ಹುನಗುಂದ: ತಾಲೂಕಿನ ವಿವಿಧ ಇಲಾಖೆ ಬಹುತೇಕ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಯಲ್ಲಿ ಇರುವುದು ಕಡ್ಡಾಯ. ಒಂದು ವೇಳೆ ಇರದಿದ್ದರೇ ಅಂತಹ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಆ ಅಧಿಕಾರಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂಗೆ ಬುಧವಾರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ನೇತೃತ್ವದ ತಂಡ ಭೇಟಿ ನೀಡಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ನಿತ್ಯ ಕಚೇರಿಗೂ ಬರದೇ, ಸಾರ್ವಜನಿಕರ ಸಂಪರ್ಕಕ್ಕೂ ಸಿಗದೇ ಕೆಲವು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅವರು ಕೆಂಡಾಮಂಡಲವಾದರು. ಸರ್ಕಾರದ ಅನೇಕ ಯೋಜನೆಗಳು ಕೆಲಸವಾಗದೇ ಬಿಲ್ ಆಗಿರುವ ಸಾಕಷ್ಟು ದೂರುಗಳು ನಮ್ಮ ಇಲಾಖೆಗೆ ಬಂದಿವೆ. ಪ್ರತಿಯೊಂದು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ-ಸೌಲಭ್ಯಗಳು ಸಿಗುತ್ತಿವೆಯೇ ಎನ್ನುವುದನ್ನು ನಾವು ಪರಿಶೀಲಿಸುತ್ತೇವೆ ಎಂದರು.
ಬಾಗಲಕೋಟೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಿಎಜಿಎ ಆಡಿಟ್ ಆಯಿತು. ಅದರಲ್ಲಿ 9 ಜಿಲ್ಲೆಗಳ ಮೇಲೆ ಕೇಸ್ ದಾಖಲಾಗಿದೆ. ಅದರಲ್ಲಿ ವಿಜಯಪುರ ಜಿಲ್ಲೆಯೂ ಇದೆ. ಕೇಸ್ ಆಗಿರುವ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳ ಖಾತ್ರಿ ಯೋಜನೆ ಕಾಮಗಾರಿ ಪರಿಶೀಲಿಸಲು ಸರ್ಕಾರ ಲೋಕಾಯುಕ್ತ ಇಲಾಖೆಗೆ ಅಧಿಕಾರ ನೀಡಿದೆ. 2012ರ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಪರಿಶೀಲನೆ ಕೂಡಾ ಸದ್ಯದಲ್ಲೇ ಪರಿಶೀಲಿಸುತ್ತಿದ್ದೇವೆ. ಪಿಡಿಒಗಳು ಎನ್‌ಆರ್‌ಇಜಿಎ ಕಾಮಗಾರಿಗಳ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ಅಧಿಕಾರಿ ಕಾಮಗಾರಿ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕಿದ್ದಲ್ಲಿ ಸದ್ಯ ಇರುವ ಪಿಡಿಒ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗುತ್ತೆ. ವಿವಿಧ ಇಲಾಖೆಗಳ ಕಾರ್ಯ ಚಟುವಟಕೆಗಳ ಮೇಲೆ ಲೋಕಾಯುಕ್ತರ ಹದ್ದಿನ ಕಣ್ಣು ಇರುತ್ತದೆ ಎಂದರು.
