Advertisement
ಹಣಕಾಸಿನ ನಿರ್ವಹಣೆಯಲ್ಲಿ ಸಿಎಗಳ ಪಾತ್ರವೇ ಪ್ರಧಾನ. ಇಂದು ಬಹುತೇಕ ವ್ಯವಹಾರಗಳಿಗೆ ಸಿಎಗಳ ಮಾರ್ಗದರ್ಶನ, ನೆರವು ಅಥವಾ ಸೇವೆ ಅನಿವಾರ್ಯ ಎಂಬಂತಾಗಿದೆ. ಸಿಎ ಉದ್ಯೋಗ ಎಷ್ಟು ಪ್ರತಿಷ್ಠಿತವೋ ಅಷ್ಟೇ ಸವಾಲುಗಳಿಂದ ಕೂಡಿದೆ. ಕಳೆದ 4 ವರ್ಷಗಳಿಂದ ಸಿಎ ಬೇಡಿಕೆ ಹೆಚ್ಚಾಗಿದೆ. ದೇಶದಲ್ಲಿ ವರ್ಷಕ್ಕೆ ಸುಮಾರು 10,000 ಕ್ಕೂ ಅಧಿಕ ಹೊಸ ಸಿಎಗಳಿಗೆ ಬೇಡಿಕೆ ಇದೆ ಎನ್ನುತ್ತವೆ ಅಧ್ಯಯನ ವರದಿಗಳು.
ಪೂರ್ಣಗೊಳಿಸುವ ಮೊದಲು ಸಿಪಿಟಿ(ಕಾಮನ್ ಪ್ರೊಫೀಸಿಯೆನ್ಶಿ ಟೆಸ್ಟ್), ಐಪಿಸಿಸಿ (ಇಂಟಗ್ರೇಟೆಡ್ ಪ್ರೊಫೆಸನಲ್ ಕಾಂಪಿಟೆನ್ಸ್ ಕೋರ್ಸ್), ಎಫ್ಸಿಇ(ಫೈನಲ್ ಕೋರ್ಸ್) ಎಂಬ ಮೂರು ಹಂತಗಳನ್ನು ಪೂರೈಸಬೇಕು. ಸಿಪಿಟಿ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಟೆಸ್ಟ್, ಜನರಲ್ ಎಕನಾಮಿಕ್ಸ್, ಮರ್ಕಂಟೈಲ್ ಲಾ ಮತ್ತು ಅಕೌಂಟಿಂಗ್ ವಿಷಯಗಳನ್ನು ಒಳಗೊಂಡಿದೆ. ಐಪಿಸಿಸಿ ಹಂತದಲ್ಲಿ ವಿಷಯಗಳ ಕುರಿತು ಕಾರ್ಯನಿರ್ವಹಣಾ ಜ್ಞಾನವನ್ನು ಒದಗಿಸುತ್ತದೆ. ವಿಶೇಷವಾಗಿ ಲೆಕ್ಕಪರಿಶೋಧನೆಯ ಜ್ಞಾನವನ್ನು ವೃದ್ಧಿಸುತ್ತದೆ. ಸಿಎ ಫೈನಲ್ ಕೋರ್ಸ್ ಫೈನಾನ್ಶಿಯಲ್ ರಿಪೋರ್ಟಿಂಗ್, ಮ್ಯಾನೇಜ್‌ಮೆಂಟ್ ಅಕೌಂಟಿಂಗ್, ಸ್ಟ್ರಾಟೆಜಿಕ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್, ಪ್ರೊಫೆಸನಲ್ ಎಥಿಕ್ಸ್, ಇನ್‌ಫಾರ್ಮೇಶನ್ ಸಿಸ್ಟಂಸ್ ಕಂಟ್ರೋಲ್ ಮತ್ತು ಅಡ್ವಾನ್ಸ್‌ಡ್ ಆಡಿಟಿಂಗ್ ವಿಷಯವನ್ನು ಒಳಗೊಂಡಿರುತ್ತದೆ. ಪಿಯುಸಿ ಪರೀಕ್ಷೆ ಆದ ಕೂಡಲೇ ಸಿಪಿಟಿ ಪರೀಕ್ಷೆ ಬರೆಯಬಹುದು. ಪಿಯುಸಿ ಫಲಿತಾಂಶ ಜೂನ್ ಜುಲೈನಲ್ಲಿ ಪ್ರಕಟವಾದರೆ ಅನಂತರ ಮೊದಲ ಪ್ರಯತ್ನವಾಗಿ ಡಿಸೆಂಬರ್‌ನಲ್ಲಿ ಸಿಪಿಟಿ ಬರೆಯಬಹುದು. ಅನಂತರ ಐಪಿಸಿಸಿ ಬರೆಯಬಹುದು. ಐಪಿಸಿಸಿ ಒಂದು ಗ್ರೂಪ್ ಪಾಸ್ ಆದ ಅನಂತರ ಆರ್ಟಿಕಲ್‌ಶಿಪ್ ಸೇರಬೇಕು. ಐಪಿಸಿಸಿ ಆದ ಅನಂತರ ಫೈನಲ್. ದ್ವಿತೀಯ ಪಿಯುಸಿ ಪೂರ್ಣಗೊಂಡ ಬಳಿಕ ಸಿಎ ಮುಗಿಸಲು ಕನಿಷ್ಠ 4 ವರ್ಷಗಳು ಬೇಕು. ಒಂದೇ ಪ್ರಯತ್ನದಲ್ಲಿ ಸಫಲರಾದರೆ 21 ಅಥವಾ 22ನೇ ವರ್ಷದಲ್ಲಿಯೂ ಸಿಎ ಆಗುವ ಅವಕಾಶವಿದೆ. ಪಿಯುಸಿಯಲ್ಲಿ ಯಾವುದೇ ವಿಷಯ ಅಧ್ಯಯನ ಮಾಡಿರಬಹುದು. ಬಿ.ಕಾಂನಲ್ಲಿ ಶೇ.50, ಬಿಎಸ್‌ಸಿ ಅಥವಾ ಬಿಬಿಎಂ, ಬಿ.ಎಯಲ್ಲಿ ಶೇ.50 ಅಂಕ ಗಳಿಸಿ ನೇರವಾಗಿ ಆರ್ಟಿಕಲ್‌ಶಿಪ್ ಕೂಡ ಮಾಡಬಹುದು. ಆಗ ಸಿಪಿಟಿಯ ಅಗತ್ಯವಿಲ್ಲ. ಅನಂತರ ಮೂರು ವರ್ಷಗಳು ಸಾಕು.
Related Articles
ಸಿಎ ಪಾಸ್ ಆಗದಿದ್ದರೂ ನಷ್ಟವಾಗುವುದಿಲ್ಲ. ಪ್ರಾಯೋಗಿಕ ಜ್ಞಾನ ದೊರೆಯುವುದರಿಂದ ಅವರಿಗೆ ನಿರುದ್ಯೋಗ ಕಾಡುವುದಿಲ್ಲ ಎನ್ನುತ್ತಾರೆ ನಗರದ ಹಿರಿಯ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್. ಸಿಎ ಕೋರ್ಸ್ ಕಠಿನವಾದರೂ ಅಸಾಧ್ಯವೇನಲ್ಲ. ಸಿಎ ಮಾಡಿ ಎಷ್ಟೇ ಜನ ಬಂದರು ಅವರಿಗೆ ಉದ್ಯೋಗದ ಕೊರತೆ ಇರುವುದಿಲ್ಲ. ಇಲ್ಲಿ ನಿರುದ್ಯೋಗ ಎಂಬುದೇ ಇಲ್ಲ. ಫೇಲಾದರೂ ಜಿಎಸ್‌ಟಿ ಫೈಲಿಂಗ್, ಅಕೌಂಟೆಂಟ್ ಕೆಲಸ ಮೊದಲಾದವುಗಳಲ್ಲಿ ಅವಕಾಶವಿದೆ. ಸಿಎ ಕೋರ್ಸ್ ಉತ್ಕೃಷ್ಟವಾದುದು ಎನ್ನುತ್ತಾರೆ ನಾಯಕ್.
