ಚಿಂಚೋಳಿ: ಕೋಲಿ ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಲು ಗಂಗಾಮತ, ಮೀನುಗಾರ, ಮೊಗವೀರ ಜಾತಿಗಳು ಅಡ್ಡಿಯಾಗಿರುವುದರಿಂದ ಸೇರ್ಡಡೆಗೆ ಹಿನ್ನೆಡೆ ಉಂಟಾಗುತ್ತಿದೆ ಎಂದು ಮಾಜಿ ಸಚಿವ, ರಾಜ್ಯ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಹೇಳಿದರು.
ತಾಲೂಕಿನ ಚಂದ್ರಂಪಳ್ಳಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 901 ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ಗಂಗಾವತಿ, ಯಾನಾಗುಂದಿಯಲ್ಲಿ ಬೃಹತ್ ಸಮಾವೇಶ ನಡೆಸಿದ್ದೇನೆ ಎಂದರು.
1991-92ರಲ್ಲಿ ಗಂಗಾವತಿಯಲ್ಲಿ ನಡೆಸಿದ ಸಮಾವೇಶದಲ್ಲಿ ಆಗಿನ ಮುಖ್ಯಮಂತ್ರಿ ಎಂ. ವೀರಪ್ಪ ಮೋಯ್ಲಿ ನಮ್ಮ ಸಮಾಜವನ್ನು ಪ್ರವರ್ಗ-1ಕ್ಕೆ ಸೇರ್ಪಡೆ ಮಾಡಿದರು. ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಡಳಿತದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. ಆದರೆ ಕೇಂದ್ರ ಸರ್ಕಾರ ಗಂಗಾಮತ, ಮೊಗವೀರ, ಮೀನುಗಾರ ಜಾತಿಗಳನ್ನು ಕಬ್ಬಲಿಗ ಜಾತಿಗೆ ಸೇರಿಸುವುದಿಲ್ಲವೆಂದು ರಾಜ್ಯ ಸರ್ಕಾರದ ವರದಿ ತಿರಸ್ಕರಿಸಿತು ಎಂದು ವಿವರಿಸಿದರು.
ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಿದರೆ ನನ್ನ ಹೆಸರೇ ಎಲ್ಲೆಡೆ ಕೇಳಿಬರುತ್ತದೆ ಎನ್ನುವ ಕಾರಣದಿಂದಾಗಿ ನಮ್ಮ ಸಮಾಜದಲ್ಲಿ ಇರುವವರೇ ನನ್ನ ಕಾಲೆಳೆಯುತ್ತಿದ್ದಾರೆ. ನಾನು ಮಾಡಿದ ಸಾಧನೆಯನ್ನು ಯಾರೂ ಹೇಳುತ್ತಿಲ್ಲ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ಮನಸ್ಸು ಮಾಡಲಿಲ್ಲ. ಆದರೀಗ ಎಸ್‌ಟಿಗೆ ಸೇರ್ಪಡೆಯಾಗುವ ಕಾಲ ಸನ್ನಿಹಿತವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಅಮಿತ್ ಶಾ ನಮಗೆ ನ್ಯಾಯ ಒದಗಿಸಲಿದ್ದಾರೆ ಎಂದರು.
ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿ, ಕೋಲಿ ಸಮಾಜಕ್ಕೆ ಮೀಸಲಾತಿ ನೀಡುವುದಕ್ಕಾಗಿ ಬಿಜೆಪಿ ಸರ್ಕಾರ ಬದ್ಧವಾಗಿದೆ. ಹಿಂದಿನ ಸರ್ಕಾರಗಳು ಕೋಲಿ ಸಮಾಜವನ್ನು ಕಡೆಗಾಣಿಸಿದ್ದವು ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಸುಭಾಸ ರಾಠೊಡ, ಕೋಲಿ ಸಮಾಜದ ಮುಖಂಡರಾದ ಲಕ್ಷ್ಮಣ ಆವಂಟಿ, ರವಿರಾಜ ಕೊರವಿ, ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಗಿರಿರಾಜ ನಾಟಿಕಾರ, ವಿಜಯಕುಮಾರ ವೀರಟ್ಟಿ ಮಾತನಾಡಿದರು.
ರಟಕಲ್ ಗೌರಿಗುಡ್ಡದ ಪೂಜ್ಯ ಸಿದ್ಧ ಶಿವಯೋಗಿ ಸಾನ್ನಿಧ್ಯ ವಹಿಸಿದ್ದರು. ಪ್ರದೀಪ ತುಮಕುಂಟಾ ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಪ್ಪ ಮೊಗಡಂಪಳ್ಳಿ, ಶಿವಪ್ಪ, ಭೀಮಶೆಟ್ಟಿ ಮುರುಡಾ, ರಾಜರೆಡ್ಡಿ ಪಾಟೀಲ, ಹಣಮಂತ, ಅಶೋಕ ಭಜಂತ್ರಿ, ಲಕ್ಷಿಕಾಂತ, ಶಿವಪುತ್ರಪ್ಪ ನೆಲ್ಲಿ ಇನ್ನಿತರರು ಭಾಗವಹಿಸಿದ್ದರು. ಬಕ್ಕಪ್ಪ ಬೋನಸಪುರ ಸ್ವಾಗತಿಸಿದರು, ಗೋಪಾಲ ನಿರೂಪಿಸಿದರು, ಶಿವಕುಮಾರ ವಂದಿಸಿದರು.