ಬೆಂಗಳೂರು: ಹೈಕೋರ್ಟ್ ಸೂಚನೆ ಮೇರೆಗೆ ನಾಲ್ಕು ದಿನಗಳಿಂದ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ತೆರವು ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು, ಶನಿವಾರ ಪಾಲಿಕೆ ಸದಸ್ಯರ ಹುಟ್ಟುಹಬ್ಬಕ್ಕೆ ಶುಭ ಕೋರುವ ಫ್ಲೆಕ್ಸ್ ಅಳವಡಿಸಿದ ರಾಜರಾಜೇಶ್ವರಿ ನಗರ ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ನಾರಾಯಣ್ ವಿರುದ್ಧ ದೂರು ದಾಖಲಿಸಿದ್ದಾರೆ.
ಕಳೆದ ಬುಧವಾರದಿಂದ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸುತ್ತಿರುವ ಪಾಲಿಕೆ ಸಿಬ್ಬಂದಿ, ಮತ್ತೆ ಫ್ಲೆಕ್ಸ್ ಅಳವಡಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆನಂತರವೂ ರಾಜರಾಜೇಶ್ವರಿ ನಗರದಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯೆ ನಳಿನಿ ಬೆಂಬಲಿಗರ ವಿರುದ್ಧ ಆರ್.ಆರ್.ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಶನಿವಾರ 3 ಸಾವಿರಕ್ಕೂ ಹೆಚ್ಚಿನ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ತೆರವುಗೊಳಿಸಿದ್ದು, ಪಾಲಿಕೆಯ ಎಂಟೂ ವಲಯಗಳಲ್ಲಿ 20ಕ್ಕೂ ಹೆಚ್ಚಿನ ಫ್ಲೆಕ್ಸ್ ಮಳಿಗೆಗಳಿಗೆ ಬೀಗ ಜಡಿಯಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಪೂರ್ವ ವಲಯದಲ್ಲಿ 4834 ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದು, 11 ಎಫ್ಐಆರ್‌ಗಳನ್ನು ದಾಖಸಲಾಗಿದೆ. ಜತೆಗೆ 21 ಫ್ಲೆಕ್ಸ್ ತಯಾರಿಕಾ ಮಳಿಗೆಗಳಿಗೆ ಬೀಗ ಜಡಿದಿರುವ ಅಧಿಕಾರಿಗಳು, ಮಳಿಗೆಗಳಿದ್ದ ಫ್ಲೆಕ್ಸ್ ತಯಾರಿಕಾ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ.
ಬೊಮ್ಮನಹಳ್ಳಿ ವಲಯದಲ್ಲಿ 1330 ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದ್ದು, 6 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ದಕ್ಷಿಣ ವಲಯದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 1657 ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ 9 ಮಳಿಗೆಗಳನ್ನು ಮುಚ್ಚಿಸಿದ್ದಾರೆ. ಇದರೊಂದಿಗೆ ಪಶ್ಚಿಮ ವಲಯದಲ್ಲಿ 1442 ಫ್ಲೆಕ್ಸ್ ತೆರವುಗೊಳಿಸಿದ್ದು, ಯಲಹಂಕ ವಲಯದಲ್ಲಿ 1905 ಫ್ಲೆಕ್ಸ್ ತೆರವುಗೊಳಿಸಿ 10 ಮಳಿಗೆಗಳಿಗೆ ಬೀಗ ಹಾಕಲಾಗಿದೆ.