ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟಕ್ಕೊಳಗಾದ ಶ್ರಮಿಕ ವರ್ಗಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್ ನೆರವು ಪಡೆಯಲು ಷರತ್ತುಗಳು ಅನ್ವಯ. ಮಡಿವಾಳ, ಕ್ಷೌರಿಕ, ನೇಕಾರ, ಚಮ್ಮಾರ ವರ್ಗದವರು ಸರ್ಕಾರ ಘೋಷಿರುವ ನೆರವು ಪಡೆಯಲು ಕೆಲವು ಷರತ್ತು ವಿಧಿಸಲಾಗಿದೆ. ಆ ಪೈಕಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ. ಆದರೆ ಬಹುತೇಕ ಮಂದಿ ಬಳಿ ಎರಡೂ ಪ್ರಮಾಣ ಪತ್ರ ಇಲ್ಲ.
ಇದೀಗ ಜಾತಿ ಆದಾಯ ಪ್ರಮಾಣ ಪತ್ರ ಮಾಡಿಸಬೇಕಾದರೆ ಸಕಾಲದಡಿ ಅರ್ಜಿ ಸಲ್ಲಿಸಿದರೂ ಕನಿಷ್ಠ 21 ದಿನ ಬೇಕು, ಅದು 28 ದಿನಕ್ಕೂ ಹೋಗಬಹುದು. ಹೀಗಾಗಿ, ಪ್ಯಾಕೇಜ್ ನೆರವು ಪಡೆಯಲು ಶ್ರಮಿಕ ವರ್ಗದ ವರಿಗೆ ಜಾತಿ ಆದಾಯ ಪ್ರಮಾಣಪತ್ರದ ಅಡ್ಡಿ ಎದುರಾಗಿದೆ. ಜತೆಗೆ, ಅಂಗಡಿ, ಮಳಿಗೆ , ಲಾಂಡ್ರಿ ನಡೆಸಲು ನಗರ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದಿರುವ ಪರವಾನಗಿ ಕೇಳಲಾಗಿದೆ.
ಪೆಟ್ಟಿಗೆ ಅಂಗಡಿ, ಬೀದಿ ಬದಿ ಚಮ್ಮಾರಿಕೆ ನಡೆಸುವವರು, ಅಪಾರ್ಟ್‌ಮೆಂಟ್, ರಸ್ತೆ ಬದಿ ತಳ್ಳು ಗಾಡಿಯಲ್ಲಿ ಐರನ್ ಬಾಕ್ಸ್ ಇಟ್ಟುಕೊಂಡು ಜೀವನ ಮಾಡುತ್ತಿರುವವರ ಬಳಿ ಲೈಸೆನ್ಸ್ ಇಲ್ಲ. ಹೀಗಾಗಿ ಅವರಿಗೆ ಪ್ಯಾಕೇಜ್ ಸಿಗುವುದು ಅನುಮಾನ ವಾಗಿದೆ. ಪ್ಯಾಕೇಜ್ ನೆರವಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಗುರುತಿನ ಚೀಟಿ, ಬಿಪಿಎಲ್ ಕಾರ್ಡ್, ಅಂಗಡಿ , ಪೆಟ್ಟಿಗೆ ಅಂಗಡಿ, ಅಥವಾ ಮಳಿಗೆ, ವಿದ್ಯುತ್ ಕೈಮಗ್ಗ ಮುಂದೆ ನಿಂತು ಭಾವಚಿತ್ರ ತೆಗೆಯಬೇಕು, ಮಳಿಗೆ ನಡೆಸಲು ಲೈಸೆನ್ಸ್ ಪಡೆದಿರುವ ದಾಖಲೆ, ಬ್ಯಾಂಕ್ ಪಾಸ್ ಬುಕ್ ದಾಖಲೆ ಸಲ್ಲಿಸಲು ಹೇಳಲಾಗಿದೆ.
