ಹೊಸದಿಲ್ಲಿ/ಬ್ಯೋಹರಿ: ಉದ್ದೇಶಿತ ಜಾತಿ ಗಣತಿಯಿಂದ ಒಬಿಸಿ, ದಲಿತರು ಮತ್ತು ಬುಡಕಟ್ಟು ಸಮುದಾಯದವರು ಯಾವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂಬ ಬಗ್ಗೆ ಬೆಳಕು ಚೆಲ್ಲಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿಯೇ ದೇಶಾದ್ಯಂತ ಅದನ್ನು ನಡೆಸಬೇಕು ಎಂದು ಪ್ರತಿಪಾದಿಸುತ್ತಿರುವುದಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಧ್ಯಪ್ರದೇಶದ ಬ್ಯೋಹರಿ ಎಂಬಲ್ಲಿ ಚುನಾವಣ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಪಕ್ಷ ದೇಶಾದ್ಯಂತ ಜಾತಿ ಗಣತಿ ನಡೆಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಿದೆ. ರಾಜಸ್ಥಾನ, ಛತ್ತೀಸ್‌ಗಢದಲ್ಲಿರುವ ನಮ್ಮ ಪಕ್ಷದ ಸರಕಾರಗಳು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿವೆ ಎಂದರು.
ಯುಪಿಎ ನೇತೃತ್ವದ ಸರಕಾರ ನಡೆಸಿದ್ದ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುವಂತೆ ಮೋದಿ ನೇತೃತ್ವದ ಸರಕಾರಕ್ಕೆ ಸವಾಲು ಹಾಕುವುದಾಗಿ ರಾಹುಲ್ ಹೇಳಿದ್ದಾರೆ. ಪ್ರಧಾನಿ ಯವರು ಇದುವರೆಗೆ ಜಾತಿ ಗಣತಿಯ ಬಗ್ಗೆ ಮೌನ ತಳೆದಿರುವುದೇ ಪ್ರಶ್ನಾರ್ಹ ಎಂದೂ ಟೀಕಿಸಿದರು.
ಸಂವಾದದಲ್ಲೂ ಹೇಳಿಕೆ: ರಾಹುಲ್ ಗಾಂಧಿಯವರು ಸೆ. 23ರಂದು ಜೈಪುರದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಕೂಡ “ದೇಶದಲ್ಲಿ ಜಾತಿ ಗಣತಿ ನಡೆಯಬೇಕು ಎಂಬುದರ ಬಗ್ಗೆ ಶೇ. 100 ಬೆಂಬಲ ನೀಡುತ್ತೇನೆ. ಅದರಿಂದಾಗಿ ದೇಶದಲ್ಲಿ ದಲಿತರು, ಒಬಿಸಿ, ಬುಡಕಟ್ಟು ಸಮುದಾಯದವರು ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿದೆ’ ಎಂದು ಹೇಳಿದ್ದರು. ಆ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.