ಬೆಂಗಳೂರು: ಸಹೋದರನ ಪತ್ನಿ ಮತ್ತು ಪುತ್ರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ನಾಗರಾಜ್ ಮತ್ತು ಈತನ ಪುತ್ರ ಶಾಸ್ತ್ರೀ ಸೇರಿದಂತೆ ಐವರನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ದಾಖಲಾದ ದೂರಿನ ಅನ್ವಯ ನಾಗರಾಜ್, ಪುತ್ರ ಶಾಸ್ತ್ರೀ, ಸಹಚರರಾದ ಶರವಣ, ಮೊಸಾಸ್ ಹಾಗೂ ತಮಿಳುನಾಡಿನಲ್ಲಿ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಕುಪ್ಪಸ್ವಾಮಿ ಎಂಬಾತನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ನಾಗನ ಪುತ್ರ ಗಾಂಧಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಕುಟುಂಬದ ಆಸ್ತಿ ವಿಚಾರವಾಗಿ ನಾಗರಾಜ್ ಮತ್ತು ಈತನ ಸಹೋದರ ಧರ್ಮ ನಡುವೆ ಕೆಲ ವರ್ಷಗಳಿಂದ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಒಂದೆರಡು ಬಾರಿ ಧರ್ಮನ ಮೇಲೆ ನಾಗರಾಜ್ ಹಲ್ಲೆ ಕೂಡ ನಡೆಸಿದ್ದ. ಒಂದು ವರ್ಷದ ಹಿಂದೆ ಧರ್ಮ ಮೃತಪಟ್ಟಿದ್ದ.
ಬಳಿಕ ಧರ್ಮನ ಪತ್ನಿ ಚಾಮುಂಡೇಶ್ವರಿಯಿಂದ ಆಸ್ತಿ ಕಬಳಿಸಲು ನಾಗರಾಜ್ ಯತ್ನಿಸುತ್ತಿದ್ದ. ಆ ಹಿನ್ನೆಲೆಯಲ್ಲಿ ಆರೋಪಿ ತನ್ನ ಸಹಚರರ ಜತೆ ಸೇರಿ ನ.25ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಚಾಮುಂಡೇಶ್ವರಿ, ಪುತ್ರಿ ಶ್ವೇತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಪೊಲೀಸರ ವಶಕ್ಕೆ ನೀಡಬೇಡಿ ಸ್ವಾಮಿ..: ನಾಗ ಸೇರಿದಂತೆ ಇತರೆ ಆರೋಪಿಗಳನ್ನು ಬುಧವಾರ ಕೋರ್ಟ್‌ಗೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದರು. ಈ ವೇಳೆ ನಾಗರಾಜ್, “ದಯವಿಟ್ಟು ಪೊಲೀಸರ ವಶಕ್ಕೆ ಕೊಡಬೇಡಿ ಸ್ವಾಮಿ. ನನ್ನನ್ನು ವಿಚಾರಣೆ ನೆಪದಲ್ಲಿ ಕೊಂದು ಬಿಡುತ್ತಾರೆ ಎಂದು ಗೋಳಾಡಿದ್ದ”
ಆದರೆ, ಪ್ರಕರಣ ಗಂಭೀರ ಸ್ವರೂಪವಾಗಿದ್ದು, ಗಾಯಾಳುಗಳು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಪೊಲೀಸರು ಮತ್ತೂಮ್ಮೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ಆರೋಪಿಗಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.