದಲ ಇನ್ನೂ ಮುಗಿದಿಲ್ಲ. ಸದ್ಯ
ಮುಗಿಯುವ ಲಕ್ಷಣಗಳೂ ಕಾಣುತ್ತಿಲ್ಲ. 2ನೇ ಹಂತದಲ್ಲಿ ಮತದಾನ ನಡೆಯಲಿರುವು
ದರಿಂದ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಳಂಬವಾಗುವ ಸಾಧ್ಯತೆಯಿದೆ. ಕೊಪ್ಪಳ
ಹಾಗೂ ಹಾವೇರಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಲೆಕ್ಕಾಚಾರವನ್ನು
ಪರಿಗಣಿಸಿ ಧಾರವಾಡದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಲು ಯೋಚಿಸಲಾಗಿತ್ತು.
ಮೂರು ಬಾರಿ ಹಾವೇರಿ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರಿಗೆ, ಧಾರವಾಡದಲ್ಲಿ ಲಿಂಗಾಯತ
ಸಮುದಾಯಕ್ಕೆ ಟಿಕೆಟ್‌ ನೀಡಿದ್ದರೂ, ಗೆಲುವು ಸಾಧ್ಯವಾಗದ ಕಾರಣ ಕಾಂಗ್ರೆಸ್‌ ಈ ಬಾರಿ ಬದಲಾವಣೆ ಪ್ರಯೋಗ ಮಾಡಲು ಮುಂದಾಗಿತ್ತು. ಆದರೆ, ಇಲ್ಲಿ ನೇರವಾಗಿ
“ಹಿಂದೂ-ಮುಸ್ಲಿಂ’ ವಿಚಾರ ಮುನ್ನೆಲೆಗೆ ಬಂದಿದೆ. ಮುಸ್ಲಿಮರಿಗೆ ಟಿಕೆಟ್‌ ಕೊಟ್ಟರೆ
ಗೆಲ್ಲುವುದಿಲ್ಲ ಅದಕ್ಕಾಗಿ ಹಿಂದೂ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಶಾಕಿರ್‌ ಸನದಿ ಬದಲು ಸದಾನಂದ ಡಂಗಣ್ಣನವರ್‌ ಅವರ ಹೆಸರು ಚಾಲ್ತಿಯಲ್ಲಿದೆ. ಮೇಲಾಗಿ ಇವರ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರಯತ್ನ ನಡೆಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಕೃಪೆ
ಮೈಸೂರು-ಸಿ.ಎಚ್‌. ವಿಜಯಶಂಕರ್‌
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮೈತ್ರಿ ಪಕ್ಷದೊಂದಿಗೂ ಪ್ರತಿಷ್ಠೆಯಾಗಿ ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್‌ನಲ್ಲಿ ಉಳಿಸಿಕೊಂಡಿದ್ದು, ತಮ್ಮನ್ನು ನಂಬಿ ಬಿಜೆಪಿಯಿಂದ ಪಕ್ಷಾಂತರಗೊಂಡಿದ್ದ ಮಾಜಿ ಸಚಿವ ಸಿ.ಎಚ್‌. ವಿಜಯ್‌ ಶಂಕರ್‌ಗೆ ಅವಕಾಶ ಕೊಡಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಮೊಮ್ಮಗ ಸೂರಜ್‌ ಹೆಗಡೆ ಹೈ ಕಮಾಂಡ್‌ ಮಟ್ಟದಲ್ಲಿ ಕಸರತ್ತು ನಡೆಸಿದ್ದರೂ, ಸಿದ್ದರಾಮಯ್ಯ ಕೃಪೆಯಿಂದ ವಿಜಯ್‌ ಶಂಕರ್‌ಗೆ ಟಿಕೆಟ್‌ ಸಿಗುವಂತಾಗಿದೆ.

ಬೆಳಗಾವಿಯಲ್ಲಿ ಹಣಬಲದ ಲೆಕ್ಕಾಚಾರ
ಬೆಳಗಾವಿ-ವಿ.ಎಸ್‌. ಸಾಧೂನವರ್‌
ಬಿಜೆಪಿಯ ಹಾಲಿ ಸಂಸದ ಸುರೇಶ್‌ ಅಂಗಡಿಯನ್ನು ಸೋಲಿಸಲು ಕಾಂಗ್ರೆಸ್‌ ಜಾತಿ ಲೆಕ್ಕಾಚಾರ ಬದಲಾಯಿಸಿ ಲಿಂಗಾಯತರ ಬದಲು ಮರಾಠಾ ಸಮುದಾಯದ ಅಂಜಲಿ ನಿಂಬಾಳ್ಕರ್‌ಗೆ ಟಿಕೆಟ್‌ ನೀಡಲು ರಾಜ್ಯ ನಾಯಕರು ಲೆಕ್ಕಾಚಾರ ಹಾಕಿದ್ದರು. ಆದರೆ, ಅವರಿಗೆ ಟಿಕೆಟ್‌ ನೀಡುವುದಕ್ಕೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರ ಗೊಂದಲ ತಪ್ಪಿಸಲು ಕಾಂಗ್ರೆಸ್‌ ಜಾತಿ ಲೆಕ್ಕಾಚಾರಕ್ಕಿಂತ ಹಣಬಲದ ಲೆಕ್ಕಾಚಾರ ಹಾಕಿರುವುದರಿಂದ ವಿ.ಎಸ್‌. ಸಾಧೂನವರ್‌ಗೆ ಅವಕಾಶ ಒಲಿದು ಬಂದಿದೆ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next