ಅಮರಾವತಿ ಗ್ರಾಪಂ ಅವ್ಯವಹಾರ ತನಿಖೆ: ಅಮರಾವತಿ ಗ್ರಾಪಂ 14ನೇ ಹಣಕಾಸಿನಲ್ಲಿ ಅವ್ಯವಹಾರವಾಗಿದೆ ಎಂದು ತಾಪಂ-ಜಿಪಂ ಹಾಗೂ ಗ್ರಾಮೀಣ ಪಂಚಾಯತ್ ರಾಜ್ಯ ಇಲಾಖೆಗೆ ದೂರು ಸಲ್ಲಿಸಿದರೂ ತನಿಖೆ ಮಾಡುತ್ತಿಲ್ಲ. ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗ್ರಾಮೀಣ ಪಂಚಾಯತ್ ರಾಜ್ಯ ಇಲಾಖೆ ಆಪ್ತ ಕಾರ್ಯದರ್ಶಿ, ಜಿಪಂ ಸಿಇಒ, ತಾಪಂ ಇಒ ಅವರಿಗೆ ಸೂಚಿಸಿದರೂ ತನಿಖೆ ವರದಿ ನೀಡುತ್ತಿಲ್ಲ ಎಂದು ತಿಮ್ಮಾಪುರ ಗ್ರಾಮದ ಬಸಯ್ಯ ಹಿರೇಮಠ ಲೋಕಾಯುಕ್ತರ ಮುಂದೆ ಆರೋಪಿಸಿದರು. ಆಗ ಈ ಕುರಿತು ಇಒ ಸಿ.ಬಿ. ಮೇಗೇರಿ ಕಾಟಾಚಾರದ ಉತ್ತರ ನೀಡುತ್ತಿದ್ದಂತೆ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಅದರ ಕುರಿತು ನಾವೇ ವಿಶೇಷ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಎಂಜಿಎನ್‌ಆರ್‌ಇಜಿಎ ಮಾಹಿತಿ ನೀಡಿಲ್ಲ: ಲೋಕಾಯುಕ್ತ ಇಲಾಖೆಯಿಂದ ತಾಲೂಕಿನ 10 ಗ್ರಾಪಂಗಳ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳ ಮಾಹಿತಿ ನೀಡುವಂತೆ ಸೂಚಿಸಿದ್ದರೂ ಇಲ್ಲಿವರೆಗೂ ನೀಡಿಲ್ಲ. ಅಂತಹ ಅಧಿ ಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದ ಲೋಕಾಯುಕ್ತರು, ಹೆಣ್ಣು ಮಕ್ಕಳ ರಕ್ಷಣೆಗಾಗಿ ಸರ್ಕಾರ ಪ್ರತಿಯೊಂದು ಶಾಲೆಯಲ್ಲಿ ಕರಾಟೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದ್ದು, ಸಮಾಜ ಕಲ್ಯಾಣ ಇಲಾಖೆ ಮುತುವರ್ಜಿ ವಹಿಸಬೇಕು ಎಂದರು.
ಕೆರೆ ಒತ್ತುವರೆ ಬಗ್ಗೆ ಗಮನ ಹರಿಸಿ: ಹಿರೇಮಾಗಿ ಗ್ರಾಪಂ ವ್ಯಾಪ್ತಿಯಲ್ಲಿ 8 ಕೆರೆಗಳಿದ್ದು, 72 ಎಕರೆ ಕೆರೆ ತೋರಿಸಸಲಾಗುತ್ತಿದೆ. ಅಲ್ಲಿ ಕೆರೆಯೇ ಇಲ್ಲ. ಕೆರೆ ಅತಿಕ್ರಮಣ ಮಾಡಿಕೊಂಡು ಹೊಲ ಮಾಡಿಕೊಂಡಿದ್ದಾರೆ. ಕೆರೆ ಹೂಳು ಬೇರೆಡೆ ಮಾರಾಟ ಮಾಡಿದ್ದಾರೆ. ಕೆರೆ ಇರುವ ಸ್ಥಳದಲ್ಲಿಯೇ ಶಾಲೆ ಕಟ್ಟಿಕೊಂಡಿದ್ದಾರೆ. ಸಾರ್ವಜನಿಕರು ಮತ್ತು ಸರ್ಕಾರದಿಂದಲೂ ಕೆರೆಗಳು ಒತ್ತುವರಿಯಾಗಿದೆ ಎಂದು ಜನರು ಆರೋಪಿಸಿದರು. ಹುನಗುಂದ-ಇಳಕಲ್ಲ ಅವಳಿ ತಾಲೂಕಿನ ಸಾರ್ವಜನಿಕರಿಂದ 12 ದೂರು ಅರ್ಜಿ ಸ್ವೀಕರಿಸಿ ಶೀಘ್ರ ತನಿಖೆ ಕೈಗೊಂಡು ಇತ್ಯರ್ಥಪಡಿಸುವುದಾಗಿ ಲೋಕಾಯುಕ್ತರು ತಿಳಿಸಿದರು.
ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಂ. ರಾಗಿ, ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಇನ್ ಸ್ಪೆಕ್ಟರ್ ಎಂ.ಟಿ. ನಾಯಕ, ಲೋಕಾಯುಕ್ತ ಸಿಬ್ಬಂದಿ ಬಿ.ಎಂ. ದೇಸಾಯಿ, ಶಂಕರ ಬಳಬಟ್ಟಿ, ಇಳಕಲ್ಲ ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.