Advertisement

ಜಾತಿ ರಾಜಕೀಯಕ್ಕೆ ನಾಂದಿಯೇ? ನಿಗಮ ರಾಜಕೀಯ

10:39 PM Nov 18, 2020 | mahesh |

ರಾಜ್ಯದಲ್ಲಿ ಒಂದು ಲೋಕಸಭೆ, ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆಗಳು ಎದುರಾಗುವ ಸಾಧ್ಯತೆಗಳಿವೆ. ಇದರ ನಡುವೆಯೇ, ರಾಜ್ಯ ಸರಕಾರ‌ ಮರಾಠ ಅಭಿವೃದ್ಧಿ ನಿಗಮ ಮತ್ತು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಇದು ನಾನಾ ಚರ್ಚೆಗಳಿಗೂ ಕಾರಣವಾಗಿವೆ. ಈ ಎರಡೂ ನಿಗಮಗಳ ರಚನೆ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನುವುದು ಗಮನಾರ್ಹ.

Advertisement

ಶಿರಾ ಉಪ ಚುನಾವಣೆ ಸಂದರ್ಭದಲ್ಲೂ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಲಾಗಿತ್ತು. ಈಗ ಮತ್ತೆರಡು ನಿಗಮಗಳ ರಚನೆ ಘೋಷಣೆಯಾಗಿದೆ. ನಿಗಮ-ಮಂಡಳಿಗಳ ರಚನೆ ಮೂಲಕ ಶೋಷಿತ ಸಣ್ಣ-ಪುಟ್ಟ ಸಮುದಾಯಗಳ ಏಳಿಗೆಗೆ ಸರಕಾರ‌ ಮುಂದಾಗುವುದು ಸ್ವಾಗತಾರ್ಹ ಹೆಜ್ಜೆ ಆಗಿರಬಹುದು. ಆದರೆ ಸ್ಥಾಪನೆ ಸಂದರ್ಭಗಳು ನಡೆಯನ್ನು ಅನುಮಾನದಿಂದ ನೋಡುವಂತೆ ಮಾಡುತ್ತಿವೆ. ಆ ಅನುಮಾನವನ್ನು ದೂರ ಮಾಡುವ ಹೊಣೆ ಕೂಡ ಈಗ ಸರಕಾರ‌ದ ಮೇಲಿದೆ.

ಈ ಮಧ್ಯೆ ಅದೇ ಸಮುದಾಯದ ಸ್ವಾಮೀಜಿಗಳು, ಮಠಾಧಿಪತಿಗಳು, ನಾಯಕರಲ್ಲಿ ಪರ-ವಿರೋಧಗಳಿಗೂ ಇದು ಕಾರಣವಾಗಿದೆ. ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯದವರನ್ನು ಮೇಲಕ್ಕೆತ್ತುವ ಕೆಲಸ ಆಗಬೇಕು; ರಾಜಕೀಯೇತರ ವ್ಯಕ್ತಿ ನಿಗಮದ ಅಧ್ಯಕ್ಷರಾಗಲಿ; ಮೀಸಲೂ ಕೊಡಲಿ ಎಂಬಿತ್ಯಾದಿ ಬೇಡಿಕೆಗಳು, ಅಭಿಪ್ರಾಯಗಳು ಕೇಳಿಬರ್ತುತಿವೆ. ಅದರಲ್ಲೂ ಸಿದ್ಧಗಂಗಾ ಶ್ರೀಗಳು ಜಾತಿಗೊಂದು ನಿಗಮ ಮಾಡುತ್ತಾ ಹೋದರೆ ಇದು ನಿಲ್ಲುವುದೇ ಇಲ್ಲ ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಮಾತುಗಳನ್ನು ಗಮನಿಸಿಕೊಂಡು ಸರಕಾರ‌, ಈ ಸಮುದಾಯಗಳ ಅಭಿವೃದ್ಧಿಗೆ ಮುಂದಾಗಬೇಕು. ಇದನ್ನು ಬಿಟ್ಟು ಆಯಾ ಸಮುದಾಯದ ಮುಖಂಡರು ಮತ್ತು ಅಧಿಕಾರಿಗಳಿಗೆ ಆಶ್ರಯ ತಾಣವಾಗಲು ಬಿಡಬಾರದು.

