Advertisement

ಹಿಂದೂ ಸಂಘಟನೆ ವಿರುದ್ಧದ ಪ್ರಕರಣ ಹಿಂತೆಗೆತ

11:29 PM Sep 06, 2019 | Team Udayavani |

ಬೆಂಗಳೂರು: ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಿಂದೂ ಪರ ಸಂಘಟನೆಗಳ ಸದಸ್ಯರ ವಿರುದ್ಧ ಹೂಡಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಮ್ಮುಖದಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾದ ಈ ವಿಚಾರದ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.

Advertisement

ಪಕ್ಷದ ಕಾರ್ಯಕರ್ತರು, ಹಿಂದೂ ಪರ ಸಂಘಟನೆಗಳ ಸದಸ್ಯರ ಮೇಲೆ ವಿನಾಕಾರಣ ಪ್ರಕರಣ ಹೂಡಿರುವುದು, ಕ್ಷುಲ್ಲಕ ಕಾರಣಕ್ಕೆ ಸಣ್ಣ ಪುಟ್ಟ ಮೊಕದ್ದಮೆ ದಾಖಲಿಸಿದ್ದು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಅಂತಹ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ ಅವರು, ಈ ಬಗ್ಗೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸ್‌ ಇಲಾಖೆಗೆ ಮುಚ್ಚಳಿಕೆ ನೀಡುವ ವ್ಯವಸ್ಥೆ ಸೂಕ್ತವಲ್ಲ. ಹಿಂದೂ ಧರ್ಮದ ಆಚರಣೆಗಳಿಗೆ ಆದ್ಯತೆ ನೀಡಿ ಪ್ರತಿಪಾದಿಸುತ್ತಾ, ಪಾಲಿಸುತ್ತಾ ಬಂದಿರುವ ಬಿಜೆಪಿಯೇ ಅಧಿಕಾರದಲ್ಲಿರುವಾಗ ಮುಚ್ಚಳಿಕೆ ನೀಡಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ವ್ಯವಸ್ಥೆ ಮುಂದುವರಿಸಿದ್ದು ಸರಿಯಲ್ಲ ಎಂದು ಸಭೆಯಲ್ಲಿದ್ದ ಹಲವರು ಬೇಸರ ವ್ಯಕ್ತಪಡಿಸಿದರು. ಆಗ ಯಡಿಯೂರಪ್ಪ ಅವರು ಈ ಬಗ್ಗೆ ಗಮನ ಹರಿಸುವುದಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಕಾರ್ಯಕರ್ತರಿಗೆ ಆದ್ಯತೆ ಬೇಕು: ನಿಗಮ, ಮಂಡಳಿಗಳ ಅಧ್ಯಕ್ಷರ ಸ್ಥಾನಕ್ಕೆ ಪಕ್ಷದ ಕಾರ್ಯಕರ್ತರು, ಪ್ರಮುಖರಿಗೆ ಆದ್ಯತೆ ನೀಡಬೇಕು. ನಿಗಮ, ಮಂಡಳಿ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಪಕ್ಷದೊಂದಿಗೂ ಸಮಾಲೋಚನೆ ನಡೆಸುವ ಪ್ರಕ್ರಿಯೆ ಅನುಸರಿಸುವುದು ಸೂಕ್ತ ಎಂದು ಪ್ರಸ್ತಾಪಿಸಲಾಯಿತು. ಆಗ ಯಡಿಯೂರಪ್ಪ ಅವರು, ಎಲ್ಲವನ್ನೂ ಆ ರೀತಿ ಮಾಡಲು ಸಾಧ್ಯವಿಲ್ಲ.

ಸಚಿವ ಸ್ಥಾನ ವಂಚಿತ ಸಾಕಷ್ಟು ಶಾಸಕರಿದ್ದು, ಅವರಿಗೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಬೇಕಿದೆ. ಶಾಸಕರಿಲ್ಲದ ಕಡೆ ಏನು ಮಾಡಬೇಕು ಎಂಬುದು ಮುಖ್ಯ. ಸರ್ಕಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಕೆಲವರಿಗೆ ಅವಕಾಶ ನೀಡಬೇಕಾಗುತ್ತದೆ. ಹಾಗೆಯೇ ಕಾರ್ಯಕರ್ತರಿಗೂ ಆದ್ಯತೆ ನೀಡಬೇಕಾಗುತ್ತದೆ. ಸಮತೋಲನ ಕಾಯ್ದುಕೊಳ್ಳುವತ್ತ ಗಮನ ಹರಿಸಲಾ ಗುವುದು ಎಂದರು ಎಂದು ಮೂಲಗಳು ಹೇಳಿವೆ.

Advertisement

ವರ್ಗಾವಣೆ ವಿಚಾರ ಪ್ರಸ್ತಾಪ: ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಅಧಿಕಾರಿಗಳ ವರ್ಗಾವಣೆ ಹೆಚ್ಚಾಗಿದೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ. ಸರ್ಕಾರ ಕೇವಲ ವರ್ಗಾವಣೆಗಷ್ಟೇ ಆದ್ಯತೆ ನೀಡದೆ ಅಭಿವೃದ್ಧಿ ಕಾರ್ಯಗಳಿಗೂ ಒತ್ತು ನೀಡಬೇಕಾಗುತ್ತದೆ. ಈ ಬಗ್ಗೆ ಗಮನ ಹರಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ವ್ಯಕ್ತವಾಯಿತು ಎನ್ನಲಾಗಿದೆ.

ಪಕ್ಷ ಸಂಘಟನಾ ನಿಯಂತ್ರಣ ಕಸರತ್ತು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವ ಬೆನ್ನಲ್ಲೇ ಪಕ್ಷ, ಸಂಘಟನೆಯನ್ನು ವಿಶ್ವಾಸದಲ್ಲಿಟ್ಟುಕೊಂಡು ಒಟ್ಟಿಗೆ ಕಾರ್ಯ ನಿರ್ವಹಿಸಬೇಕು ಎಂದು ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧರಿಸಿರು ವುದು ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ನಾಯಕರಿಂದ ಅಂತರ ಕಾಯ್ದುಕೊಂಡು ಸರ್ಕಾರ ತಮ್ಮದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ನಿಯಂತ್ರಿಸುವ ಸಲುವಾಗಿಯೇ ಪಕ್ಷ ಹಾಗೂ ಸರ್ಕಾರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂಬ ಸೂತ್ರ ಹೆಣೆಯಲಾಗಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.

ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು, ಅದನ್ನು ಜಾರಿಗೊಳಿಸದೆ ಪಕ್ಷದ ಪ್ರಮುಖರೊಂದಿಗೂ ಚರ್ಚಿಸಿ ಮುಂದು ವರಿಯುವುದು ಸೂಕ್ತ. ಆ ಮೂಲಕ ಪರೋಕ್ಷವಾಗಿ ಸರ್ಕಾರವೂ ಸಂಘಟನೆಯ ನಿಯಂತ್ರಣವನ್ನು ತೆಕ್ಕೆಯಲ್ಲಿಟ್ಟುಕೊಳ್ಳುವ ಪ್ರಯತ್ನಕ್ಕೆ ಚಾಲನೆ ನೀಡಿದಂತೆ ಕಾಣುತ್ತಿದೆ ಎಂಬ ವಿಶ್ಲೇಷಣೆಯೂ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next