Advertisement

Vijayapura: ಪ್ರಚೋದಕಾರಿ ಭಾಷಣ… ಯತ್ನಾಳ, ರಾಜಾಸಿಂಗ್ ವಿರುದ್ಧ ಪ್ರಕರಣ ದಾಖಲು

12:21 PM Mar 06, 2024 | Team Udayavani |

ವಿಜಯಪುರ : ನಗರದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಹೈದರಾಬಾದ್ ಶಾಸಕ ರಾಜಾಸಿಂಗ್ ಲೋಧ ಅವರು ಕೋಮು ಸೌಹಾರ್ದ ಕದಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಹೀಗಾಗಿ ಇಬ್ಬರೂ ಶಾಸಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

ಬುಧವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ಸೌಹಾರ್ದ ಮಂಚ್ ಪ್ರಮುಖರಾದ ಮಹ್ಮದ್ ರಫೀಕ ಟಪಾಲ, ಸೋಮನಾಥ ಕಳ್ಳಿಮನಿ, ಮಹ್ಮದ್ ಇಸಾಕ ಮುಲ್ಲಾ,‌ ಇಬ್ಬರೂ ಶಾಸಕರು ನಗರದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಅಬುಬಕರ್ ರಾಜೇಸಾಬ್ ಕಂಬಾಗಿ ಗಾಂಧಿಚೌಕ್ ಪೊಲೀಸ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ದೂರಿದರು.

ಹೀಗಾಗಿ ಕೂಡಲೇ ಪೊಲೀಸರು ಪ್ರಚೋದನಕಾರಿ ಭಾಷಣ ಮಾಡಿರುವ ಶಾಸಕ ದ್ವಯರಾದ ಬಸನಗೌಡ ಪಾಟೀಲ ಯತ್ನಾಳ, ರಾಜಾಸಿಂಗ್ ಲೋಧ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ-ಮುಸ್ಲೀಮ ಎಂದು ಪ್ರತ್ಯೇಕಿಸುವ ಕೆಲಸ ಮಾಡಿಲ್ಲ, ಕೋಮು ಹಾಗೂ ಮತೀಯ ಭಾವನೆ ಹೊಂದಿರದ ಶಿವಾಜಿ ಅವರನ್ನು ಮತೀಯ ವ್ಯಕ್ತಿ ಎಂಬಂತೆ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಪಾಕ್ ಧ್ವಜ ಹಾರಿಸುವ ಘಟನೆ ನಡೆದಾಗ ಅದರ ಹಿಂದಿರುವ ವ್ಯಕ್ತಿಗಳ ಬಗ್ಗೆಯೂ ಸದನದಲ್ಲಿ ಯತ್ನಾಳ ಮಾತನಾಡಬೇಕು, ಮಂಡ್ಯದಲ್ಲಿ ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಬಗ್ಗೆ ಚಕಾರ ಎತ್ತಿಲ್ಲ. ಜಾತ್ಯತೀತ ರಾಜ ಶಿವಾಜಿ ಮಹಾರಾಜರ ಬಗ್ಗೆ ತಪ್ಪು ಸಂದೇಶ ನೀಡುವ ಹೇಳಿಕೆ ನೀಡಿರುವ ಈ ಇಬ್ಬರೂ ಶಾಸಕರು, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

Advertisement

ಶಿವಾಜಿ ಸೈನ್ಯದಲ್ಲಿ ಶೇಕಡಾ 40 ರಷ್ಟು ಮುಸ್ಲೀಮ ಸೈನಿಕರಿದ್ದರು. ಅಫಜಲಖಾನ್ ಕೊಲ್ಲಲು ಶಿವಾಜಿ ಅವರಿಗೆ ಹುಲಿ ಉಗುರಿನ ಪಂಜಾ ನೀಡಿದ್ದು ಕೂಡ ಓರ್ವ ಮುಸ್ಲೀಮನಾಗಿದ್ದ. ಸ್ವಯಂ ಛತ್ರಪತಿ ಶಿವಾಜಿ ಮಹಾರಾಜರೇ ಓರ್ವ ಜಾತ್ಯಾತೀತ ಮನಸ್ಥಿತಿಯ ಮಹಾರಾಜರಾಗಿದ್ದರು ಎಂದರು.

