Advertisement

Cast Census Report: ಹಲವು ವಿರೋಧಗಳ ನಡುವೆಯೂ ಜಾತಿ ಗಣತಿ ರಹಸ್ಯ ನಾಳೆ ಬಯಲು?

02:45 AM Jan 15, 2025 | Team Udayavani |

ಬೆಂಗಳೂರು: ಹಲವು ವಿರೋಧಗಳ ನಡುವೆಯೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿಯನ್ನು ಸ್ವೀಕರಿಸಿದ್ದ ರಾಜ್ಯ ಸರಕಾರವು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮುಚ್ಚಿದ ಲಕೋಟೆ ತೆರೆಯಲು ನಿರ್ಧರಿಸಿದೆ.

Advertisement

ಸಿದ್ದರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್‌ ಸರಕಾರ ಕಾಂತರಾಜು ಅಧ್ಯಕ್ಷತೆಯಲ್ಲಿ 2015ರಲ್ಲಿ ಆಯೋಗ ರಚಿಸಿತ್ತು. ಸುಮಾರು 169 ಕೋಟಿ ರೂ. ವ್ಯಯಿಸಿ 1,351 ಜಾತಿ, ಉಪಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಬಗ್ಗೆ ಅಧ್ಯಯನ ನಡೆಸಿತ್ತು. ಆದರೆ ವರದಿ ಸಿದ್ಧಗೊಳ್ಳುವುದ ರೊಳಗಾಗಿಯೇ ಸಿದ್ದರಾಮಯ್ಯ ಸರಕಾರದ ಅವಧಿ ಪೂರ್ಣಗೊಂಡು ಬೇರೆ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. 2020ರಲ್ಲಿ ಕೆ. ಜಯಪ್ರಕಾಶ್‌ ಹೆಗ್ಡೆ ನೇತೃತ್ವದಲ್ಲಿ ಆಯೋಗ ರಚಿಸಿ, ಆಯೋಗದ ಅವಧಿ ವಿಸ್ತರಣೆ ಮಾಡಿ ಕೊನೆಗೂ 2024ರಲ್ಲಿ ವರದಿಯನ್ನು ಸರಕಾರ ಪಡೆದುಕೊಂಡಿತ್ತು.

ಆದರೆ ಈ ಸಮೀಕ್ಷೆಯೇ ವೈಜ್ಞಾನಿಕವಾಗಿ ನಡೆ ದಿಲ್ಲ ಎಂದು ಆರೋಪಿಸಿದ್ದ ಒಕ್ಕಲಿಗ, ಲಿಂಗಾಯತ ಸಮುದಾಯದ ಮುಖಂಡರು, ಮಠಾಧೀಶರು ಯಾವುದೇ ಕಾರಣಕ್ಕೂ ಇದನ್ನು ಸರಕಾರ ಒಪ್ಪ ಬಾರದು ಎಂದು ಆಗ್ರಹಿಸಿದ್ದರು. ಈ ಮಧ್ಯೆ ಅಲ್ಪ ಸಂಖ್ಯಾಕರು, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಇದನ್ನು ಜಾರಿಗೆ ತರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣ ವಾಗಿದ್ದು, ಇದರ ಪರ ನಿಂತರೂ ಕಷ್ಟ, ವಿರುದ್ಧ ಮಾತ ನಾಡಿದರೂ ಕಷ್ಟ ಎನ್ನುವ ಪರಿಸ್ಥಿತಿ ಇದೆ. ವರದಿ ಯಲ್ಲಿ ಏನಿದೆ ಎಂಬುದು ಗೊತ್ತಿಲ್ಲದೆ ಅದನ್ನು ಅವೈಜ್ಞಾನಿಕ ಎಂದು ಜರೆಯುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಆದರೆ ಕಾಂಗ್ರೆಸ್‌ ಹಿರಿಯ ಮುಖಂಡರೂ ಆಗಿರುವ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಹಿತ ಹಲವರು ಇದಕ್ಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಒಕ್ಕಲಿಗರ ಸಂಘ, ಆದಿಚುಂಚನಗಿರಿ ಮಠದ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಸಹಿತ ಹಲವರು ಧ್ವನಿಗೂಡಿಸಿದ್ದಾರೆ.

Advertisement

ಇನ್ನು ಆರಂಭದಲ್ಲಿ ವಿರೋಧ ಒಡ್ಡಿದ್ದ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಈಗ ವರದಿ ಮಂಡನೆಯಾಗಲಿ ನೋಡೋಣ ಎನ್ನುತ್ತಿವೆ. 11 ವರ್ಷಗಳ ಅನಂತರ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿಗೆ ಈಗಲಾದರೂ ಮೋಕ್ಷ ಸಿಗಲಿದೆಯೇ ಎಂಬ ಕುತೂಹಲ ಇದೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಂಪುಟ ಉಪಸಮಿತಿ ರಚಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ವರದಿ ಸೋರಿಕೆಯ ದೂರು?
2 ವರ್ಷದ ಹಿಂದೆ ಸಮೀಕ್ಷಾ ವರದಿ ಸೋರಿಕೆಯಾಗಿದ್ದು, ಅದರಲ್ಲಿನ ಅಂಕಿ-ಅಂಶಗಳು ಬಹಿರಂಗವಾಗಿವೆ ಎಂಬ ಆರೋಪಗಳೂ ಇದ್ದವು.

