ಹೊಸದಿಲ್ಲಿ: ದೇಶದಲ್ಲಿ ರೈತರ ಸಮಸ್ಯೆಯನ್ನು ನೀಗಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಸಬ್ಸಿಡಿ ನೀಡುವುದರ ಬದಲಿಗೆ ರೈತರಿಗೆ ನೇರವಾಗಿ ನಗದು ನೀಡುವ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಎನ್ನಲಾಗಿದೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಯೋಜನೆ ಮಹತ್ವದ್ದಾಗಿದ್ದು, ಇದಕ್ಕಾಗಿ ಸುಮಾರು 70 ಸಾವಿರ ಕೋಟಿ ರೂ. ಮೀಸಲಿಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ರಸಗೊಬ್ಬರ ಸೇರಿದಂತೆ ಹಲವು ರೀತಿಯ ಸಬ್ಸಿಡಿಗಳನ್ನು ರೈತರಿಗೆ ಸದ್ಯ ನೀಡಲಾಗುತ್ತಿದೆ. ಇದೆಲ್ಲವನ್ನೂ ಸೇರಿಸಿ ರೈತರಿಗೆ ನೇರವಾಗಿ ನಗದು ಪಾವತಿ ಮಾಡಲಾಗುತ್ತದೆ. ಈ ಎಲ್ಲ ಸಬ್ಸಿಡಿಗಳನ್ನು ರದ್ದುಗೊಳಿಸುವುದರಿಂದ ರೈತರು ಇವುಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿ ಮಾಡಬೇಕಿರುತ್ತದೆ. ಸದ್ಯ ಸಬ್ಸಿಡಿಗೂ ಕೂಡ ಸರಕಾರ 70 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ.
ಹೆಕ್ಟೇರ್‌ಗೆ 15 ಸಾವಿರ ರೂ.?: ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಜಾರಿಗೊಳಿಸಿದ ಹೆಕ್ಟೇರ್‌ಗೆ 15 ಸಾವಿರ ರೂ. ನೀಡುವ ಯೋಜನೆಯನ್ನು ಆರಂಭಿಸುವಂತೆ ಸರಕಾರಕ್ಕೆ ನೀತಿ ಆಯೋಗ ಸಲಹೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ವರ್ಷದಲ್ಲಿ ಸಬ್ಸಿಡಿ ಹೊರೆ ಸರಕಾರಕ್ಕೆ ಕಡಿಮೆ ಯಾಗುತ್ತದೆ. ಅಂದರೆ ಸರಕಾರ ಈಗ 2 ಲಕ್ಷ ಕೋಟಿ ರೂ. ವಾರ್ಷಿಕ ಸಬ್ಸಿಡಿಯನ್ನು ನೀಡುತ್ತಿದೆ. ದೇಶದ ಒಟ್ಟು ನಾಟಿ ಪ್ರದೇಶದೊಂದಿಗೆ ಇದನ್ನು ಲೆಕ್ಕ ಮಾಡಿದರೆ ಪ್ರತಿ ಹೆಕ್ಟೇರ್‌ಗೆ ಸರಕಾರ 15 ಸಾವಿರ ರೂ. ವೆಚ್ಚ ಮಾಡುತ್ತಿದೆ.
ಹೆಚ್ಚಲಿದೆ ರೈತರ ಶ್ರಮ: ಬೆಳೆಗೆ ಸಬ್ಸಿಡಿ ನೀಡುವುದರ ಬದಲಿಗೆ ರೈತರಿಗೇ ಸಬ್ಸಿಡಿ ನೀಡುವುದರಿಂದ ಉತ್ತಮ ಬೆಳೆ ಬೆಳೆಯಲು ರೈತರು ಶ್ರಮಿಸಲಿದ್ದಾರೆ. ಸದ್ಯ ಸರಕಾರವು ಬೆಳೆಗೆ ಉತ್ತಮ ಬೆಲೆ ಒದಗಿಸಲಿ ಎಂದು ರೈತರು ನಿರೀಕ್ಷಿಸುತ್ತಾರೆ. ಆದರೆ ರೈತರಿಗೆ ಬೆಳೆ ಬೆಳೆ ಯುವುದಕ್ಕಾಗಿಯೇ ಸಬ್ಸಿಡಿ ನೀಡುವುದರಿಂದ ರೈತರು, ಉತ್ತಮ ಗುಣಮಟ್ಟದ ಬೆಳೆ ತೆಗೆಯಲು ಶ್ರಮಿಸುತ್ತಾರೆ ಎಂದು ಹೇಳಲಾಗಿದೆ. 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದು, ಇದನ್ನು ಪೂರೈಸುವ ನಿಟ್ಟಿನಲ್ಲಿ ಸಹಕಾರ ವಲಯ ಹೇಗೆ ನೆರವಾಗಬಹುದು ಎಂಬ ಬಗ್ಗೆ ಈಗಾಗಲೇ ಎರಡು ಸುತ್ತಿನ ಸಭೆಯನ್ನು ನೀತಿ ಆಯೋಗ ನಡೆಸಿದೆ.
ರೈತರಿಗೆ ಆರ್ಥಿಕ ಬಲ; ಸಬ್ಸಿಡಿ ದುರ್ಬಳಕೆಗೂ ಕಡಿವಾಣ
ಈ ಯೋಜನೆಯಿಂದಾಗಿ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ. ಅಷ್ಟೇ ಅಲ್ಲ, ಯೂರಿಯಾ ಹಾಗೂ ವಿದ್ಯುತ್ ಸಬ್ಸಿಡಿಯನ್ನು ದುರ್ಬಳಕೆ ಮಾಡಿಕೊಳ್ಳುವುದೂ ತಪ್ಪುತ್ತದೆ. ಹೀಗಾಗಿ ಸಬ್ಸಿಡಿಯಿಂದ ರೈತರಿಗೆ ಸಿಗುತ್ತಿದ್ದ ಲಾಭಕ್ಕಿಂತ ಹೆಚ್ಚಿನ ಪ್ರಮಾಣದ ಅನುಕೂಲ ಈ ಅನುದಾನದಿಂದ ಉಂಟಾಗಲಿದೆ. ಅಲ್ಲದೆ ಇದನ್ನು ಜಾರಿಗೊಳಿಸಲು ಸರಕಾರಕ್ಕೆ ಸುಲಭವಾಗಿದ್ದು, ಭ್ರಷ್ಟಾಚಾರವೂ ಕಡಿಮೆಯಾಗಲಿದೆ. 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಕುಟುಂಬಕ್ಕೆ ಈ ಸಬ್ಸಿಡಿ ನೀಡುವುದರಿಂದ ಬಡ ರೈತರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ. ಬೆಳೆಗಳಿಗೆ ಸಬ್ಸಿಡಿ ನೀಡುವುದರ ಬದಲಿಗೆ, ರೈತರಿಗೇ ನೇರವಾಗಿ ಸಬ್ಸಿಡಿ ನೀಡುವ ವಿಧಾನದ ಕುರಿತು ಸರಕಾರ ಹಲವು ತಿಂಗಳುಗಳಿಂದಲೇ ಚರ್ಚೆ ನಡೆಸುತ್ತಿದೆ.