Advertisement

ಕಡಬ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಿಬ್ಬಂದಿ ಮೇಲೆ ಹಲ್ಲೆ ಕೇಸ್; ಏಳು ಆರೋಪಿಗಳ ಬಂಧನ

01:11 PM Feb 24, 2023 | Team Udayavani |

ಕಡಬ: ನರ ಹಂತಕ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಗುರುವಾರ ರಾತ್ರಿ ಕೊಂಬಾರಿನ ಮಂಡೆಕರ ಬಳಿ ಪೊಲೀಸ್, ಅರಣ್ಯ ಇಲಾಖಾ ವಾಹನಗಳಿಗೆ ಹಾನಿ ಮಾಡಿದ ಆರೋಪದಲ್ಲಿ ಏಳು ಮಂದಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಗುರುವಾರ ರಾತ್ರಿಯೇ ಬಂಧಿಸಿದ್ದು, ಶುಕ್ರವಾರ ಬೆಳಿಗ್ಗೆ ಆರು ಜನರನ್ನು ದಸ್ತಗಿರಿ ಮಾಡಿದ್ದಾರೆ. ಕೊಂಬಾರು ಕಮರ್ಕಜೆ ನಿವಾಸಿ ಶೀನಪ್ಪ ಗೌಡರ ಪುತ್ರರಾದ ಉಮೇಶ್, ಕೋಕಿಲನಂದ, ಗೋಪಾಲ ಗೌಡರ ಪುತ್ರ ರಾಜೇಶ್, ಕೋಲ್ಪೆ ಕಮಲಾಕ್ಷ ಅವರ ಪುತ್ರ ಜನಾರ್ಧರ ರೈ, ಚಂದ್ರಪ್ಪ ಗೌಡರ ಪುತ್ರ ತೀರ್ಥಕುಮಾರ್, ಸಿರಿಬಾಗಿಲು ಗ್ರಾಮದ ಬಾರ್ಯ ಮನೆ ಹುಕ್ರಪ್ಪ ಗೌಡರ ಪುತ್ರ ಗಂಗಾಧರ ಗೌಡ, ಕೊಂಬಾರು ಗ್ರಾಮ ಕೆಂಜಾಳ ನಿವಾಸಿ ದಿವಾಕರ ಅವರ ಪುತ್ರ ಅಜಿತ್ ಕುಮಾರ್ ಬಂಧಿತರು.

ಘಟನೆಯ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಫೆ 23 ರಂದು ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಕಾಡಾನೆಯು ಸೆರೆಸಿಕ್ಕಿದ್ದು ಅದನ್ನು ರಾತ್ರಿ 9 ಗಂಟೆಗೆ ಅರಣ್ಯಾಧಿಕಾರಿಗಳು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಮುಂದಾದಾಗ ಕೆಲವು ಜನರು ಸ್ಥಳಕ್ಕೆ ಬಂದು ಕಾಡಾನೆ ತುಂಬಿಸಿದ ಲಾರಿಯನ್ನು ತಡೆದು ನಿಲ್ಲಿಸಿದ್ದರು. ಅಲ್ಲದೆ ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ, ಇತರ ಕಾಡಾನೆಗಳನ್ನು ಸೆರೆಹಿಡಿದು ಒಟ್ಟಿಗೆ ಎಲ್ಲಾ ಆನೆಗಳನ್ನು ತೆಗೆದುಕೊಂಡು ಹೋಗಬೇಕು ಎಂದು ವಾಗ್ವಾದ ಮಾಡಿದ್ದರು.

ಇದನ್ನೂ ಓದಿ:ಉಪ್ಪೂರು; ರಾಷ್ಟ್ರೀಯ ಡ್ರ್ಯಾಗನ್‌ ಬೋಟ್‌ ಸ್ಪರ್ಧೆಗೆ ಚಾಲನೆ

ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲ. ನಾವು ಮೊದಲು ಸೆರೆಹಿಡಿದ ಆನೆಯನ್ನು ಬಿಟ್ಟು ಬಂದು ಉಳಿದ ಕಾಡಾನೆಗಳನ್ನು ಸೆರೆಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಹೇಳಿದರೂ ಆರೋಪಿಗಳು ಮಾತು ಕೇಳಿರಲಿಲ್ಲ. ಈ ವೇಳೆ ಅರಣ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಜನರಿಗೆ ತಿಳುವಳಿಕೆ ಹೇಳಿದ್ದರು. ಆದರೆ ಆರೋಪಿಗಳು ಕರ್ತವ್ಯದಲ್ಲಿದ್ದ ಪೊಲೀಸರಿಗೂ ಮತ್ತು ಅರಣ್ಯ ಸಿಬ್ಬಂದಿಗೂ ಕಲ್ಲು ತೂರಾಟ ಮಾಡಿದ್ದರು. ಆರೋಪಿಗಳು ಸ್ಥಳದಲ್ಲಿ ನಿಲ್ಲಿಸಿದ್ದ ಅರಣ್ಯ ಇಲಾಖಾ ವಾಹನ ಹಾಗೂ ಪೊಲೀಸು ಇಲಾಖಾ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿ ವಾಹನಗಳನ್ನು ಜಖಂ ಮಾಡಿದ್ದಾರೆ.

Advertisement

ಆರೋಪಿಗಳ ವಿರುಧ್ಧ ಸರಕಾರಿ ಕರ್ತವ್ಯ ಕ್ಕೆ ಅಡ್ಡಿ, ಸರಕಾರಿ ವಾಹನಗಳಿಗೆ ಹಾನಿ ಮುಂತಾದ ಹಲವು ಪ್ರಕರಣಗಳು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next