ಹೀಗಾಗಿ ಶ್ರಮಿಕ ವರ್ಗದವರು ಪ್ಯಾಕೇಜ್ ನರೆವಿಗಾಗಿ ಅರ್ಜಿ ಸಲ್ಲಿಸಲು ದಾಖಲೆ ಹೊಂದಿಸಲು ಪರದಾಡುವಂತಾಗಿದೆ. ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಸೇವಾ ಸಿಂಧು ಪೋರ್ಟಲ್ ನಡಿ ಅರ್ಜಿ ಸಲ್ಲಿಸಿ ದಾಖಲಾತಿ ಅಪ್ ಲೋಡ್ ಮಾಡಲು ಹೇಳಿರುವುದು ಕೆಲವರಿಗೆ ಸಮಸ್ಯೆ ಉಂಟಾಗಿದೆ. ಕ್ಷೌರಿಕರು, ಮಡಿವಾಳರು, ಆಟೋ ಮತ್ತು ಟ್ಯಾಕ್ಸಿ ಚಾಲಕರ ವಿಚಾರದಲ್ಲಿ ಅಂಗಡಿ ವಾಹನ ಮಾಲೀಕರ ಹೆಸರಿನಲ್ಲಿ ನೋಂದಣಿ ಯಾಗಿದ್ದು ನಿಜವಾಗಿ ಕೆಲಸ ಮಾಡುವವರಿಗೆ ದಾಖಲೆ ಇಲ್ಲದಂತಾಗಿದೆ.
ರಾಜಕೀಯ ಒತ್ತಡ: ಈ ಮಧ್ಯೆ, ಪ್ಯಾಕೇಜ್ ಫಲಾನುಭವಿಗಳ ಆಯ್ಕೆಯಲ್ಲಿ ರಾಜಕೀಯ ಸೋಂಕು ನುಸುಳುವ ಲಕ್ಷಣಗಳು ಕಂಡುಬರುತ್ತಿವೆ. ಶಾಸಕರು , ಪಾಲಿಕೆ ಸದಸ್ಯರು ಸೇರಿ ನಗರ ಸ್ಥಳೀಯ ಸಂಸ್ಥೆ ಸದಸ್ಯರು ತಾವು ಹೇಳಿದವರು ಹಾಗೂ ತಮ್ಮ ಪಟ್ಟಿ ಪರಿಗಣಿಸಿ ಎಂಬ ಒತ್ತಡ ಹಾಕುತ್ತಿದ್ದಾರೆ. ಕೆಲವೆಡೆ ತಮ್ಮ ನಿವಾಸದ ಬಳಿ ಕರೆಸಿಕೊಂಡು ಪಟ್ಟಿ ಸಿದ್ಧಪಡಿಸುವಂತೆ ಒತ್ತಡ ಹೇರುತ್ತಿದ್ದಾರೆ. ಆಡಳಿತಾರೂಢ ಶಾಸಕರು, ಜನಪ್ರತಿನಿಧಿಗಳು ಒಂದೆಡೆ, ಪ್ರತಿಪಕ್ಷ ಶಾಸಕರು ಜನಪ್ರತಿನಿಧಿಗಳು ಮತ್ತೂಂದೆಡೆ, ಇದರ ನಡುವೆ ಮಾಜಿ ಶಾಸಕರು ಸಹ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸಂಕಷ್ಟ ಸಂದರ್ಭದಲ್ಲೂ ‘ಓಟ್ ಬ್ಯಾಂಕ್’ ಭದ್ರಪಡಿಸಿಕೊಳ್ಳುವ ರಾಜಕಾರಣಕ್ಕೆ ಇಳಿದಿರುವುದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಮುಖ್ಯಮಂತ್ರಿಯವರು ಘೋಷಿಸಿರುವ ಪ್ಯಾಕೇಜ್ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಾಖಲಾತಿ ಗೊಂದಲ ಬಗ್ಗೆ ಸಂಬಂಧ ಪಟ್ಟ ಇಲಾಖೆ ಮುಖ್ಯಸ್ಥರ ಜತೆ ಚರ್ಚಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು.
-ಗೋವಿಂದ ಕಾರಜೋಳ, ಡಿಸಿಎಂ
* ಎಸ್. ಲಕ್ಷ್ಮಿನಾರಾಯಣ