Advertisement

ಯಶಸ್ವೀ ಚಾಲಕರಿಗೆ ನಗದು ಪುರಸ್ಕಾರ

11:27 PM Oct 20, 2019 | Team Udayavani |

ಮಂಗಳೂರು: ಕರಾವಳಿಯ ಎರಡು ಜಿಲ್ಲೆಗಳಲ್ಲಿ ಪ್ರಾಮಾಣಿಕತೆ ಮತ್ತು ಅಪಘಾತರಹಿತವಾಗಿ ವಾಹನ ಚಲಾಯಿಸುತ್ತಿರುವ ಅರ್ಹ 20 ವೃತ್ತಿಪರ ಚಾಲಕರಿಗೆ ತಲಾ 25 ಸಾವಿರ ರೂ. ಪುರಸ್ಕಾರ ನೀಡಿ ಪ್ರೋತ್ಸಾಹಿಸಲು ಸಾರಿಗೆ ಇಲಾಖೆಯು ಹೊಸ ಯೋಜನೆ ರೂಪಿಸಿದೆ.

Advertisement

ರಾಜ್ಯದ ವಿವಿಧ ವಲಯಗಳ ಚಾಲಕರ ಉತ್ತಮ ಸೇವೆಯನ್ನು ಗುರುತಿಸುವುದಕ್ಕಾಗಿ ರಾಜ್ಯ ಸರಕಾರವು ನವೆಂಬರ್‌ನಲ್ಲಿ ಚಾಲಕರ ದಿನ ಆಚರಿಸಲು ಸರಕಾರ ನಿರ್ಧರಿಸಿದೆ. ಮ್ಯಾಕ್ಸಿಕ್ಯಾಬ್‌, ಬಸ್‌, ಸರಕು ಸಾಗಣೆ ವಾಹನ, ಟ್ಯಾಕ್ಸಿ ಮತ್ತು ಅಟೋರಿಕ್ಷಾ- ಈ ಐದು ವಿಧದ ವಾಹನಗಳಲ್ಲಿ ವೃತ್ತಿಪರವಾಗಿ ದುಡಿಯುತ್ತಿರುವ ಅರ್ಹ ಚಾಲಕರು ಈ ಪುರಸ್ಕಾರ ಪಡೆಯಲಿದ್ದಾರೆ. ಒಂದು ವಿಧದ ವಾಹನದಲ್ಲಿ ತಲಾ ಇಬ್ಬರಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 20 ಪ್ರಾಮಾಣಿಕ ಮತ್ತು ಅಪಘಾತ ರಹಿತ ಚಾಲಕರನ್ನು ತಲಾ 25 ಸಾವಿರ ರೂ. ನಗದು ಬಹುಮಾನ ದೊಂದಿಗೆ ಗೌರವಿಸಲು ಉದ್ದೇಶಿಸಲಾಗಿದೆ.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯು ಈ ಆಯ್ಕೆ ನಡೆಸಲಿದೆ. ಎರಡು ಜಿಲ್ಲೆಗಳಲ್ಲಿ ಸುಮಾರು 2 ಸಾವಿರ ಮಂದಿ ಬಸ್‌ ಚಾಲಕರು ಸೇರಿದಂತೆ 5 ಸಾವಿರಕ್ಕೂ ಅಧಿಕ ವೃತ್ತಿಪರ ಚಾಲಕರು ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿಗೆ ಮಾನದಂಡಗಳೇನು?
ಚಾಲನಾ ಪರವಾನಿಗೆ ಹೊಂದಿರುವುದು, 45 ವರ್ಷ ವಯಸ್ಸಿನ ಮಿತಿ, ಚಾಲನಾ ಪರವಾನಿಗೆ 20 ವರ್ಷಗಳಿಂದ ಸಿಂಧುವಾಗಿರುವುದು, ಅಮಾನತು ಗೊಂಡಿರದೇ ಇರುವುದು, ರಸ್ತೆ ಅಪಘಾತ ನಡೆಸದೆ ಇರುವುದು ಮತ್ತು ಪೊಲೀಸ್‌ ಪ್ರಕರಣ ದಾಖಲಾಗದೆ ಇರುವುದು ಪ್ರಶಸ್ತಿಗೆ ಅರ್ಹರಾಗಲು ಮಾನದಂಡಗಳು.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯಿಂದ ಆಯ್ಕೆ
ಎರಡೂ ಜಿಲ್ಲೆಗಳ ಮಾನ್ಯತೆ ಹೊಂದಿದ ಮ್ಯಾಕ್ಸಿಕ್ಯಾಬ್‌, ಬಸ್‌, ಸರಕು ಸಾಗಣೆ ವಾಹನ, ಟ್ಯಾಕ್ಸಿ ಮತ್ತು ರಿಕ್ಷಾ ಯೂನಿಯನ್‌ಗಳ ಮೂಲಕ ಸಾರಿಗೆ ಇಲಾಖೆಯು ಆಯ್ಕೆ ನಡೆಸಲಿದೆ. ಇದಕ್ಕಾಗಿ ನಿಗದಿತ ಸಂಘಟನೆಯವರು ಆಯ್ದ ಅಭ್ಯರ್ಥಿಗಳ ವಿವರಗಳನ್ನು ಇಲಾಖೆಗೆ ನೀಡಬೇಕು; ಬಳಿಕ ಅಭ್ಯರ್ಥಿಯ ವಿವರ-ದಾಖಲೆಗಳನ್ನು ಆರ್‌ಟಿಒ ಪರಿಶೀಲಿಸುತ್ತದೆ. ಅನಂತರ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಒಂದು ವಾಹನ ವರ್ಗದಿಂದ ತಲಾ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.

Advertisement

ಸೂಕ್ತ ಮಾಹಿತಿ ಪಡೆದು ಕ್ರಮ
ಪ್ರಾಮಾಣಿಕ ಮತ್ತು ಅಪಘಾತರಹಿತವಾಗಿ ಸೇವೆ ಸಲ್ಲಿಸಿರುವ ವಿವಿಧ ವಲಯಗಳ ಚಾಲಕರನ್ನು ಆಯ್ಕೆ ಮಾಡಿ ನಗದು ಬಹುಮಾನ ಜತೆಗೆ ಮುಂದಿನ ತಿಂಗಳು ಪುರಸ್ಕರಿಸುವ ಸರಕಾರದ ಯೋಜನೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಸಾರಿಗೆ ಇಲಾಖೆಯಿಂದ ಪಡೆಯಲಾಗುವುದು. ಸ್ಥಳೀಯ ವಾಹನಗಳ ಸಂಘಟನೆಗಳಿಂದ ಆಯ್ದ ಅಭ್ಯರ್ಥಿಗಳ ವಿವರ ಪಡೆದು ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಆಯ್ಕೆ ಮಾಡಲಿದೆ.
– ರಾಮಕೃಷ್ಣ ರೈ,ಆರ್‌ಟಿಒ
ಉಡುಪಿ, ಹೆಚ್ಚುವರಿ ಪ್ರಭಾರ ಆರ್‌ಟಿಒ, ಮಂಗಳೂರು.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next