ವೀರಶೈವ-ಲಿಂಗಾಯತರ ಹಲವು ಬೇಡಿಕೆಗಳಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ ಕೂಡ ಒಂದು. ಈ ಹಿಂದಿನ ಅಧಿವೇಶನ ಸಂದರ್ಭದಲ್ಲೂ ಕೂಗು ಕೇಳಿಬಂದಿತ್ತು. ಆದರೆ ಅನಂತರದಲ್ಲಿ ನೇಪಥ್ಯಕ್ಕೆ ಸರಿದಿತ್ತು. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯು ಮತ್ತೆ ಲಿಂಗಾಯತ-ವೀರಶೈವ ಅಭಿವೃದ್ಧಿ ನಿಗಮ ಚರ್ಚೆ ಮುನ್ನೆಲೆಗೆ ಬರುವಂತೆ ಮಾಡಿತು. ಕೊನೆಗೆ ರಚನೆಯೂ ಆಯಿತು.

ಈ ನಿಗಮದಿಂದ ವೀರಶೈವ-ಲಿಂಗಾಯತ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಆದ್ದರಿಂದ ವೀರಶೈವ-ಲಿಂಗಾಯತರಲ್ಲಿ ಬೆರಳೆಣಿಕೆಯಷ್ಟು ಸಮುದಾಯಗಳು ಬಲಾಡ್ಯವಾಗಿದ್ದರೂ ಅಸಂಖ್ಯಾತ ಸಮುದಾಯಗಳು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಈಗಲೂ ಹಿಂದುಳಿದಿವೆ. ಅವು ಗಳಲ್ಲಿ ಅನೇಕರು ಸೌಲಭ್ಯಗಳಿಗಾಗಿ ಸ್ವಾಭಿಮಾನ ಬದಿಗೊತ್ತುವ ಸ್ಥಿತಿ ಇದೆ.

Advertisement

ಇನ್ನು ಇತ್ತೀಚಿನ ವರ್ಷಗಳಲ್ಲಿ ಜಾತಿ ಆಧಾರಿತ ನಿಗಮ-ಮಂಡಳಿಗಳ ರಚನೆ ಪರ್ವ ಶುರುವಾಗಿದ್ದು, ಅಭಿವೃದ್ಧಿ ಆಧಾರಿತ ಚರ್ಚೆ ನೇಪಥ್ಯಕ್ಕೆ ಸರಿದಿದೆ. ಕಳೆದ ಏಳೆಂಟು ವರ್ಷಗಳಲ್ಲಿ ವಾಲ್ಮೀಕಿ, ಬ್ರಾಹ್ಮಣ, ಸವಿತಾ ಸಮಾಜ, ವಿಶ್ವಕರ್ಮ, ಅಂಬಿಗರ ಚೌಡಯ್ಯ, ಗೊಲ್ಲರು, ಮರಾಠ ಹೀಗೆ ಸುಮಾರು ಏಳೆಂಟು ನಿಗಮಗಳನ್ನು ರಚಿಸಲಾಗಿದೆ. ಅವುಗಳಿಗೆ ಸರಿಯಾದ ಅನುದಾನ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಜತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮುದಾಯಗಳಿಂದ ಇಂತಹದ್ದೇ ಬೇಡಿಕೆ ಬರಬಹುದು. ಆಗ ಸರಕಾರ‌ ಏನು ಮಾಡುತ್ತದೆ? ಇಷ್ಟೂ ನಿಗಮಗಳ ನಿರ್ವಹಣೆ ಲೆಕ್ಕದಲ್ಲಿ ಮತ್ತೂಂದು ಅಧಿಕಾರಿಗಳ ಪಡೆ ರಚಿಸುತ್ತದೆಯೇ? ಆಗ ಅದು ಕೂಡ ಆಡಳಿತಾತ್ಮಕವಾಗಿ ಮತ್ತು ಆರ್ಥಿಕವಾಗಿ ಹೊರೆ ಆಗುವುದಿಲ್ಲವೇ? ಜಾತ್ಯತೀತ ಸಮಾಜದ ಕಡೆಗೆ ಹೋಗುತ್ತಿರುವ ನಮಗೆ ಮೀಸಲಾತಿ ಅಥವಾ ನಿಗಮಗಳು ಸಮ ಸಮಾಜಕ್ಕೆ ಒಂದು ಸಾಧನವಾಗಬೇಕೇ ಹೊರತು, ಅದು ಮತ್ತೂಂದು ಮತ ಬ್ಯಾಂಕ್‌ ಆಗಬಾರದು.

Advertisement

Udayavani is now on Telegram. Click here to join our channel and stay updated with the latest news.

Next