ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್‌ವೊಬ್ಬರು ತಮ್ಮ ಪತ್ನಿಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಶಿಲ್ಪಾ (29) ಕೊಲೆಯಾದವರು. ಈ ಸಂಬಂಧ ಆಕೆಯ ಪೋಷಕರು ಅಳಿಯ ಹಾಗೂ ಬೇಗೂರು ಠಾಣೆಯ ಪಿಎಸ್‌ಐ ರಮೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪಿಎಸ್‌ಐ ರಮೇಶ್ ರನ್ನು ವಿಚಾರಣೆಗೊಳಪಡಿಸಲಾಗಿದೆ. ಜತೆಗೆ ಮರಣೋತ್ತರ ವರದಿ ಬಂದ ಬಳಿಕ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
ಪಿಎಸ್‌ಐ ರಮೇಶ್ ಮತ್ತು ಶಿಲ್ಪಾ ಬಿಇಡ್ ವ್ಯಾಸಂಗ ಮಾಡುತ್ತಿರುವ ದಿನಗಳಿಂದ ಪರಿಚಯಸ್ಥರಾಗಿದ್ದು, ಪ್ರೀತಿಸುತ್ತಿದ್ದರು. ಅಲ್ಲದೆ, ಸಹಜೀವನ ಕೂಡ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಬಳಿಕ ರಮೇಶ್ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಬಳಿಕ ಶಿಲ್ಪಾ ಜಾತಿ ವಿಚಾರಕ್ಕೆ ಮದುವೆಯಾಗಲು ಹಿಂದೇಟು ಹಾಕುತ್ತಿದ್ದರು ಎಂದು ಹೇಳಲಾಗಿದೆ.
ಬಳಿಕ ಆಕೆ, ಜಾತಿ ನಿಂದನೆ ಪ್ರಕರಣ ದೂರು ನೀಡಿದ್ದರು. ಬಳಿಕ ಹಿರಿಯರು ಮಧ್ಯಸ್ಥಿಕೆ ವಹಿಸಿ ರಾಜಿ-ಸಂಧಾನ ಮಾಡಿದ್ದರು. ಜತೆಗೆ ಹಿರಿಯ ಪೊಲೀಸರ ಸಮ್ಮುಖದಲ್ಲಿಯೇ ರಮೇಶ್‌ಗೆ ಮದುವೆಗೆ ಒಪ್ಪಿಸಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಮದುವೆ ಬಳಿಕವೂ ರಮೇಶ್, ಶಿಲ್ಪಾರನ್ನು ಒಪ್ಪಿಕೊಂಡಿರಲಿಲ್ಲ. ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜತೆಗೆ ಶಿಲ್ಪಾಳ ಜೀವನ ನಿರ್ವಹಣೆಗೂ ಹಣ ನೀಡುತ್ತಿರಲಿಲ್ಲ. ಅಲ್ಲದೆ, ಸಂಬಂಧಿ ಯುವತಿ ಮದುವೆಯಾಗುವಂತೆ ಮನೆಯವರು ಒತ್ತಾಯಿಸುತ್ತಿದ್ದರು. ಹೀಗಾಗಿ ಇತ್ಯರ್ಥ ಪಡಿಸಿಕೊಳ್ಳುವಂತೆ ರಮೇಶ್ ಪೀಡಿಸುತ್ತಿದ್ದ. ಶುಕ್ರವಾರ ರಾತ್ರಿ ಕೂಡ ಶಿಲ್ಪಾ ತನ್ನ ಕುಟುಂಬ ಸದಸ್ಯರ ಜತೆ ಫೋನ್‌ನಲ್ಲಿ ಮಾತನಾಡಿದ್ದು, ಸ್ವಲ್ಪ ಹಣ ಕೂಡ ಹಾಕಿಕೊಂಡಿದ್ದರು ಎಂದು ಆಕೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಆದರೆ, ಬೆಳಗ್ಗೆ ಶಿಲ್ಪಾ ಮನೆ ಬಾಗಿಲು ತೆರೆದಿಲ್ಲ. ಮನೆ ಮಾಲೀಕರು ರಮೇಶ್‌ಗೆ ತಿಳಿಸಿದ್ದಾರೆ. ರಮೇಶ್ ಸ್ಥಳಕ್ಕೆ ಬಂದು ಸ್ಥಳೀಯರ ನೆರವಿನಿಂದ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದಾಗ ಮೃತಪಟ್ಟಿದ್ದಾರೆ ಎಂದು ದೃಢಿಕರಿಸಿದ್ದಾರೆ.
ಕೊಲೆಗೈದು ಆತ್ಮಹತ್ಯೆ ಕಥೆ: ಪೋಷಕರ ಆರೋಪ : ಪಿಎಸ್‌ಐ ರಮೇಶ್ ಅವರು ಉದ್ದೇಶಪೂರ್ವಕ ವಾಗಿಯೇ ತಮ್ಮ ಪುತ್ರಿ ಶಿಲ್ಪಾ ಅವನ್ನು ಕೊಲೆ ಮಾಡಿದ್ದಾರೆ. ಇದನ್ನು ಮುಚ್ಚಿ ಹಾಕುವ ಸಲುವಾಗಿ ಆತ್ಮಹತ್ಯೆಯ ಕಥೆ ಕಟ್ಟುತ್ತಿದ್ದಾನೆ ಎಂದು ಶಿಲ್ಪಾ ಪೋಷಕರು ಗಂಭೀರ ಆರೋಪಿಸಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಶಿಲ್ಪಾ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ಆಧಾರದ ಮೇಲೆ ಮುಂದಿನ ತನಿಖೆ ನಡೆಯಲಿದೆ.
– ಸಿ.ಕೆ.ಬಾಬಾ, ಡಿಸಿಪಿ, ಆಗ್ನೇಯ ವಿಭಾಗ