ಇಡೀ ದೇಶದಲ್ಲೇ ಬಾಬರಿ ಮಸೀದಿ ಧ್ವಂಸ ಸೇರಿದಂತೆ ಇತರೆ ಸಂದರ್ಭದಲ್ಲಿ ವಿಜಯಪುರ ಮಹಾನಗರದಲ್ಲಿ ಎಂದೂ ಗಲಭೆ ಆಗಿಲ್ಲ. ಭಾವೈಕ್ಯತೆಗೆ, ಸೌಹಾರ್ದತೆಗೆ ಹೆಸರಾದ ವಿಜಯಪುರ ನಗರದಲ್ಲಿ ಶಾಂತಿ ಕದಡುವ ಕೆಲಸವನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಹೈದರಾಬಾದ್ ಗೋಶಾಮಹಾಲ ಶಾಸಕ ರಾಜಾಸಿಂಗ್ ಲೋಧ ಮಾಡಿದ್ದಾರೆ ಎಂದು ಹರಿಹಾಯ್ದರು.

ವಿಜಯಪುರ ಜಿಲ್ಲೆ ಪ್ರವಾಸಿಗರ ತಾಣವಾಗಿದ್ದು ಪ್ರವಾಸೋದ್ಯಮ ಅಭಿವೃದ್ಧಿ ವಿಷಯವಾಗಿ ಒಮ್ಮೆಯೂ ಚಕಾರ ಎತ್ತಿಲ್ಲ. ಬದಲಾಗಿ ಕೇವಲ ಪಾಕಿಸ್ತಾನ, ಹಿಂದೂ,‌ ಮುಸ್ಲಿಮ ಸಮುದಾಯಗಳ ಮಧ್ಯೆ ಸಂಘರ್ಷ ಸೃಷ್ಟಿಸುವ ಹೇಳಿಕೆ ನೀಡುತ್ತಲೇ ಇರುತ್ತಾರೆ. ಇದರ ಹೊರತಾಗಿ ಅಭಿವೃದ್ಧಿ ವಿಷಯವಾಗಿ ಎಂದೂ ಮಾತನಾಡಿಲ್ಲ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಪರಿಸ್ಥಿತಿ ಎದುರಾಗಿದ್ದು, ಕೂಡಲೇ ನಗರದ ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸುವತ್ತ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಕೂಡಲೇ ವಿಜಯಪುರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಕೂಡಲೇ ಶಿವಾಜಿ ಜಯಂತಿ ಕಾರ್ಯಕ್ರಮ ಆಯೋಜಕರು, ಸಮಾರಂಭದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪೊಲೀಸರು ಕೂಡಲೇ ಇಡೀ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ, ಭಾಷಣ ವೀಕ್ಷಿಸಿ ಸುಪ್ರೀಂ ಕೋರ್ಟ್ ಆದೇಶದಂತೆ ಸ್ವಯಂ ಪ್ರೇರಿತವಾಗಿಯೂ ಪ್ರತ್ಯೇಕ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಅಬ್ದುಲ್ ರಜಾಕ್ ಹೋರ್ತಿ, ಶಕೀಲ ಗಡೇದ, ಗಂಗಾಧರ ಸಂಬಣ್ಣಿ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪೊಲೀಸ್ ಇಲಾಖೆ ನೀಡುವ FSL ವರದಿಯೇ ಅಧಿಕೃತ, ಖಾಸಗಿ ಸಂಸ್ಥೆ ನೀಡುವ ವರದಿ ಒಪ್ಪಲ್ಲ: ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next