Advertisement

ಶ್ರುತಿ ಹರಿಹರನ್‌ ಅರ್ಜುನ್ ಸರ್ಜಾ ಪ್ರಕರಣವು

08:46 PM Aug 31, 2019 | Team Udayavani |

ಕಳೆದ ವರ್ಷ ನಟ ಅರ್ಜುನ್‌ ಸರ್ಜಾ ಅವರ ವಿರುದ್ದ ನಟಿ ಶ್ರುತಿ ಹರಿಹರನ್‌ ಮಾಡಿದ “ಮಿ ಟೂ’ ಆರೋಪ, ಬಳಿಕ ಚಿತ್ರರಂಗದಲ್ಲಾದ ಅಲ್ಲೋಲ-ಕಲ್ಲೋಲ, ಪರ-ವಿರೋಧ ಚರ್ಚೆಗಳು ನಿಮಗೆ ನೆನಪಿರಬಹುದು. ಇನ್ನು ಶ್ರುತಿ ಹರಿಹರನ್‌ “ಮಿ ಟೂ’ ಆರೋಪವನ್ನು ಸರ್ಜಾ ಕುಟುಂಬ ಕೂಡ ಗಂಭೀರವಾಗಿ ಪರಿಗಣಿಸಿತ್ತು. ನಟಿ ಶ್ರುತಿ ಹರಿಹರನ್‌ ಸುಳ್ಳು ಆರೋಪ ಮಾಡಿ, ವೈಯಕ್ತಿಕವಾಗಿ ಅರ್ಜುನ್‌ ಸರ್ಜಾರನ್ನು ಹಾಗೂ ಇಡೀ ಕುಟುಂಬವನ್ನು ಸಮಾಜದ ಎದುರು ತಲೆತಗ್ಗಿಸುಂತೆ ಮಾಡಿದ್ದಾರೆ ಎಂದು ನಟ ಅರ್ಜುನ್‌ ಸರ್ಜಾ ಪರವಾಗಿ ಧ್ರುವ ಸರ್ಜಾ 5 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.

Advertisement

ಬಳಿಕ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡರೂ, ಪ್ರತಿವಾದಿ ಶ್ರುತಿ ಹರಿಹರನ್‌ ಮಾತ್ರ ನಿಗದಿತ ಸಮಯಕ್ಕೆ ಕೋರ್ಟ್‌ಗೆ ಹಾಜರಾಗುತ್ತಿಲ್ಲ. ಕೋರ್ಟ್‌ ಅನೇಕ ಬಾರಿ ಸೂಚನೆ ನೀಡಿದರೂ, ಅನಾರೋಗ್ಯದ ನೆಪ, ತಾನು ಗರ್ಭಿಣಿ ಎನ್ನುವ ಕಾರಣಗಳನ್ನು ಮುಂದಿಟ್ಟುಕೊಂಡು ಶ್ರುತಿ ಕೋರ್ಟ್‌ಗೆ ಹಾಜರಾಗುತ್ತಿಲ್ಲ ಎನ್ನಲಾಗುತ್ತಿದೆ. ಇದರ ನಡುವೆಯೇ ನಟ ಅರ್ಜುನ್‌ ಸರ್ಜಾ ಪರವಾಗಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಜಾಗೊಳಿಸುವಂತೆ ಶ್ರುತಿ ಹರಿಹರನ್‌ ಅರ್ಜಿಯನ್ನು ಸಲ್ಲಿಸಿದ್ದರು. ಬಳಿಕ ವಾದ -ಪ್ರತಿವಾದ ಆಲಿಸಿದ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯ ಧ್ರುವ ಸರ್ಜಾ ಸಲ್ಲಿಸಿದ್ದ ಮಾನನಷ್ಟ ಅರ್ಜಿಯನ್ನು ಊರ್ಜಿತವಾಗಿದೆ ಎಂದು, ಶ್ರುತಿ ಹರಿಹರನ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ನಟ ಅರ್ಜುನ್‌ ಸರ್ಜಾ ವಿರುದ್ಧ ಮಿಟೂ ಆರೋಪ ಮಾಡಿದ್ದ ಶ್ರುತಿ ಹರಿಹರನ್‌, ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಸರ್ಜಾ ವಿರುದ್ಧ ದೂರು ನೀಡಿದ್ದರು. ಈ ದೂರಿನ ಬಗ್ಗೆ ಎಫ್ಐಆರ್‌ ದಾಖಲಿಸಲು ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಅದಾದ ಬಳಿಕ ಶ್ರುತಿ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸದ್ಯ ಶ್ರುತಿ ಹರಿಹರನ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವುದರಿಂದ ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದುವರೆಯಲಿದೆ. ಈ ಮೂಲಕ “ಮಿ ಟೂ’ ಪ್ರಕರಣದಲ್ಲಿ ನಟಿ ಶ್ರುತಿ ಹರಿಹರನ್‌ಗೆ ಹಿನ್ನಡೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ಇದ್ಯಾವುದರ ಬಗ್ಗೆಯೂ ತುಟಿಬಿಚ್ಚದ ಶ್ರುತಿ ಹರಿಹರನ್‌, ಸದ್ಯ ಕೇರಳದ ತಮ್ಮ ಮನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಸ್ನೇಹಿತರ ಹಾಗೂ ಮಾಧ್ಯಮದವರು ಸೇರಿದಂತೆ ಯಾರ ಜೊತೆಗೆ ಸಂಪರ್ಕದಲ್ಲಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next