Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಾತಿಗಣತಿ ವರದಿ ತಯಾರಿಸಲು ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಹಣ ವ್ಯರ್ಥವಾಗಬಾರದು. ಕೂಡಲೇ, ಅದನ್ನು ಸಚಿವ ಸಂಪುಟದ ಮುಂದೆ ತಂದು ಚರ್ಚಿಸಲಿ. ಸಂಪುಟದಲ್ಲಿ ಮುಂದೆ ಮಂಡಿಸುತ್ತೇವೆ ಎಂದು ಹೇಳುತ್ತಲೇ ಇದ್ದು, ಇದೀಗ ಹೊಸ ದಿನಾಂಕವೂ ಪ್ರಕಟಿಸಿದ್ದಾರೆ. ಅದನ್ನೂ ಕಾದು ನೋಡೋಣ ಎಂದರು.ಅಭಿವೃದ್ಧಿ ಕಡೆ ಗಮನ ಕೊಡಿ:
ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಳಿದವರು, ದಲಿತರಿಗೆ ತೊಂದರೆ ಹೆಚ್ಚಾಗಿದೆ. ಎಲ್ಲರ ಅಭಿವೃದ್ಧಿ ಮಾಡುತ್ತೇವೆ ಎಂಬ ಕೊಟ್ಟ ಮಾತು ಮರೆತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಘೋಷಿಸಿದ್ದ ಹಿಂದುಳಿದ ವರ್ಗದ 1,073 ಯೋಜನೆಗಳನ್ನೂ ಈ ಸರ್ಕಾರ ರದ್ದು ಮಾಡಿದೆ. ವಾಲ್ಮೀಕಿ ನಿಗಮದಲ್ಲಿನ ಹಣ ನುಂಗಿ ನೀರು ಕುಡಿದಿದ್ದಾರೆ. ಸರ್ಕಾರದ ಹಲವರು ಕೇಸ್‌ಗಳಲ್ಲಿ ಸಿಲುಕಿಸಿದ್ದಾರೆ ಎಂದು ನೀವೂ ವಿರೋಧಿಗಳ ಸಿಲುಕಿಸುವ ಕೆಲಸ ಮಾಡುತ್ತಿದ್ದೀರಿ. ಆ ಕಡೆ ಕೊಡುವಷ್ಟೇ ಗಮನ ರಾಜ್ಯದ ಅಭಿವೃದ್ಧಿ ಕಡೆಯೂ ಕೊಡಿ. ಮಳೆಯಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಆದರೆ, ಯಾವ ಸಚಿವರು ಹೊಲ, ಗದ್ದೆಗೆ ಹೋಗಿಲ್ಲ. ರೈತರಿಗೆ ತಾತ್ಕಾಲಿಕ ಪರಿಹಾರ ಕೊಡಿ ಮತ್ತು ಚರಂಡಿ, ರಸ್ತೆಗಳ ಸರಿಪಡಿಸುವ ಕೆಲಸವನ್ನಾದರೂ ಮಾಡಿ ಎಂದು ಆಗ್ರಹಿಸಿದರು.
ಯಾವ ವ್ಯಕ್ತಿ ಕುಂಕುಮ, ಕೇಸರಿ ಕಂಡರೆ ಮೈಮೇಲೆ ಭೂತ ಬಂದವರಂತೆ ಆಡುತ್ತಿದ್ದರೋ, ಅದೇ ವ್ಯಕ್ತಿ ತಾನು ಜೈಲಿಗೆ ಹೋಗಬೇಕಾಗುತ್ತದೆ ಎಂಬ ಸಂದರ್ಭ ಬಂದಾಗ ಇದಕ್ಕಿದಂತೆ ಸವದತ್ತಿ ಯಲ್ಲಮ್ಮ, ಮೈಸೂರಿನ ಚಾಮುಂಡೇಶ್ವರಿ ನೆನಪಾಗುತ್ತಾಳೆ. ನೆನಪಾಗಿದ್ದಕ್ಕೆ ನನಗೆ ತುಂಬಾ ಸಂತೋಷ. ನೀವು ಹಿಂದುತ್ವ ಉಳಿಸಿದರೆ, ಆ ಚಾಮುಂಡೇಶ್ವರಿ ನಿಮ್ಮನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. ಇದು ನಾಟಕೀಯವಾಗಿದ್ದರೆ ಯಲ್ಲಮ್ಮ, ಚಾಮುಂಡೇಶ್ವರಿಯೇ ನಿಮ್ಮನ್ನು ತೆಗೆದುಕೊಂಡು ಹೋಗಿ ಜೈಲಿಗೆ ಹಾಕುತ್ತಾಳೆ ಎಂದು ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯ ಉದ್ದೇಶಿಸಿ ಹೇಳಿದರು. ಹಿಂದುತ್ವ ಉಳಿಸುವವರಿಗೂ ತೊಂದರೆ:
ನಾನು ಕೇವಲ ಸಿದ್ದರಾಮಯ್ಯ ಒಬ್ಬರಿಗೆ ಹೇಳುತ್ತಿಲ್ಲ. ಎಲ್ಲರ ಮನಸ್ಸಿನಲ್ಲೂ ಹಿಂದುತ್ವ ಇದೆ. ರಾಜಕಾರಣಕ್ಕೋಸ್ಕರ ಮುಸ್ಲಿಮರ ತೃಪ್ತಿ ಪಡಿಸುವುದು ಆಗುತ್ತಿದೆ. ಮೊನ್ನೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಲ್ಲಿ ಅರ್ಚನೆ ಮಾಡಿಸಿ ಕುಂಕುಮ ಇಟ್ಟುಕೊಂಡು ಬರುತ್ತಾರೆ. ಎಲ್ಲ ರಾಜಕಾರಣಿಗಳಿಗೂ ಭಕ್ತಿ ಬರಬೇಕು. ಆದರೆ, ಸಂಕಟ ಬಂದಾಗ ವೆಂಕಟರಮಣ ಅನ್ನೋದು ಸರಿಯಲ್ಲ. ಆ ಹಿಂದುತ್ವದ ಮುಖಾಂತರವೇ ನೀವು ಅಧಿಕಾರಕ್ಕೆ ಬಂದವರು. ಆದರೆ, ಹಿಂದುಳಿದವರು, ದಲಿತರ, ಹಿಂದುತ್ವಕ್ಕೂ ಮೋಸ ಮಾಡುತ್ತೀರಿ. ಹಿಂದುತ್ವವನ್ನು ಯಾರು ಉಳಿಸುತ್ತೇನೆ ಎಂದು ಹೊರಟಿದ್ದರೋ, ಅವರಿಗೂ ತೊಂದರೆ ಕೊಡುತ್ತಿದ್ದೀರಿ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.