ನವದೆಹಲಿ: ಪ್ರಸ್ತಕ ವರ್ಷದ ಹಜ್ ಯಾತ್ರೆ ಸಂಪೂರ್ಣವಾಗಿ ನಗದು ರಹಿತವಾಗಿ ಇರಲಿದೆ. ದೇಶದಿಂದ ಒಟ್ಟು ಯಾತ್ರೆಗೆ 1.4 ಲಕ್ಷ ಮಂದಿ ತೆರಳಲಿದ್ದಾರೆ. ಅವರೆಲ್ಲರಿಗೂ ಕೇಂದ್ರ ಸರ್ಕಾರ ಎಸ್‌ಬಿಐ ಫಾರ್‌ಎಕ್ಸ್ ಕಾರ್ಡ್ ಅನ್ನು ನೀಡಲಿದೆ.
ಇದರಿಂದಾಗಿ ಮೆಕ್ಕಾದಲ್ಲಿ ಅಗತ್ಯ ವೆಚ್ಚಕ್ಕಾಗಿ ಪದೇ ಪದೆ ವಿದೇಶಿ ವಿನಿಮಯ ಕೇಂದ್ರಗಳಿಗೆ ತೆರಳುವುದನ್ನು ತಪ್ಪಿಸಿ ಸಮಯ ಉಳಿತಾಯ ಮಾಡಿಕೊಡಲಿದೆ. ಈ ಉದ್ದೇಶಕ್ಕಾಗಿ ಎಸ್‌ಬಿಐ ಜತೆಗೆ ಕೇಂದ್ರ ಸರ್ಕಾರ ಸಹಭಾಗಿತ್ವವನ್ನು ಹೊಂದಿದೆ.
ಬ್ಯಾಂಕ್ ವತಿಯಿಂದ 25 ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಅದರ ಮೂಲಕ ಫಾರೆಕ್ಸ್ ಕಾರ್ಡ್ ಅಥವಾ ನಗದನ್ನು ಪಡೆದುಕೊಳ್ಳಲು ನೆರವು ನೀಡಲಿದೆ.
ಒಟ್ಟು 1.4 ಲಕ್ಷ ಮಂದಿಯ ಪೈಕಿ 10, 671 ಮಂದಿ 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು, 4, 314 ಮಂದಿ ಮಹಿಳೆಯರು 45 ವರ್ಷ ಮೇಲ್ಪಟ್ಟವರಾಗಿದ್ದು ಪುರುಷ ಸಂಗಾತಿ (ಮೆಹ್ರಮ್) ಇಲ್ಲದೆ ಪ್ರಯಾಣಿಸುವವರು ಇದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಜತೆಗೆ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಪವಿತ್ರ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಮೇ 21ರಂದು ಹಜ್ ಯಾತ್ರಿಕರನ್ನು ಹೊತ್ತ ಮೊದಲ ವಿಮಾನ ದೇಶದಿಂದ ಹೊರಡಲಿದೆ.