Advertisement

ಜಾತಿ, ಕುಟುಂಬ ರಾಜಕಾರಣ, ಕಮಲ ಕಂಪನ ; ಬೆಳಗಾವಿ ಬಿಜೆಪಿ ಸೋಲಿಗೆ ಕಾರಣ ಯಾರು?

11:38 AM Dec 15, 2021 | Team Udayavani |

ಬೆಳಗಾವಿ:ಜಾತಿ ಮತ್ತು ಕುಟುಂಬ ರಾಜಕಾರಣ ಎರಡೂ ಇಲ್ಲಿ ಸರಿಯಾದ ಕೆಲಸ ಮಾಡಿವೆ. ಯಥೇಚ್ಛವಾಗಿ ಹೊಳೆಯಂತೆ ಹರಿಸಿದ ಹಣದ ಲೆಕ್ಕಾಚಾರ ಎಲ್ಲಿಯೂ ತಪ್ಪಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ದೊಡ್ಡ ಅಗ್ನಿಪರೀಕ್ಷೆಯಲ್ಲಿ ಜಯದ ನಗೆ ಬೀರಿದ್ದಾರೆ. ತಮ್ಮ ಕುಟುಂಬದ ವಿರುದ್ಧ ವಾಕ್ಸಮರ ನಡೆಸಿದ್ದ ವಿರೋಧಿಗಳಿಗೆ ಗೆಲುವಿನ ಮೂಲಕ ಲಕ್ಷ್ಮೀ ಹೆಬ್ಟಾಳಕರ ನೆನಪಿನಲ್ಲಿ ಉಳಿಯುವ ಪಾಠ ಹೇಳಿದ್ದಾರೆ.

Advertisement

ಇದು ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ಎರಡು ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶದ ಒಂದು ಸಂಕ್ಷಿಪ್ತ ವಿಶ್ಲೇಷಣೆ. ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿನ ಲಿಂಗಾಯತ ಸಮಾಜದ ಮತದಾರರಿಗೆ ಸಮಾಜದ ಪ್ರಮುಖರ ಸಂದೇಶ ಹಾಗೂ ನಿರ್ಣಯ ಒಳ್ಳೆಯ ಫಲ ಕೊಟ್ಟಿದೆ. ಅದೇ ಇನ್ನೊಂದು ಕಡೆ ಅಳುಕಿನಲ್ಲೇ ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿ ಅವರನ್ನೇ ನಂಬಿಕೊಂಡಿದ್ದ ಬಿಜೆಪಿ ನಾಯಕರು ಮತ್ತು ಮಹಾಂತೇಶ ಕವಟಗಿಮಠ
ಅವರಿಗೆ ಅರಗಿಸಿಕೊಳ್ಳಲಾರದ ಕಹಿ ಸಿಕ್ಕಿದೆ. ಇಬ್ಬರ ಜಗಳದಲ್ಲಿ ಕವಟಗಿಮಠ ಲಾಭದ ಬದಲು ಭರಿಸಲಾರದ ನಷ್ಟ ಅನುಭವಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿ ರಾಜಕೀಯವಾಗಿ ಸ್ಪರ್ಧೆಯಲ್ಲಿದ್ದರೂ ಜಿಲ್ಲೆಯ ರಾಜಕೀಯ ನಾಯಕರ ಲೆಕ್ಕಾಚಾರವೇ ಬೇರೆಯಾಗಿತ್ತು. ತಮಗಾಗದವರು ಗೆಲ್ಲುವುದು ಬೇಡ ಎಂಬ ಕೆಲ ಮುಖಂಡರ ನಿರ್ಧಾರ ಪರಿಣಾಮ ಬೀರಿತು. ಇದರಿಂದ ವಿಧಾನ ಪರಿಷತ್‌ಗೆ ಬೆಳಗಾವಿ ಜಿಲ್ಲೆಯಿಂದ ಮೊದಲ ಬಾರಿಗೆ ಎರಡು ಹೊಸ ಮುಖಗಳ ಪ್ರವೇಶವಾಗಿದೆ. ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ ಮತ್ತು ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಇನ್ನು ವಿಧಾನ ಪರಿಷತ್‌ ಸದಸ್ಯರು.

