Advertisement

ಸಾಧುಕೋಕಿಲ ವಿರುದ್ಧದ ಪ್ರಕರಣ: ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌

12:25 AM Oct 24, 2019 | Team Udayavani |

ಬೆಂಗಳೂರು: ಮೈಸೂರಿನ ಮಸಾಜ್‌ ಸಲೂನ್‌ವೊಂದರ ಮಹಿಳಾ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಆರೋಪದ ವಿಚಾರವಾಗಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ನಟ ಹಾಗೂ ನಿರ್ದೇಶಕ ಸಾಧು ಕೋಕಿಲ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರಸ್ವತಿಪುರಂ ಠಾಣಾ ಪೊಲೀಸರಿಗೆ ಹೈಕೋರ್ಟ್‌ ಬುಧವಾರ ನೋಟಿಸ್‌ ಜಾರಿ ಮಾಡಿದೆ.

Advertisement

ಪ್ರಕರಣ ಕುರಿತಂತೆ ಸಾಧುಕೋಕಿಲ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರಸ್ವತಿಪುರಂ ಠಾಣಾ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್‌.ಎಸ್‌.ಚಂದ್ರಮೌಳಿ ವಾದಿಸಿ, ಸಲೂನ್‌ನ ಮಹಿಳಾ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಆರೋಪ ಸಂಬಂಧ ಸಾಧು ಕೋಕಿಲ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ. ಅಧೀನ ನ್ಯಾಯಾಲಯದ ಮುಂದೆ ನೀಡಿದ ಈ ಹೇಳಿಕೆಯಲ್ಲಿ ಮಹಿಳೆಯು ಈ ಆರೋಪ ಮಾಡಿಲ್ಲ.

ಆಕೆ ತಿಳಿಸಿದ ದಿನದಂದು ಅರ್ಜಿದಾರರು ಸಲೂನ್‌ಗೆ ಭೇಟಿಯೇ ನೀಡಿರಲಿಲ್ಲ. ಆದರೂ, ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಅದರಿಂದ ಅರ್ಜಿದಾರರ ತೇಜೋವಧೆಯಾಗುತ್ತಿದ್ದು, ಪ್ರಕರಣ ಹಾಗೂ ಆ ಕುರಿತ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದರು.

ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಅನುಮಾನದ ಮೇಲೆ 2017ರ ಡಿ.20ರಂದು ಮೈಸೂರಿನ ಸ್ವಾಮಿ ಆರ್ಕೆಡ್‌ ಕಟ್ಟಡದಲ್ಲಿದ್ದ ಲೈಕ್‌ ಟ್ರೆಂಡ್‌ ಫ್ಯಾಮಿಲಿ ಸಲೂನ್‌ ಮೇಲೆ ಸರಸ್ವತಿಪುರಂ ಠಾಣಾ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಸಲೂನ್‌ನಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಸಲೂನ್‌ ಮಾಲೀಕ ರಾಜೇಶ್‌ ಇದ್ದರು.

Advertisement

ಆಗ, ಪೊಲೀಸರು ಮಹಿಳೆಯ ವಿಚಾರಣೆ ನಡೆಸಿದಾಗ‌ “ಸಲೂನ್‌ಗೆ ಭೇಟಿ ನೀಡುವ ಗ್ರಾಹಕರ ದೇಹದ ಎಲ್ಲಾ ಭಾಗಗಳಿಗೆ ಮಸಾಜ್‌ ಮಾಡುವಂತೆ ರಾಜೇಶ್‌ ನನಗೆ ಹೇಳುತ್ತಿದ್ದರು. ನಟ ಸಾಧು ಕೋಕಿಲ ಸಹ ಸಲೂನ್‌ಗೆ ಬರುತ್ತಿದ್ದರು. ಖಾಸಗಿ ಭಾಗ ಸೇರಿದಂತೆ ಅವರ ದೇಹದ ಎಲ್ಲಾ ಭಾಗಗಳಿಗೂ ನಾನು ಮಸಾಜ್‌ ಮಾಡಿದೆ’ ಎಂದು ಹೇಳಿಕೆ ನೀಡಿದ್ದರು.

ತನಿಖೆ ನಡೆಸಿದ್ದ ಪೊಲೀಸರು, ಸಾಧುಕೋಕಿಲ ವಿರುದ್ಧ ಐಪಿಸಿ ಸೆಕ್ಷನ್‌ 354 ಅನ್ವಯ ಮಹಿಳೆಯ ಘನತೆಗೆ ಧಕ್ಕೆ ತಂದ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಹೈಕೋರ್ಟ್‌ ಮೆಟ್ಟಿಲೇರಿದ ಸಾಧುಕೋಕಿಲ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next