ಪುತ್ತೂರು: ಕರಾವಳಿಯ ಗೇರು ಕೃಷಿಗೆ ಈ ಬಾರಿ ಹವಾಮಾನ ವೈಪರೀತ್ಯದ ಹೊಡೆತ ತಟ್ಟಿದೆ. ಮೊದಲ ಹಂತ ಗೇರು ಫಸಲು ಕರಟಿದ ಪರಿ ಣಾಮ ಹಾಲಿ ಹಂಗಾಮಿನಲ್ಲಿ ಫಸಲು ಕುಂಠಿತಗೊಂಡಿದ್ದು ಬೇಡಿಕೆ ಇದ್ದರೂ ಮಾರುಕಟ್ಟೆಗೆ ಗೇರುಬೀಜ ಪೂರೈಕೆ ಆಗುತ್ತಿಲ್ಲ.
ಉತ್ತರ ಕರ್ನಾಟಕ, ಮಲೆನಾಡು ಮತ್ತು ಮಧ್ಯ ಕರ್ನಾಟಕಗಳಲ್ಲಿ ಉತ್ತಮ ಗೇರು ಫಸಲಿನ ನಿರೀಕ್ಷೆ ಮೂಡಿದ್ದರೂ, ಹವಾಮಾನದ ಹೊಡೆತ ಬಿದ್ದಿದೆ. ಜನವರಿ ತಿಂಗಳಾರಂಭದಲ್ಲೇ ಚಳಿ ಸಹಿತ ಮುಂಜಾನೆಯ ಇಬ್ಬನಿ ಹಾಗೂ ಹಗಲು ಹೊತ್ತಿನ ಮೋಡದ ವಾತಾವರಣ ವ್ಯಾಪಕ ವಾಗಿದ್ದ ಕಾರಣ ಗೇರು ಕೃಷಿಗೆ ಮಾರಕ ವಾಗಿ ಪರಿಣಮಿಸಿತ್ತು. ಈ ಹೊತ್ತಿಗೆ ಹೂ ಬಿಟ್ಟು ಕಾಯಿ ಮೂಡಲು ಸಿದ್ಧಗೊಂಡಿದ್ದ ಲಕ್ಷಾಂತರ ಗಿಡಗಳಲ್ಲಿ ಹೂಗಳೇ ಕರಟಿದ್ದು, ಫಸಲು ನಷ್ಟಗೊಂಡಿರುವುದೇ ಉತ್ಪಾದನೆ ಇಳಿ ಮುಖಕ್ಕೆ ಕಾರಣ.
ಉತ್ಪಾದನೆ ಕುಸಿತ:
ಗೇರು ಕೃಷಿಗೆ ಪ್ರಖರ ಬಿಸಿಲು ಆಪ್ಯಾಯಮಾನವಾಗಿದ್ದು, ಇದೇ ಕಾರಣದಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಗಡಿನಾಡಿನ ಕಾಸರಗೋಡು ಜಿಲ್ಲೆಗಳಲ್ಲಿ ಹಿಂದಿನಿಂದಲೂ ವ್ಯಾಪಕವಾಗಿ ಗೇರು ಕೃಷಿ ಮಾಡಲಾಗುತ್ತಿದೆ. ಗಿಡಗಳು ಹೂ ಬಿಟ್ಟು ಕಾಯಿ ಮೂಡುವ ಹಂತದಲ್ಲಿ ಇಬ್ಬನಿ ಮತ್ತು ಮೋಡ ಕವಿದ ವಾತಾವರಣವಿದ್ದರೆ ಹೂಗಳು ಕರಟಿ ಹೋಗುವ ಸಾಧ್ಯತೆಯೇ ಹೆಚ್ಚು. ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಪ್ರದೇಶ, ಗದಗ, ಹಾವೇರಿ, ಚಿತ್ರದುರ್ಗ, ಧಾರವಾಡ ಮತ್ತು ಬೆಳಗಾವಿ ಪ್ರದೇಶ, ತುಮಕೂರು, ಶಿರಾ, ಮಧುಗಿರಿ ಪ್ರದೇಶ ಹಾಗೂ ಕೋಲಾರ ಜಿಲ್ಲೆಯ ಚಿಂತಾಮಣಿ ಮುಂತಾದ ಕಡೆ ಗೇರು ಕೃಷಿ ಚೆನ್ನಾಗಿ ಬೆಳೆಯಲಾಗುತ್ತಿದ್ದು, ಈ ಬಾರಿ ಅಲ್ಲಿ ಹವಾಮಾನದ ವೈಪರಿತ್ಯ ತಟ್ಟಿಲ್ಲ. ಕರಾವಳಿಯಲ್ಲಿ ಮಾತ್ರ ಈ ಬಾರಿ ಸಮ್ಮಿಶ್ರ ಹವಾಮಾನ ಏಕಕಾಲದಲ್ಲಿ ಮೂಡಿದ ಕಾರಣ ಸಮಸ್ಯೆ ಉಂಟಾಗಿದೆ. ಇದರಿಂದ ಇಡೀ ರಾಜ್ಯದ ಒಟ್ಟಾರೆ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂಬುದು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿಗಳ ಅಭಿಪ್ರಾಯ.