ಬಿಜೆಪಿ ಸೋಲಿಗೆ ಕಾರಣ ಯಾರು?
ಪಕ್ಷದ ವಲಯದಲ್ಲಿ ಈಗ ಈ ವಿಷಯ ಬಹಳ ಗಂಭೀರವಾಗಿ ನಡೆದಿದೆ. ಜಿಲ್ಲೆಯಲ್ಲಿ ಮೂವರು ಸಂಸದರು ಹಾಗೂ 13 ಜನ ಬಿಜೆಪಿ ಶಾಸಕರ ಜತೆಗೆ ಮೂವರು ಸಚಿವರಿದ್ದರೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಆಗಲಿಲ್ಲ ಎಂಬುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಯಾರಿಗೆ ಯಾರು ಮುಳ್ಳಾದರು ಎಂಬ ಚರ್ಚೆ ನಡೆದಿದೆ. ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಿಂದ ಗೆದ್ದಿದ್ದ ಬಿಜೆಪಿಗೆ ಈಗ ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌, ವಿಧಾನಸಭೆ ಚುನಾವಣೆಗೆ ಎಚ್ಚರಿಕೆಯ ಗಂಟೆ. ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ಮಹಾಂತೇಶ ಕವಟಗಿಮಠ ನಿರಾಸೆಯಿಂದ ಹೊರನಡೆದರೆ, ಈ ಕಡೆ ಜಿಲ್ಲೆಯ ಬಿಜೆಪಿ ನಾಯಕರು ಸೋಲಿಗೆ ಜಾರಕಿಹೊಳಿ ಸಹೋದರರ ಕಡೆ ಬೊಟ್ಟು ಮಾಡಿದ್ದಾರೆ. ಆದರೆ ಜಾರಕಿಹೊಳಿ ಸಹೋದರರು ತಪ್ಪು ಮಾಡಿದ್ದರೆ ರಮೇಶ, ಬಾಲಚಂದ್ರ ಹೊರತುಪಡಿಸಿ ಉಳಿದ 11 ಜನ ಶಾಸಕರು, ಮೂವರು ಸಂಸದರು ಏನು ಮಾಡುತ್ತಿದ್ದರು. ಅವರೂ ಸಹ ಸೋಲಿಗೆ ಹೊಣೆಯಲ್ಲವೆ ಎಂಬ ಪ್ರಶ್ನೆ ಎದುರಾಗಿದೆ. ಫಲಿ ಶದ ಬಳಿಕ ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಜಿಲ್ಲೆಯ ನಾಯಕರು ಬಿಜೆಪಿ ವರಿಷ್ಠರ ಕಂಗೆಣ್ಣಿಗೆ ಗುರಿಯಾಗಿದ್ದಾರೆ.

Advertisement

ಚುನಾವಣೆಗೆ ಮೊದಲೇ ಲಖನ್‌ ಜಾರಕಿಹೊಳಿ ಸ್ಪರ್ಧೆ ಹಾಗೂ ಅವರಿಗೆ ಸಹೋದರರ ಬೆಂಬಲದ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಮಹಾಂತೇಶ ಕವಟಗಿಮಠ ಆಕ್ಷೇಪ ಎತ್ತಿದ್ದರು. ಆದರೆ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಜಾರಕಿಹೊಳಿ ಸಹೋದರರಿಗೆ ಲಖನ್‌ ಅವರನ್ನು ಕಣದಿಂದ ಹಿಂದೆ ಸರಿಸಬೇಕು ಎಂದು ತಾಕೀತು ಮಾಡಲಿಲ್ಲ. ಅದರ ಪರಿಣಾಮ ಈಗ ಚುನಾವಣೆಯಲ್ಲಿ ಗೊತ್ತಾಗಿದೆ. ಪಕ್ಷದಲ್ಲಿನ ಭಿನ್ನಮತ, ಮನಸ್ತಾಪ ಮಹಾಂತೇಶ ಕವಟಗಿಮಠ ಸೋಲಿಗೆ ಕಾರಣವಾಗಿದೆ. ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿ ಸಹೋದರರು ಚುನಾವಣೆಯಲ್ಲಿ ಕವಟಗಿಮಠ ಪರವಾಗಿ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇನ್ನೊಂದು ಕಡೆ ಈ ಚುನಾವಣೆ ಮೂಲಕ ಜಾರಕಿಹೊಳಿ ಸಹೋದರರಿಗೆ ಪಕ್ಷದಿಂದ ಬಿಸಿ ಮುಟ್ಟಿಸಬೇಕು ಎಂಬ ಲೆಕ್ಕಾಚಾರದಲ್ಲಿ ಜಿಲ್ಲೆಯ ಶಾಸಕರು ಹಾಗೂ ನಾಯಕರು ಕವಟಗಿಮಠ ಪರ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಲಿಲ್ಲ. ಚುನಾವಣಾ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದರು ಎಂಬ ಅಭಿಪ್ರಾಯ ಸಹ ಇದೆ.

