ಮಂಗಳೂರು: ಹಿಂದೂ ಧರ್ಮದ ಅವಹೇಳನ ಆರೋಪ ಹೊತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕಿಯನ್ನು ಅಮಾನತು ಮಾಡಲು ಆಗ್ರಹಿಸಿ ಪ್ರತಿಭಟನೆ ನಡೆಸಿದವರ ಮೇಲೆ ಎಫ್ ಐ ಆರ್ ದಾಖಲು ಮಾಡಿದ ಕುರಿತು ವಿಶ್ವ ಹಿಂದೂ ಪರಿಷತ್ ಆಕ್ರೋಶ ಹೊರ ಹಾಕಿದ್ದು ಮಂಗಳೂರು ನಗರದ ಪೊಲೀಸ್ ಠಾಣೆಗಳ ಎದುರು ಜೈಶ್ರೀರಾಮ್ ಘೋಷಣೆಯೊಂದಿಗೆ ಹರತಾಳ ನಡೆಸಲು ಗುರುವಾರ ಕರೆ ನೀಡಿದೆ.
ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧವೂ ಪ್ರಕರಣ ದಾಖಲು ಹಿನ್ನೆಲೆಯಲ್ಲಿ ಫೆ.19(ಸೋಮವಾರ) ಪೊಲೀಸ್ ಠಾಣೆಗಳ ಎದುರು ಹರತಾಳಕ್ಕೆ ಕರೆ ನೀಡಿರುವುದಾಗಿ ವಿಎಚ್ ಪಿ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಹೇಳಿಕೆ ನೀಡಿದ್ದಾರೆ ನೀಡಿದ್ದಾರೆ.
ಘಟನೆಯಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಆಗಿದೆ. ಎಫ್.ಐ.ಆರ್ ದಾಖಲಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಜೈ ಶ್ರೀರಾಮ್ ಹೇಳಿದ್ದಕ್ಕೆ ಹಿಂದೂ ವಿರೋಧಿ ಸರಕಾರ ಕೇಸ್ ಹಾಕಿದೆ. ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳ ಎದುರು ಜೈಶ್ರೀರಾಮ್ ಘೋಷಣೆಯೊಂದಿಗೆ ಹರತಾಳ ಮಾಡುತ್ತೇವೆ. ಹಿಂದೂ ಸಮಾಜದ ಬಂಧುಗಳು ಪೊಲೀಸ್ ಠಾಣೆಗಳ ಮುಂದೆ ಜೈಶ್ರೀರಾಮ್ ಘೋಷಣೆಯೊಂದಿಗೆ ಧರಣಿ ಮಾಡುತ್ತೇವೆ, ವಿಶೇಷವಾಗಿ ಪಾಂಡೇಶ್ವರ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತೇವೆ ಎಂದು ತಿಳಿಸಿ ತಿಳಿಸಿದರು.
ಶಿಕ್ಷಕಿ ಪ್ರಭಾ ರಾಮ ದೇವರು, ನಾಗದೇವರು, ಕೊರಗಜ್ಜನ ಬಗ್ಗೆ ಅವಹೇಳನ ಮಾಡಿದ್ದಾರೆ. ಇದರ ವಿರುದ್ಧ ಪೋಷಕರು ಪೊಲೀಸ್ ದೂರು ನೀಡಿದರೂ ಇನ್ನೂ ಪ್ರಕರಣ ದಾಖಲಿಸಿಲ್ಲ. ಶರಣ್ ಪಂಪ್ ವೆಲ್ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಬಗ್ಗೆ ಪ್ರಶ್ನಿಸಿದರೆ ಮೇಲಿನಿಂದ ಒತ್ತಡ ಇದೆ ಎಂದು ಪೊಲೀಸರು ಹೇಳುತ್ತಾರೆ. ನಮ್ಮ ನಾಯಕರ ಮೇಲೆ ಹಾಕಿರುವ ಕೇಸು ವಾಪಾಸ್ ಪಡೆಯಬೇಕು. ಶಿಕ್ಷಕಿ ಪ್ರಭಾ ಮೇಲೆ ಕೇಸು ದಾಖಲಿಸಿ ಬಂಧಿಸಬೇಕು ಎಂದು ಶಿವಾನಂದ ಮೆಂಡನ್ ಒತ್ತಾಯಿಸಿದ್ದಾರೆ.
ಸತೀಶ್ ಕುಂಪಲ ಎಚ್ಚರಿಕೆ
ಖಾಸಗಿ ಶಾಲೆಯಲ್ಲಿ ವಿರೋಧಿ ಶಿಕ್ಷಕರ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಶಾಸಕರು, ಮನಪಾ ಸದಸ್ಯರು, ಹಿಂದೂ ಸಂಘಟನೆಗಳು ಪ್ರಮುಖರ ಮೇಲಿನ ಪ್ರಕರಣ ಒಂದು ವಾರದೊಳಗೆ ವಾಪಾಸು ಪಡೆಯಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಹಿಂದೂ ಸಮಾಜ ಒಟ್ಟು ಸೇರಿ ಪ್ರತಿಭಟನೆಯ ಹಾದಿ ಹಿಡಿಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಎಚ್ಚರಿಸಿದ್ದಾರೆ.
ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಭಾಗಿಯಾಗದ ಶಾಸಕ ಭರತ್ ಶೆಟ್ಟಿ ಅವರ ವಿರುದ್ಧ ಎಫ್ ಐಆರ್ ದಾಖಲಿಸಿರುವುದು ಖಂಡನೀಯ. ಪ್ರಕರಣದಲ್ಲಿ ಆರೋಪಿಗಳ ಸ್ಥಾನದಲ್ಲಿರುವ ಶಿಕ್ಷಕರ ವಿರುದ್ಧ ಮತ್ತು ಶಾಲೆಗೆ ಭೇಟಿ ನೀಡಿ ಆರೋಪಿಗಳಿಗೆ ಸಮಾಧಾನ ಹೇಳಿದ ಕಾಂಗ್ರೆಸ್ ನಾಯಕರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.