Advertisement

Cast Census: ಜಾತಿಗಣತಿ ವರದಿ ಕುರಿತು ಅ.18ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವೆವು: ಸಿಎಂ

10:07 PM Oct 07, 2024 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಡಾ ಪ್ರಕರಣ ಚರ್ಚೆಯ ಬಳಿಕ ಜಾತಿಗಣತಿ ವರದಿ ಜಾರಿಗೆ ಆಡಳಿತ ಪಕ್ಷ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳ ಹಿಂದುಳಿದ ವರ್ಗದ ನಾಯಕರಿಂದ ಆಗ್ರಹ ಕೇಳಿಬರುತ್ತಿದೆ. ಸೋಮವಾರ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅಂಗೀಕಾರ ಮಾಡಿ, ಜಾರಿಗೆ ತರಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಈ ಬಗ್ಗೆ ವಿಧಾನಸೌಧದಲ್ಲಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಗುರುವಾರ (ಅ.10) ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಸಂಪುಟ ಸಭೆ ರದ್ದಾಗಿದ್ದು, ಅ.18ರಂದು ಸಚಿವ ಸಂಪುಟ ಸಭೆ ನಡೆಸಿ ಅಂದಿನ ಸಭೆಯಲ್ಲಿ ಜಾತಿಗಣತಿ ವರದಿ ಕುರಿತು ಚರ್ಚಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ  ಹೇಳಿದ್ದಾರೆ. ಈ ಸಮೀಕ್ಷೆ ಕೇವಲ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರ ಸಮೀಕ್ಷೆ. ಸಂಸದರು, ಶಾಸಕರ ಜೊತೆ ಸಭೆ ನಡೆಸಿದ್ದೇನೆ. ಜಾತಿ ಜನಗಣತಿ ವರದಿ ಜಾರಿ ಮಾಡುವಂತೆ ಮನವಿ ಪತ್ರ ನೀಡಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಜಾತಿ ಜನಗಣತಿ ನಡೆಸಲಾಗಿದೆ ಎಂದು ಹೇಳಿದರು.

ದೇಶದಲ್ಲೇ ಸಮೀಕ್ಷೆ ನಡೆಸಿದ ಪ್ರಥಮ ರಾಜ್ಯ ಕರ್ನಾಟಕ
ವಿಪಕ್ಷಗಳ ನಾಯಕರೂ ಸೇರಿದಂತೆ ಸುಮಾರು ಹಿಂದುಳಿದ ವರ್ಗಗಳ 30 ಮಂದಿ ಶಾಸಕರು ಭೇಟಿ ಮಾಡಿ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅಂಗೀಕಾರ ಮಾಡಿ, ಜಾರಿಗೆ ತರಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಇಡೀ ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದ ಪ್ರಥಮ ರಾಜ್ಯ ಕರ್ನಾಟಕ. ಅ. 18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಜಾತಿಗಣತಿ ವರದಿ ನಾನು ನೋಡಿಲ್ಲ 
2013 -18ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್.ಕಾಂತರಾಜು ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯೋಗದವರು ಸಾಕಷ್ಟು ಸಮಯ ತೆಗೆದುಕೊಂಡು ಸಮೀಕ್ಷೆ ನಡೆಸಿದ್ದಾರೆ. ರಾಜ್ಯದ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿರುವುದಾಗಿ ಕಾಂತರಾಜು ತಿಳಿಸಿದ್ದಾರೆ. ನಾನು ಇಲ್ಲಿಯವರೆಗೂ ಜಾತಿ ಗಣತಿ ವರದಿಯನ್ನು ಪರಿಶೀಲಿಸಿಲ್ಲ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂತರಾಜು ವರದಿ ಪೂರ್ಣಗೊಂಡಿರಲಿಲ್ಲ. ಆದ್ದರಿಂದ ನನ್ನ ಅವಧಿಯಲ್ಲಿ ಜಾತಿ ಗಣತಿ ವರದಿ ಸ್ವೀಕರಿಸಲು ಮತ್ತು ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. ನಂತರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂತರಾಜು ವರದಿ ಸಲ್ಲಿಸಲು ಸಿದ್ಧತೆ ನಡೆಸಿದ್ದರು. ಆದರೆ ಕುಮಾರಸ್ವಾಮಿಯವರು ವರದಿ ಸ್ವೀಕರಿಸಲು ಒಪ್ಪಿರಲಿಲ್ಲ. ನಂತರ ಬಿಜೆಪಿ ಸರ್ಕಾರ ಬಂದರೂ, ವರದಿಯನ್ನು ಸ್ವೀಕರಿಸಲಿಲ್ಲ.

Advertisement

ಕಾಂತರಾಜು ಅಧ್ಯಕ್ಷಾವಧಿ ಪೂರ್ಣಗೊಂಡ ನಂತರ ಜಯಪ್ರಕಾಶ್ ಹೆಗ್ಡೆ ಆಯೋಗದ ಅಧ್ಯಕ್ಷರಾದರು. ಅವರು ಕೋರಿದಂತೆ ವರದಿ ಸಲ್ಲಿಕೆಗೆ ಮೂರು ತಿಂಗಳ ಅವಕಾಶ ಕೊಡಲಾಗಿತ್ತು. ನಂತರ ಆ ವರದಿ ಸ್ವೀಕರಿಸಲಾಗಿದೆ. ಸ್ವೀಕರಿಸಿದ ವರದಿ ಜಾರಿಗೊಳಿಸಲು ಎಲ್ಲರಿಂದಲೂ ಒತ್ತಾಯ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಹಿಂದುಳಿದ ವರ್ಗಗಳ ಶಾಸಕರು ಸಭೆ ನಡೆಸಿ ವರದಿ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.

ಇತ್ತೀಚೆಗಷ್ಟೇ ಮೈಸೂರಿನ ಒಂದು ಕಾರ್ಯಕ್ರಮದಲ್ಲಿ ನಾನು ತಿಳಿಸಿದಂತೆ, ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಸ್ವೀಕರಿಸಲಾಗಿದ್ದು, ಈ ವರದಿಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next