ಕಾಂಗ್ರೆಸ್‌ಗೆ ಶಕ್ತಿ ತುಂಬಿದ್ದು ಯಾರು?
ಕಾಂಗ್ರೆಸ್‌ ಪಾಲಿಗೆ ಇದು ಮರೆಯಲಾರದ ಕ್ಷಣ ಮತ್ತು ವಿಜಯ. ಈ ಚುನಾವಣೆ ಜಾರಕಿಹೊಳಿ ಮತ್ತು ಹೆಬ್ಟಾಳಕರ ನಡುವಿನ ಯುದ್ಧ ಎಂದೇ ಎಲ್ಲರೂ ಪರಿಗಣಿಸಿದ್ದರು. ಬಿಜೆಪಿ ಜಯಕ್ಕಿಂತ ಕಾಂಗ್ರೆಸ್‌ ಸೋಲಬೇಕು ಎಂದೇ ಪ್ರಚಾರ ಮಾಡಿದ್ದ ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿ ಇದೇ ವಿಶ್ವಾಸವನ್ನು ಮತದಾರರಲ್ಲಿ ಮೂಡಿಸುವಲ್ಲಿ ವಿಫಲರಾದರು. ಇಲ್ಲಿ ಹೆಬ್ಬಾಳ್ಕರ ಕುಟುಂಬದ ಪರ ಸತೀಶ ಜಾರಕಿಹೊಳಿ ನಿಂತಿದ್ದು ಹೆಬ್ಟಾಳಕರ ಸಹೋದರ ಚನ್ನರಾಜ
ಹಟ್ಟಿಹೊಳಿಗೆ ಅಷ್ಟೇ ಅಲ್ಲ, ಕಾಂಗ್ರೆಸ್‌ಗೆ ಸಹ ಹೊಸ ಶಕ್ತಿ ಮತ್ತು ಹುಮ್ಮಸ್ಸು ನೀಡಿತು. ಇದರ ಜತೆಗೆ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರ ಬೆಂಬಲ ವಿರೋಧಿಗಳ ಲೆಕ್ಕಾಚಾರ ತಪ್ಪುವಂತೆ ಮಾಡಿತು. ಇದರ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ ಪ್ರಚಾರ ಸಹ ಸಾಕಷ್ಟು ಪರಿಣಾಮ ಬೀರಿದವು.

ಮೇಲ್ನೋಟಕ್ಕೆ ಇದು ಚನ್ನರಾಜ ಹಟ್ಟಿಹೊಳಿ ಗೆಲುವಾದರೂ ನಿಜವಾಗಿಯೂ ಈ ಯುದ್ಧದಲ್ಲಿ ಗೆದ್ದವರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಮತ್ತು ಕೆಪಿಸಿಸಿ ಕಾಯಾಧ್ಯಕ್ಷ ಸತೀಶ ಜಾರಕಿಹೊಳಿ. ಇಬ್ಬರೂ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಜಿಲ್ಲೆಯ ಎಲ್ಲ ಕಡೆ ಸಂಚಾರ ಮಾಡಿದ್ದರು. ಪ್ರಚಾರದ ಸಮಯದಲ್ಲಿ ಹೆಬ್ಬಾಳ್ಕರ ವಿವಾದಾತ್ಮಕ ಹೇಳಿಕೆಗಳ ಗೋಜಿಗೆ ಹೋಗಲಿಲ್ಲ. ಆದರೆ ತಮ್ಮ ಬಗ್ಗೆ ರಮೇಶ ಜಾರಕಿಹೊಳಿ ಮಾತನಾಡಿದ್ದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡರು.

ಕಾಂಗ್ರೆಸ್‌ ಸೋಲಿಸಲು ಖಂಡಿತ ಸಾಧ್ಯವಿಲ್ಲ ಎಂಬುದು ಈ ಚುನಾವಣೆ ಮೂಲಕ ಸಾಬೀತಾಗಿದೆ. ಪರಿಷತ್‌ ಚುನಾವಣೆಯಿಂದ ಜಿಲ್ಲೆಯಲ್ಲಿ ಭಿನ್ನ ರಾಜಕೀಯ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌ ಸೋಲಿಸಲೇಬೇಕು ಎಂದು ವಿರೋಧಿಗಳು ಪಣತೊಟ್ಟಿದ್ದರು. ಕಾಂಗ್ರೆಸ್‌ನ ಎಲ್ಲ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದರು. ಅದರ ಫಲಿತಾಂಶ ಜನರ ಮುಂದಿದೆ.
ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

ಇದು ಅನಿರೀಕ್ಷಿತ. ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿರುವಾಗ ಈ ರೀತಿಯ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಜಿಲ್ಲೆಯಲ್ಲಿ ಮೂವರು ಸಂಸದರು, 13 ಜನ ನಮ್ಮ ಶಾಸಕರಿದ್ದರೂ ಬಿಜೆಪಿ ಗೆಲ್ಲಲಿಲ್ಲ ಎಂಬುದು ಬಹಳ ನೋವಿನ ಸಂಗತಿ. ಎಂತಹ ರಾಜಕೀಯ ನಡೆಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಇದು ನಮಗೆ ಎಚ್ಚರಿಕೆಯ ಸಂದೇಶ. ನಾವು ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾಗಿದೆ.
ಸಂಜಯ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next