ಒಳಮೀಸಲಿಗೆ ಪೆಟ್ಟು?
ಪರಿಶಿಷ್ಟ ಜಾತಿಗೆ ಸೇರಿದವರೇ ಮೊದಲ ಸ್ಥಾನದಲ್ಲಿದ್ದು, ಒಟ್ಟಾರೆ ಜನಸಂಖ್ಯೆಯ ಶೇ. 60ರಷ್ಟು ಇರುವುದರಿಂದ ಅವರಿಗೆ ಕೊಡುತ್ತಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎನ್ನುವ ಪ್ರಸ್ತಾವವೂ ವರದಿಯಲ್ಲಿದೆ ಎನ್ನಲಾಗಿದೆ. ಒಂದೆಡೆ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡುವ ಅಧಿಕಾರವನ್ನೂ ನ್ಯಾಯಾಲಯವು ಆಯಾ ಸರಕಾರಗಳಿಗೆ ನೀಡಿದ್ದು, ಅದಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಸಮಿತಿಯ ಅಧ್ಯಯನ ನಡೆಯುತ್ತಿದೆ. ಇದರ ನಡುವೆ ಮೀಸಲಾತಿ ಹೆಚ್ಚಳದ ಪ್ರಸ್ತಾವನೆ ಏನಾದರೂ ಈ ವರದಿಯಲ್ಲಿ ಇದ್ದದ್ದೇ ಆದರೆ ಒಳಮೀಸಲಿಗೂ ಪೆಟ್ಟು ಬೀಳುವ ಸಂಭವವಿದೆ.

ವರದಿಯಲ್ಲಿ ಏನಿರಬಹುದು?
1,351 ಜಾತಿಗಳಲ್ಲಿ 816 ಇತರ ಹಿಂದುಳಿದ ವರ್ಗಗಳ ಗುರುತು

ಇದರಲ್ಲಿ 30 ಜಾತಿಗಳನ್ನು ಅತ್ಯಂತ ಹಿಂದುಳಿದ ವರ್ಗಗಳಡಿ ಪರಿಗಣನೆ, 192 ಜಾತಿಗಳ ಹೊಸ ಉಲ್ಲೇಖ

ಅಂದಾಜು 6 ಕೋಟಿ ಜನರ ಪೈಕಿ 5.98 ಕೋಟಿ ಜನರ ಸಮೀಕ್ಷೆ

ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 60ರಷ್ಟು ದಲಿತರು, ಹಿಂದುಳಿದ ವರ್ಗದವರ ಗುರುತು

ಅನಂತರದ ಸ್ಥಾನದಲ್ಲಿ ಮುಸಲ್ಮಾನರು, ಬಳಿಕ ಲಿಂಗಾಯತರು, ಒಕ್ಕಲಿಗರ ಜನಸಂಖ್ಯೆ

ವರದಿ ಕುರಿತ ಅಪಸ್ವರಗಳು ಏನೇನು?
2015ರಲ್ಲಿ ವೈಜ್ಞಾನಿಕವಾಗಿ ನಡೆಯದ ಸಮೀಕ್ಷೆ

ಪ್ರತೀ ಮನೆಗೂ ಭೇಟಿ ಕೊಟ್ಟು ಸಮೀಕ್ಷೆ ನಡೆಸದ ಆಯೋಗದ ಸಿಬಂದಿ

ಕೇಂದ್ರ ಸರಕಾರ ಜಾತಿ ಗಣತಿ ನಡೆಸುವುದಾಗಿ ಹೇಳಿದ ಮೇಲೂ ಈ ವರದಿ ಸ್ವೀಕಾರ ಸರಿಯಲ್ಲ

11 ವರ್ಷಗಳ ಹಿಂದಿನ ಸಮೀಕ್ಷೆಗೂ ಈಗಿನ ವಾಸ್ತವಿಕ ಅಂಕಿ-ಅಂಶಗಳಿಗೂ ಅಜಗಜಾಂತರ

ಅಹಿಂದ ವರ್ಗವನ್ನಷ್ಟೇ ಗಮನದಲ್ಲಿ ಇಟ್ಟುಕೊಂಡು ನಡೆಸಿರುವ ಸಮೀಕ್ಷೆಯಿಂದ ಉಳಿದ ವರ್ಗಗಳಿಗೆ ಅನ್ಯಾಯ

ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಜಾತಿಯ ಆಧಾರದ ಮೇಲೆ ಸಮೀಕ್ಷೆ ಮಾಡಿದ್ದೇ ತಪ್ಪು

Advertisement

Udayavani is now on Telegram. Click here to join our channel and stay updated with the latest news.