Advertisement
ಕಡಿಮೆ ಖರ್ಚಿನ ಕೋರ್ಸ್ಪದವಿ ಆದ ಮೇಲೆ 3 ವರ್ಷಗಳ ಆರ್ಟಿಕಲ್‌ಶಿಪ್ ಒಂದು ಗುರುಕುಲ ಪದ್ಧತಿಯಂತೆ. ಅವರಿಗೆ ಎಲ್ಲ ರೀತಿಯ ಅಗತ್ಯ ಜ್ಞಾನ ದೊರೆಯುತ್ತದೆ. ಸಿಎಗಳಿಗೆ ವಿದೇಶದಲ್ಲಿಯೂ ಬೇಡಿಕೆ ಇದೆ. ಬೇರೆ ದೇಶಗಳೊಂದಿಗೆ ಒಡಂಬಡಿಕೆಯೂ ಇದೆ. ಅಲ್ಲಿಯೂ ಮಾನ್ಯತೆ ಇದೆ. ಗಲ್ಫ್ ದೇಶಗಳಲ್ಲಿಯೂ ಭಾರತೀಯ ಲೆಕ್ಕಪರಿಶೋಧಕರಿಗೆ ಬೇಡಿಕೆ ಇದೆ. ಪಿಯುಸಿ ಆದ ಮೇಲೆ ಹಗಲು ಆರ್ಟಿಕಲ್‌ಶಿಪ್ ಮಾಡಿ ರಾತ್ರಿ ಕಾಲೇಜಿನಲ್ಲಿ ಪದವಿ ಮಾಡಬಹುದು. ಪದವಿ ಆದ ಅನಂತರ ಆರ್ಟಿಕಲ್‌ಶಿಪ್ ಮಾಡುವವರಿಗೆ ಕೋಚಿಂಗ್ ಇರುತ್ತದೆ. ವಾರದ ಕೊನೆಗೂ ಕೋಚಿಂಗ್ ಇರುತ್ತದೆ. ಮೇ ಮತ್ತು ನವೆಂಬರ್‌ನಲ್ಲಿ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಆಗುತ್ತದೆ. ಮೇಯ ಫಲಿತಾಂಶ ಜುಲೈ ಕೊನೆಗೆ. ನವೆಂಬರ್‌ನ ಫಲಿತಾಂಶ ಜನವರಿಗೆ ಬರುತ್ತದೆ. ಇದು ಅತ್ಯಂತ ಕಡಿಮೆ ಖರ್ಚಿನ ಕೋರ್ಸ್. ಶಿಷ್ಯವೇತನ ಕೂಡ ದೊರೆಯುತ್ತದೆ. ಸಿಎ ಕೋರ್ಸ್‌ಗೆ 3 ವರ್ಷದ ಕೋರ್ಸ್‌ಗೆ 60,000 ರೂ. ಖರ್ಚಾಗಬಹುದು ಎನ್ನುತ್ತಾರೆ ಸಿಎ ಎಸ್.ಎಸ್.ನಾಯಕ್. ಹಣಕಾಸು ಆರೋಗ್ಯ ನೋಡಿ ಕೊಳ್ಳುವವರು
ವೈದ್ಯರು ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುತ್ತಾರೆ. ಸಿಎಗಳು ಉದ್ಯಮಿಗಳು, ದೇಶದ ಹಣಕಾಸಿನ ಆರೋಗ್ಯ ನೋಡಿಕೊಳ್ಳುತ್ತಾರೆ. ಸಿಎ ತೇರ್ಗಡೆಗೆ ನಿರಂತರ ಪರಿಶ್ರಮ, ಆಳವಾದ ಆಧ್ಯಯನ ಬೇಕು. ಬಾಯಿಪಾಠಕ್ಕಿಂತ ವಿಷಯದ ತಿಳಿವಳಿಕೆ ಅಗತ್ಯ. ಏಕಾಗ್ರತೆಯೂ ಮುಖ್ಯ. ವಾಣಿಜ್ಯ ವಿಷಯ ಕಲಿತವರಿಗೆ ಹೆಚ್ಚು ಅನುಕೂಲ. ಮಂಗಳೂರು ಶಾಖೆಯಲ್ಲಿ 700ಕ್ಕೂ ಅಧಿಕ ಮಂದಿ ಚಾರ್ಟರ್ಡ್ ಅಕೌಂಟೆಂಟ್ ತೇರ್ಗಡೆಯಾದವರು ನೋಂದಣಿಯಾಗಿದ್ದಾರೆ. 3,700 ಮಂದಿ ವಿದ್ಯಾರ್ಥಿಗಳು ನೋಂದಾಯಿಸಲ್ಪಟ್ಟಿದ್ದಾರೆ.
– ಸಿ.ಎ ಎಸ್.ಎಸ್. ನಾಯಕ್,
ಅಖೀಲ ಭಾರತ ಲೆಕ್ಕಪರಿಶೋಧಕರ ಸಂಸ್ಥೆ, ಮಂಗಳೂರು ಶಾಖೆಯ ಉಪಾಧ್ಯಕ್ಷ - ಸಂತೋಷ್ ಬೊಳ್ಳೆಟ್ಟು