ಡಿಸೆಂಬರ್ ಹೊತ್ತಿಗೆ ಹೂ ಬಿಡುವ ವೆಂಗುರ್ಲ-4, ವೆಂಗುರ್ಲ-3, ಉಳ್ಳಾಲ-2, ಉಳ್ಳಾಲ-3, ಸೆಲೆಕ್ಷನ್ – 2 ಮತ್ತು ವಿಆರ್‌ಐ-3 ಮುಂತಾದ ತಳಿಗಳು ಕರಾವಳಿಯಲ್ಲಿ ಕಳೆದ ಬಾರಿಯಂತೆ ಈ ಬಾರಿ ತೊಂದರೆಗೆ ಸಿಲುಕಿದೆ. ವೆಂಗುರ್ಲ-3 ಮೂರು ಸಲ ಹೂ ಬಿಡುತ್ತದೆ. ಇದರಲ್ಲಿ ಮೊದಲನೆಯದು ಕರಟಿ ಹೋಗಿದ್ದು, ಈಗ 2ನೇ ಬಾರಿ ಹೂ ಬಿಟ್ಟಿದೆ. ಮಾರ್ಚ್‌ನಲ್ಲಿ 3ನೇ ಬಾರಿ ಹೂ ಬಿಡಲಿದೆ. 2 ಮತ್ತು 3ನೇ ಫಸಲಿನಲ್ಲಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮಡ್ಕತ್ತರ-2, ಉಳ್ಳಾಲ-1 ಎಚ್-130 ತಳಿಗಳಿಗೆ ಸಮಸ್ಯೆ ಆಗಿಲ್ಲ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 1.45 ಲಕ್ಷ ಟನ್ ಹೆಕ್ಟೇರ್ ವಿಸ್ತೀರ್ಣದಲ್ಲಿ ಗೇರು ಬೆಳೆಯಲಾಗುತ್ತಿದ್ದು, ಕಳೆದ ಸಾಲಿನಲ್ಲಿ 91,000 ಟನ್ ಗೇರು ಬೆಳೆಯಲಾಗಿದೆ. ರಾಜ್ಯದಲ್ಲಿ ಹೆಕ್ಟೇರಿಗೆ ಸರಾಸರಿ 682 ಕೆ.ಜಿ. ಗೇರು ಬೆಳೆಯಲಾಗುತ್ತಿದೆ. ಹಿಂದಿನ ವರ್ಷ ಗೇರು ಬೀಜಕ್ಕೆ 80ರಿಂದ 150 ರೂ. ಧಾರಣೆ ಇತ್ತು. ಪ್ರಸ್ತುತ ಕೆ.ಜಿ.ಗೆ 100 ರೂ.ಧಾರಣೆ ಇದೆ.ಆದರೆ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ಹಲವೆಡೆ ಅರ್ಧಕರ್ಧ ನಷ್ಟ ಉಂಟಾಗಿದೆ ಎನ್ನುತ್ತಾರೆ ವ್ಯಾಪಾರಿ ಹಂಝ.
ಈ ಬಾರಿ ಗೇರು ಕೃಷಿಗೆ ಸೊಳ್ಳೆ ಕಾಟ ಕಡಿಮೆ. ಒಂದೆರಡು ದಿನಗಳ ಮೋಡ ಕವಿದ ವಾತಾವರಣದಿಂದ ಗೇರು ಫಸಲಿಗೆ ಹೊಡೆತ ಬೀಳುವುದು ಕಡಿಮೆ. ಈ ಬಾರಿ ಗೇರು ಹೂ ಬಿಡುವ ಸಮಯ ತುಸು ನಿಧಾನವಾಗುವುದರಿಂದ ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ.
–ಡಾ| ದಿನಕರ ಅಡಿಗ, ಪ್ರಧಾನ ವಿಜ್ಞಾನಿ, ಗೇರು ಸಂಶೋಧನ ನಿರ್ದೇಶನಾಲಯ ಪುತ್ತೂರು