ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಭಾರತ ಬಂದ್ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿರುವ ಬಿಜೆಪಿ ಕಾರ್ಯಕರ್ತರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಿರುವ ಉಡುಪಿ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ, ಕೂಡಲೇ ಈ ಪ್ರಕರಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆಯಿಂದ ಗಾಯಗೊಂಡ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆ ಸೇರಿದ್ದಾರೆ. ಆದರೆ, ಅಂತಹ 14 ಕಾರ್ಯಕರ್ತರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ.
ಬಂದ್ ಸಂದರ್ಭದಲ್ಲಿ ನಡೆದ ಗಲಾಟೆಗಳಿಗೆ ಕೊಲೆಯತ್ನ ಪ್ರಕರಣ ದಾಖಲಿಸಿರುವುದು ಇದೇ ಮೊದಲು. ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಿಜೆಪಿ ವಿರುದ್ಧ ದ್ವೇಷದ ರಾಜಕಾರಣಕ್ಕೆ ಈ ತಂತ್ರ ಬಳಸಿದ್ದು, ಪ್ರಕರಣ ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದರು.
ಬಂದ್ ವೇಳೆ ಉಡುಪಿಯಲ್ಲಿ ಎಸ್ಪಿ ಕಚೇರಿ ಎದುರೇ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಸ್ವತ ಎಸ್ಪಿಯೇ ಮುಂದೆ ನಿಂತು ಲಾಠಿ ಪ್ರಹಾರ ನಡೆಸುವಂತಾಗಿತ್ತು. ಅದೇ ರೀತಿ ಬಾಳೆಹೊನ್ನೂರು, ಹುಬ್ಬಳ್ಳಿ, ಅಂಕೋಲಾ, ಬಂಟ್ವಾಳ ಮತ್ತಿತರೆಡೆ ಕಾಂಗ್ರೆಸ್‌ನವರು ದಾಂಧಲೆ ನಡೆಸಿದ್ದಾರೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಂದ್ ವೇಳೆ ಪೊಲೀಸ್ ಅಧಿಕಾರಿಗಳು ಆಡಳಿತ ಪಕ್ಷಗಳ ಪರವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಅವರು, ಯಾವುದೇ ಪಕ್ಷದ ಸರ್ಕಾರವಿರಲಿ. ಅಧಿಕಾರಿಗಳು ಕೆಲಸ ಮಾಡಬೇಕು. ಹೀಗಾಗಿ ಅವರು ಕಾನೂನು ಪ್ರಕಾರ ಕೆಲಸ ಮಾಡಬೇಕೇ ಹೊರತು ಆಡಳಿತ ಪಕ್ಷಗಳ ಮೂಗಿನ ನೇರಕ್ಕೆ ಕೆಲಸ ಮಾಡಿ ಪ್ರತಿಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಸಲಹೆ ಮಾಡಿದರು.
ನಷ್ಟಕ್ಕೆ ಹೊಣೆ ಯಾರು: ಬಂದ್‌ನಿಂದಾಗಿ ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳಿಗೆ ಒಟ್ಟು 22 ಕೋಟಿ ರೂ. ನಷ್ಟವಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ, ಬಲವಂತದಿಂದ ಬಸ್ ಏಕೆ ನಿಲ್ಲಿಸಲಾಯಿತು? ಸರ್ಕಾರ ಈ ನಷ್ಟದ ಹೊಣೆ ಹೊರುತ್ತದೆಯೇ ಎಂದು ಪ್ರಶ್ನಿಸಿದರು.