Advertisement

ಕೆಎಸ್ಸಾರ್ಟಿಸಿ ಅಧಿಕಾರಿಗಳ ವಿರುದ್ಧ ಪ್ರಕರಣ

12:40 PM May 26, 2017 | |

ಮೈಸೂರು: ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ವೇತನ ಸೇರಿದಂತೆ ಮೂಲಸೌಕರ್ಯಗಳನ್ನು ನೀಡುವಲ್ಲಿ ವಿಫ‌ಲವಾಗಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು, ವಿಭಾಗೀಯ ನಿಯಂತ್ರಣಾಧಿಕಾರಿ(ಮೈಸೂರು ಗ್ರಾಮಾಂತರ) ವಿರುದ್ಧ ಆಯೋಗದ ವತಿಯಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶ್‌ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಗ್ರಾಮಾಂತರ ಬಸ್‌ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುವ ಸಫಾಯಿ ಕರ್ಮಚಾರಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಸಫಾಯಿ ಕರ್ಮಚಾರಿಗಳ ಪಾಲಿಗೆ ಯಮಲೋಕ ಎಂದರೆ ತಪ್ಪಾಗಲಾರದು. ಗ್ರಾಮಾಂತರ ಬಸ್‌ನಿಲ್ದಾಣದಲ್ಲಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ವೇತನ, ಪಿಎಫ್, ಇಎಸ್‌ಐ ಸೇರಿದಂತೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ.

ಅಲ್ಲದೆ ಇವರುಗಳಿಗೆ ಸುರಕ್ಷತಾ ಪರಿಕರಗಳು, ಆರೋಗ್ಯ ತಪಾಸಣಾ ವ್ಯವಸ್ಥೆಯೂ ಇಲ್ಲದಂತಾಗಿದೆ. ಅಲ್ಲದೆ ಯಾವುದೇ ಟೆಂಡರ್‌ ಇಲ್ಲದೆ ಗುತ್ತಿಗೆ ನೀಡಿರುವುದು ಹಾಗೂ ಪಿಎಫ್ ನೀಡದೆ ವಂಚಿಸಿರುವುದು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿದೆ ಎಂದು ತಿಳಿಸಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಮಹೇಶ್‌ ಅವರ ವಿರುದ್ಧ ಆಯೋಗದ ವತಿಯಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

ವಿವಿಯಲ್ಲೂ ಇದೇ ಸ್ಥಿತಿ: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುವ ಸಪಾಯಿ ಕರ್ಮಚಾರಿಗಳ ಸ್ಥಿತಿ ಸಹ ಶೋಚನೀಯವಾಗಿದೆ. ಮೈಸೂರು ವಿವಿಯಲ್ಲಿ 205 ಮಂದಿ ಸಫಾಯಿ ಕರ್ಮಚಾರಿಗಳು ಕೆಲಸ ಮಾಡುತ್ತಿದ್ದು, ಇವರುಗಳಿಗೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳು ದೊರೆಯುತ್ತಿಲ್ಲ. ಸಫಾಯಿ ಕರ್ಮಚಾರಿಗಳಿಗೆ ಸರ್ಕಾರ 14,040 ರೂ. ವೇತನ ನಿಗದಿಗೊಳಿಸಿದ್ದರೆ, ಮೈಸೂರು ವಿವಿಯಲ್ಲಿ 7,400 ರೂ. ವೇತನ ನೀಡಲಾಗುತ್ತಿದೆ ಎಂದು ದೂರಿದರು. 

Advertisement

ಇದಲ್ಲದೆ 20ಕ್ಕೂ ಹೆಚ್ಚು ಮಂದಿಗೆ ಕಳೆದ ಐದಾರು ತಿಂಗಳುಗಳಿಂದ ವೇತನವನ್ನೇ ನೀಡದಿರುವುದು ಸಹ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ವಿವಿಯಲ್ಲಿ ಕೆಲಸ ಮಾಡುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿ, 7 ದಿನದೊಳಗೆ ಸೂಕ್ತ ಕಾರಣ ನೀಡುವಂತೆ ಸೂಚಿಸಿ ಮೈಸೂರು ವಿವಿ ಕುಲಪತಿಗೆ ನೋಟಿಸ್‌ ನೀಡಲಾಗುತ್ತಿದೆ.

ನಗರದ ಕೆ.ಆರ್‌.ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಅಲ್ಲಿನ ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಪರಿಕರಗಳು ನೀಡದಿರುವುದು ಕಂಡು ಬಂದ ಹಿನ್ನೆಲೆ ಇದಕ್ಕೆ ಕಾರಣ ಕೇಳಿ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಲಾಗಿದೆ ಎಂದರು. ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಸದಸ್ಯ ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗುರುಶಾಂತಪ್ಪ ಇನ್ನಿತರರು ಹಾಜರಿದ್ದರು.

ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಆಯೋಗದಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ 1 ಲಕ್ಷ ರೂ. ಗಳನ್ನು ನೀಡಲಾಗಿದೆ. ಹೀಗಿದ್ದರೂ ಯಾವುದೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾವಹಿಸುತ್ತಿಲ್ಲ.
-ವೆಂಕಟೇಶ್‌, ಅಧ್ಯಕ್ಷರು, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ.

Advertisement

Udayavani is now on Telegram. Click here to join our channel and stay updated with the latest news.

Next