Advertisement

CM Siddaramaiah ವಿರುದ್ಧದ ಕೇಸ್‌: ಸೆ. 2ಕ್ಕೆ ವಿಚಾರಣೆ ಮುಂದೂಡಿಕೆ

12:56 AM Aug 21, 2024 | Team Udayavani |

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ವಿಚಾರಣೆಯನ್ನು ಹೈಕೋರ್ಟ್‌ ಸೂಚನೆ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೆ. 2ಕ್ಕೆ ಮುಂದೂಡಿದೆ.

Advertisement

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ಆರಂಭಿಸಿದ್ದ ನ್ಯಾ| ಗಜಾನನ ಭಟ್‌ ಅವರಿದ್ದ ನ್ಯಾಯಪೀಠವು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದೇ ಇದ್ದಿದ್ದರಿಂದ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಬಗ್ಗೆ ಸಾಕಷ್ಟು ವಾದ-ಪ್ರತಿವಾದದ ಬಳಿಕ ಆ. 20ಕ್ಕೆ ಆದೇಶ ಕಾದಿರಿಸಿತ್ತು.

ಏತನ್ಮಧ್ಯೆ ಸಿಎಂ ವಿರುದ್ಧ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದರಿಂದ ಅದಕ್ಕೆ ತಡೆ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಆ. 20ರಂದು ಜನಪ್ರತಿನಿಧಿಗಳ ನ್ಯಾಯಾಲಯವು ಈ ದೂರುಗಳ ಸಂಬಂಧ ಯಾವುದೇ ತೀರ್ಪು ನೀಡಬಾರದು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಆ. 29ಕ್ಕೆ ಮುಂದೂಡಿದೆ.

ಇಂದು ಅಬ್ರಾಹಂ ಕೇಸ್‌ ವಿಚಾರಣೆ
ಮುಖ್ಯಮಂತ್ರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಕೂಡ ಜನಪ್ರತಿನಿಧಿಗಳ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದ್ದರು. ಈ ಹಿಂದೆ ಇದೇ ದೂರಿನ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್‌ ಆ. 21ರಂದು ವಿಚಾರಣೆ ನಡೆಸುವುದಾಗಿ ಸೂಚಿಸಿತ್ತು. ಆದರೆ ಹೈಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ದೂರುದಾರ ಅಬ್ರಾಹಂ ಬುಧವಾರ ಹೈಕೋರ್ಟ್‌ ಆದೇಶ ಪ್ರತಿಯನ್ನು ಜನಪ್ರತಿನಿಧಿಗಳ ಕೋರ್ಟ್‌ಗೆ ಸಲ್ಲಿಸಲಿದ್ದಾರೆ. ಅಲ್ಲದೆ ಸೆಪ್ಟಂಬರ್‌ನಲ್ಲಿ ವಿಚಾರಣೆಗೆ ದಿನಾಂಕ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಿದ್ದುಗೆ ಐಎನ್‌ಡಿಐಎ ಸಿಎಂಗಳ ಬೆಂಬಲ

Advertisement

ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿಗಳ ಬೆಂಬಲದ ಬಲ ದೊರಕಿದ್ದು ಹೋರಾಟದಲ್ಲಿ ನಾವು ನಿಮ್ಮ ಜತೆಗಿದ್ದೇವೆ ಎಂಬ ಭರವಸೆ ನೀಡಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಇ-ಮೇಲ್‌ ಮೂಲಕ ಸಂದೇಶದಲ್ಲಿ “ನಿಮ್ಮ ಹೋರಾಟದಲ್ಲಿ ನಾವು ಜತೆಗಿದ್ದೇವೆ’ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂದೇಶ ರಾಷ್ಟ್ರಮಟ್ಟದಲ್ಲಿ ಸಿದ್ದರಾಮಯ್ಯ ಅವರಿಗೆ ದೊಡ್ಡ ಬಲ ತಂದಂತಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ವಿಪಕ್ಷಗಳ ವಿರುದ್ಧ ಇ.ಡಿ., ಐಟಿ, ಸಿಬಿಐ ಅಸ್ತ್ರ ಬಳಸಿ ಬೆದರಿಸುತ್ತಿರುವ ಕೇಂದ್ರ ಸರಕಾರ ಈಗ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಂದು ಕರ್ನಾಟಕದಲ್ಲಿ ಆಗುತ್ತಿರುವುದು ನಾಳೆ ಎಲ್ಲಿ ಬೇಕಾದರೂ ಅನ್ವಯಿಸಬಹುದು. ಈ ಷಡ್ಯಂತ್ರ ರಾಜಕಾರಣದ ವಿರುದ್ಧದ ಹೋರಾಟದಲ್ಲಿ ನಾವು ನಿಮ್ಮ ಜತೆಗಿರುತ್ತೇವೆ ಎಂದು ಸಂದೇಶ ರವಾನಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next